ಬೆಂಗಳೂರು,ಡಿ.21: ಮುಂಬರುವ ಲೋಕಸಭಾ Electionಯಲ್ಲಿ ಅತ್ಯಂತ ಹೆಚ್ಚಿನ ಸ್ಥಾನ ಗೆಲ್ಲಬೇಕೆಂಬ ಮಹತ್ವಾಕಾಂಕ್ಷೆಯೊಂದಿಗೆ ಪಕ್ಷ ಸಂಘಟನೆ ಮಾಡಲಾಗುತ್ತಿದೆ. ಆದರೆ,ಕೆಲವು ನಾಯಕರ ಮಾತು ಮತ್ತು ಕೃತಿ ಇದಕ್ಕೆ ಅಡ್ಡಿಯಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ವರಿಷ್ಠರಲ್ಲಿ ಅಳಲು ತೋಡಿಕೊಂಡಿದ್ದಾರೆ.
ರಾಜ್ಯ ಬಿಜೆಪಿಗೆ ನೂತನ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡ ನಂತರ ಮೊದಲ ಬಾರಿಗೆ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿ ಕೃತಜ್ಞತೆ ಅರ್ಪಿಸಿದರು.
ನಂತರ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರನ್ನು ಭೇಟಿ ಮಾಡಿ, ಪಕ್ಷದಲ್ಲಿ ಬಂಡಾಯದ ದನಿ ಮೊಳಗಿಸುತ್ತಿರುವವರಿಗೆ ಕಡಿವಾಣ ಹಾಕಿ ಎಂದು ಮನವಿ ಮಾಡಿದರು ಎಂದು ಮೂಲಗಳು ತಿಳಿಸಿವೆ.
ಪಕ್ಷದ ಶಿಸ್ತು ಉಲ್ಲಂಘಿಸಿ ರಾಜ್ಯಾಧ್ಯಕ್ಷ ಹಾಗೂ ವಿಪಕ್ಷ ನಾಯಕರ ವಿರುದ್ಧ ಬಹಿರಂಗವಾಗಿಯೇ ಹೇಳಿಕೆಗಳನ್ನು ನೀಡುತ್ತಿರುವ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ವರಿಷ್ಠರಿಗೆ ಮೌಖಿಕವಾಗಿ ದೂರು ನೀಡಿದ್ದು, ಯತ್ನಾಳ್ ಅವರನ್ನು ನಿಯಂತ್ರಿಸದಿದ್ದರೆ ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗುತ್ತದೆ ಎಂಬುದನ್ನು ವರಿಷ್ಠರ ಗಮನಕ್ಕೆ ತಂದಿದ್ದಾರೆ.
ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಜತೆಗೆ ಮಾಜಿ ಸಚಿವ ವಿ. ಸೋಮಣ್ಣ ಹಾಗೂ ಕೆಲ ಶಾಸಕರುಗಳನ್ನು ದೆಹಲಿಗೆ ಕರೆಸಿ ಪಕ್ಷದ ನಾಯಕರ ವಿರುದ್ಧ ಬಹಿರಂಗ ಹೇಳಿಕೆ ನೀಡದಂತೆ ತಾಕೀತು ಮಾಡಿ ಎಂದು ವಿಜಯೇಂದ್ರ ಅವರು ವರಿಷ್ಠರಲ್ಲಿ ಮನವಿ ಮಾಡಿದ್ದಾರೆ.
ಪಕ್ಷದ ಶಿಸ್ತು ಉಲ್ಲಂಘಿಸುವ ಯಾರೇ ಆಗಲಿ ಅವರಿಗೆ ಕಡಿವಾಣ ಹಾಕಬೇಕು. ಇಲ್ಲದಿದ್ದರೆ ಪಕ್ಷ ಸಂಘಟನೆ ಕಷ್ಟವಾಗುತ್ತದೆ ಯತ್ನಾಳ್ ಅವರು ಪ್ರತಿಬಾರಿಯೂ ತಮಗೆ ರಾಷ್ಟ್ರೀಯ ನಾಯಕರೊಬ್ಬರ ಬೆಂಬಲ ಇದೆ ಎಂದು ಹೇಳುತ್ತಾರೆ. ಹಾಗಾಗಿ. ಯತ್ನಾಳ್ ಬೆನ್ನಿಗೆ ನಿಂತಿರುವ ರಾಜ್ಯ ಮೂಲದ ರಾಷ್ಟ್ರೀಯ ನಾಯಕರ ಜತೆಯೂ ಮಾತನಾಡಿ ಎಂದು ವಿಜಯೇಂದ್ರ ವರಿಷ್ಠರಲ್ಲಿ ಮನವಿ ಮಾಡಿದ್ದಾರೆಂದು ಹೇಳಲಾಗಿದೆ.
ಲೋಕಸಭಾ ಚುನಾವಣೆಗಳು ಹತ್ತಿರವಿರುವಾಗ ಪಕ್ಷಕ್ಕೆ ಮಾರಕವಾಗುವ ಹೇಳಿಕೆಗಳು ಬೇಡ, ಯಾರು ಪಕ್ಷದ ಶಿಸ್ತಿನ ಲಕ್ಷ್ಮಣ ರೇಖೇಯನ್ನು ದಾಟದಂತೆ ಕಟ್ಟುನಿಟ್ಟಿನ ಸೂಚನೆಯನ್ನು ನೀಡುವಂತೆಯೂ ವಿಜಯೇಂದ್ರ ಅವರು ಪಕ್ಷದ ವರಿಷ್ಠರಲ್ಲಿ ಕೋರಿದ್ದಾರೆ.