ಬೆಂಗಳೂರು – ರಾಜ್ಯದಲ್ಲಿ ಲೋಕಸಭೆ Electionಗೆ ಭರ್ಜರಿ ರಂಗು ಬಂದಿರುವ ಬೆನ್ನಲ್ಲೇ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಹಿರಿಯ ನಾಯಕ ಯಡಿಯೂರಪ್ಪ ಕುಟುಂಬ ಸಮೇತರಾಗಿ ಚಂಡಿಕಾ ಯಾಗ ನಡೆಸುವ ಮೂಲಕ ಯಶಸ್ಸು ಮತ್ತು ಶತ್ರುನಾಶಕ್ಕೆ ದೇವರ ಮೊರೆ ಹೊಕ್ಕಿದ್ದಾರೆ.
ತಮ್ಮ ಪುತ್ರ ವಿಜಯೇಂದ್ರ ಪಕ್ಷದ ರಾಜ್ಯಾಧ್ಯಕ್ಷರಾದ ನಂತರ ಎದುರುಸುತ್ತಿರುವ ಮೊದಲ ದೊಡ್ಡ ಚುನಾವಣೆ ಇದಾಗಿದೆ ಇದರಲ್ಲಿ ಅವರು ದೊಡ್ಡಮಟ್ಟದ ಯಶಸ್ಸು ಗಳಿಸುವ ಮೂಲಕ ಪ್ರಬಲ ನಾಯಕರಾಗಿ ಹೊರಹೊಮ್ಮಬೇಕು ಎಂದು ಕಾರ್ಯತಂತ್ರ ಮಾಡುತ್ತಿರುವ ಯಡಿಯೂರಪ್ಪ ಇದಕ್ಕಾಗಿ ಹಲವಾರು ಯೋಜನೆಗಳನ್ನು ಹಾಕಿದ್ದಾರೆ.
ಆದರೆ ಅವನ ಸ್ವಕ್ಷೇತ್ರ ಶಿವಮೊಗ್ಗ ಸೇರಿದಂತೆ ಹಲವಡೆ ಬಂಡಾಯದ ಧಗೆ ಕಾಣಿಸಿಕೊಂಡಿದೆ. ಯಡಿಯೂರಪ್ಪ ಅವರ ಆಪ್ತರೆನಿಸಿಕೊಂಡವರೇ ಇದೀಗ ಭಿನ್ನಮತದ ರಾಗ ಹಾಡುತ್ತಿದ್ದಾರೆ ಹೀಗಾಗಿ ಇದು ವಿಜಯೇಂದ್ರ ಪ್ರಬಲ ನಾಯಕನಾಗಿ ಹೊರಹೊಮ್ಮಲು ದೊಡ್ಡ ಅಡ್ಡಿ ಎಂದು ವ್ಯಾಖ್ಯಾನಿಸಲಾಗುತ್ತಿದೆ.
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನಿರೀಕ್ಷಿತ ಪ್ರಮಾಣದಲ್ಲಿ ಸಾಧನೆ ಮಾಡದೆ ಹೋದರೆ, ವಿಜಯೇಂದ್ರ ಪಕ್ಷದ ಅಧ್ಯಕ್ಷ ಸ್ಥಾನ ತೊರೆಯುವುದು ಅನಿವಾರ್ಯವಾಗಲಿದೆ ಇದಾದ ನಂತರ ಅವರ ರಾಜಕೀಯ ಭವಿಷ್ಯ ಮಸುಕಾದಲ್ಲಿದೆ ಎನ್ನುವುದು ರಾಜಕೀಯ ಪಂಡಿತರ ಲೆಕ್ಕಾಚಾರವಾಗಿದೆ. ಈ ಹಿನ್ನೆಲೆಯಲ್ಲಿ ಭಿನ್ನಮತ ಶಮನ ಸೇರಿದಂತೆ ಎಲ್ಲ ರೀತಿಯ ಚಟುವಟಿಕೆಗಳಲ್ಲೂ ತಾವೇ ಸಕ್ರಿಯರಾಗಿ ತೊಡಗಿಕೊಂಡಿರುವ ಯಡಿಯೂರಪ್ಪ ಇದೀಗ ಶತ್ರುನಾಶ ಮತ್ತು ಗೆಲುವಿನ ಉದ್ದೇಶಕ್ಕಾಗಿ ದೇವರ ಮೊರೆ ಹೋಗಿದ್ದಾರೆ.
ಕುಟುಂಬ ಸಮೇತರಾಗಿ ಚಿಕ್ಕಮಗಳೂರು ಜಿಲ್ಲೆಯ ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯ ಕ್ಷೇತ್ರದಲ್ಲಿ ವಿಶೇಷ ಹೋಮ ಹವನಗಳಲ್ಲಿ ತೊಡಗಿದ್ದಾರೆ.
