ಬೆಂಗಳೂರು,ಜ.24-
ರಾಜ್ಯದಲ್ಲಿ ಪ್ರಸಕ್ತ ವಿಧಾನಸಭೆಯ ಅವಧಿ ಬರುವ ಮೇ ಮಾಸಾಂತ್ಯಕ್ಕೆ ಮುಕ್ತಾಯವಾಗುತ್ತಿದೆ. ಈ ಅವಧಿಯೊಳಗೆ ನೂತನ ವಿಧಾನಸಭೆ ಅಸ್ತಿತ್ವಕ್ಕೆ ಬರಬೇಕಿದೆ. ಈ ಹಿನ್ನೆಲೆಯಲ್ಲಿ Electionಯ ಪ್ರಕ್ರಿಯೆ ಆರಂಭಿಸಿರುವ ಚುನಾವಣಾ ಆಯೋಗ ಮತದಾರರ ಅಂತಿಮ ಪಟ್ಟಿಯನ್ನು ಪ್ರಕಟಿಸಿದೆ.
ಚುನಾವಣೆಯ ವೇಳಾಪಟ್ಟಿಯನ್ನು ಪ್ರಕಟಿಸುವ ಸಂಬಂಧ ಶಾಲಾ- ಕಾಲೇಜುಗಳ ಪರೀಕ್ಷೆ ಮುಗಿಯುವ ಕುರಿತಂತೆ ಶಿಕ್ಷಣ ಇಲಾಖೆಯಿಂದ ವರದಿಯನ್ನು ಪಡೆದುಕೊಂಡಿದೆ. ಹಾಗೆಯೇ ಸಂಭವನೀಯ ಮುಂಗಾರು ಕುರಿತಂತೆಯೂ ಆಯೋಗವು ಹವಾಮಾನ ಇಲಾಖೆಯಿಂದ ವರದಿಯನ್ನು ಪಡೆದಿದೆ. ಹವಾಮಾನ ಇಲಾಖೆಯು ಪ್ರಸಕ್ತ ವರ್ಷದ ಮಾನ್ಸೂನ್ ಮಾರುತಗಳು ಮೇ ಕೊನೆಯ ವಾರದಲ್ಲಿ ಕೇರಳ ಪ್ರವೇಶಿಸಲಿದ್ದು, ಜೂನ್ ಮೊದಲ ವಾರದಲ್ಲಿ ಕರ್ನಾಟಕ ಪ್ರವೇಶಿಸಲಿವೆ, ಅದರೊಳಗೆ ಚುನಾವಣೆಯ ಪ್ರಕ್ರಿಯೆಯನ್ನು ಪೂರ್ಣಗೊಳಿಸುವಂತೆ ಹವಾಮಾನ ಇಲಾಖೆ ವರದಿ ನೀಡಿದೆ.
ಅದೇ ರೀತಿ ಪ್ರಸಕ್ತ ಶೈಕ್ಷಣಿಕ ವರ್ಷದ ಪರೀಕ್ಷೆ ಸೇರಿದಂತೆ ಇತರೆ ಚಟುವಟಿಕೆಗಳು ಏಪ್ರಿಲ್ ಕೊನೆಯ ವಾರಕ್ಕೆ ಮುಕ್ತಾಯವಾಗಲಿವೆ. ಆನಂತರದಲ್ಲಿ ಶಾಲಾ ಕೊಠಡಿಗಳು ಹಾಗೂ ಶಿಕ್ಷಕರು, ಮತ್ತಿತರ ನೌಕರರು ಲಭ್ಯವಾಗಲಿದ್ದಾರೆ ಎಂದು ಹೇಳಿದೆ. ಈ ಎಲ್ಲಾ ವರದಿಗಳನ್ನು ಪಡೆದುಕೊಂಡಿರುವ ಆಯೋಗ, ರಾಜ್ಯ ಬಜೆಟ್ ಅಧಿವೇಶನದ ಬಗ್ಗೆ ಕಾಯುತ್ತಿದೆ. ಈ ಅಧಿವೇಶನವು ಫೆಬ್ರವರಿ ಅಂತ್ಯ ಇಲ್ಲವೇ ಮಾರ್ಚ್ ಮೊದಲ ವಾರಕ್ಕೆ ಮುಕ್ತಾಯವಾಗಲಿದೆ. ಆನಂತರದಲ್ಲಿ ವೇಳಾಪಟ್ಟಿಯನ್ನು ಪ್ರಕಟಿಸುವ ಸಾಧ್ಯತೆಯಿದೆ.