ಶನಿವಾರ ಸಾಯಂಕಾಲ ಹೊರನಾಡಿಗೆ ಬಂದಿಳಿದ ಯಡಿಯೂರಪ್ಪ ಅವರ ಕುಟುಂಬ ದೇಗುಲದಲ್ಲಿ ರಥೋತ್ಸವ ಸೇವೆ ಮಾಡಿ, ವಿಶೇಷ ಪೂಜೆ ಸಲ್ಲಿಸಿತ್ತು. ಈ ರಥೋತ್ಸವ ಸೇವೆಯಲ್ಲಿ ಬಿ.ವೈ. ವಿಜಯೇಂದ್ರ ಸಹ ಭಾಗಿಯಾದರು. ಇದಾದ ನಂತರ ಎಲ್ಲರೂ
ಅನ್ನಪೂರ್ಣೇಶ್ವರಿ ಸನ್ನಿಧಿಯಲ್ಲಿ ಗಣಪತಿ ಹೋಮ ಮತ್ತು ಚಂಡಿಕಾ ಯಾಗ ನಡೆಸಿದರು. ಏಳಕ್ಕೂ ಹೆಚ್ಚು ಋತ್ವಿಜರಿಂದ ನಡೆದ ಯಾಗದ ಪೂರ್ಣಾಹುತಿಯಲ್ಲಿ ಸಂಸದ ಬಿ.ವೈ ರಾಘವೇಂದ್ರ ಹೊರತುಪಡಿಸಿ ಕುಟುಂಬದ ಎಲ್ಲ ಸದಸ್ಯರು ಭಾಗಿಯಾಗಿದ್ದರು.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಲೋಕಸಭೆ ಚುನಾವಣೆಯಲ್ಲಿ ರಾಜ್ಯದ ಎಲ್ಲಾ 28 ಕ್ಷೇತ್ರಗಳಲ್ಲೂ ನಾವು ಗೆಲ್ಲುತ್ತೇವೆ, ಗೆಲ್ಲುವ ವಿಶ್ವಾಸವಿದೆ ಎಂದು ಹೇಳಿದರು.
ಹೊರನಾಡು ಅನ್ನಪೂರ್ಣೇಶ್ವರಿ ದರ್ಶನ ಪಡೆದು ತುಂಬಾ ದಿನವಾಗಿತ್ತು. ರಾಜ್ಯದಲ್ಲಿ ಉತ್ತಮ ಮಳೆ, ಬೆಳೆಗಾಗಿ ಪೂಜೆ ಸಲ್ಲಿಸಿದ್ದೇವೆ. ರಾಜ್ಯದ ಸಮೃದ್ಧಿಗಾಗಿ ದೇವಿಯ ಮುಂದೆ ಪ್ರಾರ್ಥನೆ ಮಾಡಿದ್ದೇನೆ. ನರೇಂದ್ರ ಮೋದಿರನ್ನು ಮತ್ತೆ ಪ್ರಧಾನಿ ಮಾಡುವ ಚುನಾವಣೆ ಇದು. ಅನ್ನಪೂರ್ಣೇಶ್ವರಿ ಆಶೀರ್ವಾದದಿಂದ ನಾವು ಯಶಸ್ವಿಯಾಗುತ್ತೇವೆ ಎಂದು ತಿಳಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಮಾತನಾಡಿ ದೇಶವನ್ನು ಮುನ್ನಡೆಸುತ್ತಿರುವ ಪ್ರಧಾನಿ ಮೋದಿಗೆ ಮತ್ತಷ್ಟು ಶಕ್ತಿ ಬರಲಿ, ಕರ್ನಾಟಕದಲ್ಲಿ ಹೆಚ್ಚು ಸ್ಥಾನ ಗೆದ್ದು ಅವರ ಕೈ ಬಲಪಡಿಸಲು ಅನ್ನಪೂರ್ಣೇಶ್ವರಿ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದೇವೆ ಎಂದು ಹೇಳಿದರು.
ಕೇಂದ್ರ ಸರ್ಕಾರದ ಬರ ಪರಿಹಾರಕ್ಕಾಗಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಿರುವ ವಿಚಾರವಾಗಿ ಮಾತನಾಡಿದ ಅವರು, ಇಂತ ಕೆಟ್ಟ ಪರಿಸ್ಥಿತಿ ರಾಜ್ಯದ ಮುಖ್ಯಮಂತ್ರಿಗೆ ಬರಬಾರದು. ಸರ್ಕಾರ ತನ್ನ ವೈಪಲ್ಯ ಮುಚ್ಚಿಕೊಳ್ಳಲು ಈ ರೀತಿ ನಡೆದುಕೊಳ್ಳುತ್ತಿದೆ. ಚುನಾವಣೆ ಘೋಷಣೆ ಬಳಿಕ ಮುಖ್ಯಮಂತ್ರಿಗಳು ಸುಪ್ರೀಂ ಕೋರ್ಟ್ ಮೊರೆ ಹೋಗುವ ನಾಟಕವಾಡಿದ್ದಾರೆ. ಅವರಿಗೆ ಇದು ಶೋಭೆ ತರಲ್ಲ. ಮುಖ್ಯಮಂತ್ರಿಗಳಿಗೆ ಹಣಕಾಸಿನ ವ್ಯವಸ್ಥೆಯನ್ನು ಸರಿಯಾಗಿ ನಿರ್ವಹಿಸಲು ಆಗುತ್ತಿಲ್ಲ ಎಂದು ವಾಗ್ದಾಳಿ ಮಾಡಿದರು.