ಚುನಾವಣಾ ಆಯೋಗದ ಉನ್ನತ ಮೂಲಗಳ ಪ್ರಕಾರ, ಮೇ ಎರಡನೇ ವಾರದಲ್ಲಿ ಚುನಾವಣೆ ನಡೆಯಲಿದೆ. ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು,ಮೇ 7 ಕ್ಕೆ ಮೊದಲ ಹಂತ, ಮೇ 14 ಕ್ಕೆ ಎರಡನೇ ಹಂತದ ಮತದಾನ ನಡೆಯಲಿದ್ದು, ಮೇ 21ಕ್ಕೆ ಮತಗಳ ಎಣಿಕೆ ನಡೆಯಲಿದೆ. ಒಟ್ಟಾರೆ ಮೇ.23 ಕ್ಕೆ ಸಂಪೂರ್ಣ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ನೂತನ ವಿಧಾನಸಭೆ ಅಸ್ತಿತ್ವಕ್ಕೆ ಬರಲಿದೆ.
ಮತದಾನಕ್ಕೆ 45 ದಿನಗಳ ಮೊದಲು ವೇಳಾಪಟ್ಟಿಯನ್ನು ಪ್ರಕಟಿಸಬೇಕಿದ್ದು, ಇದಕ್ಕಾಗಿ ಆಯೋಗ ಎಲ್ಲಾ ಸಿದ್ದತೆಗಳನ್ನು ನಡೆಸಿದೆ.ವೇಳಾಪಟ್ಟಿ ಪ್ರಕಟವಾದ ತಕ್ಷಣವೇ ನೀತಿ ಸಂಹಿತೆ ಜಾರಿಗೆ ಬರಲಿದೆ. ಈ ಹಿನ್ನೆಲೆಯಲ್ಲಿ ಅಷ್ಟರೊಳಗೆ ನೂತನ ಕಾರ್ಯಕ್ರಮಗಳ ಚಾಲನೆ, ಉದ್ಘಾಟನೆ, ಶಂಕುಸ್ಥಾಪನೆ ಸೇರಿ ಎಲ್ಲಾ ಸರ್ಕಾರದ ಕಾರ್ಯಕ್ರಮಗಳನ್ನೂ ಮುಗಿಸಲು ಸರ್ಕಾರ ಮುಂದಾಗಿದೆ. ಇದರ ನೆಪದಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ,ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥ್ ನೇತೃತ್ವದಲ್ಲಿ ಹಲವು ಕಾರ್ಯಕ್ರಮಗಳನ್ನು ನಡೆಸಲು ಸರ್ಕಾರ ಮತ್ತು ಬಿಜೆಪಿ ಸಿದ್ಧತೆ ನಡೆಸಿವೆ.
ಈ ಹಿನ್ನೆಲೆಯಲ್ಲಿ ಫೆಬ್ರವರಿಯಲ್ಲಿ ಮೋದಿಯವರು ಎರಡರಿಂದ ಮೂರು ಬಾರಿ ಭೇಟಿ ನೀಡುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಜನ್ಮದಿನವಾದ ಫೆಬ್ರವರಿ 27ರಂದು ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣವನ್ನು ಮೋದಿಯವರು ಉದ್ಘಾಟನೆ ಮಾಡಲಿದ್ದಾರೆ.
ಬಳ್ಳಾರಿ ಜಿಲ್ಲೆಯ ಸಂಡೂರಿನಲ್ಲಿ ಗಣಿಗಾರಿಕೆ ಶಾಲೆಯೊಂದರ ಶಂಕುಸ್ಥಾಪನೆಯನ್ನೂ ಇದೇ ವೇಳೆ ಮೋದಿಯವರು ನೆರವೇರಿಸುವ ನಿರೀಕ್ಷೆಯಿದೆ. ಮೋದಿಯವರು ಪಾಲ್ಗೊಳ್ಳುವ ನಿರೀಕ್ಷೆಯಿರುವ ದಾವಣಗೆರೆಯಲ್ಲಿ ಬೃಹತ್ ಸಮಾವೇಶ ನಡೆಸುವ ಯೋಜನೆ ಇದ್ದು, ಚಿಕ್ಕಬಳ್ಳಾಪುರದ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಕೂಡ ಲೋಕಾರ್ಪಣೆಗೊಳ್ಳಲು ಮೋದಿಯವರ ಸಮಯಕ್ಕಾಗಿ ಕಾಯುತ್ತಿದೆ ಎಂದು ತಿಳಿದುಬಂದಿದೆ. ಫೆಬ್ರವರಿ ತಿಂಗಳಿನಲ್ಲಿ ತುಮಕೂರಿನ ಗುಬ್ಬಿ ತಾಲೂಕಿನ ಹಿಂದೂಸ್ತಾನ್ ಏರೋನಾಟಿಕಲ್ಸ್ ಲಿಮಿಟೆಡ್ ನ ಹೆಲಿಕಾಪ್ಟರ್ ಸೌಲಭ್ಯಕ್ಕೆ ಮೋದಿಯವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಬಹುನಿರೀಕ್ಷಿತ ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ಹೈವೇ ಬಹುತೇಕ ಸಿದ್ಧವಾಗಿದ್ದು, ಮಾರ್ಚ್ ತಿಂಗಳಿನಲ್ಲಿ ಉದ್ಘಾಟಿಸುವ ನಿರೀಕ್ಷೆಯಿದೆ.