ಹೊನ್ನಾಳಿ ಶಾಸಕ ರೇಣುಕಾಚಾರ್ಯ ಅವರ ತಮ್ಮನ ಮಗ ಎಂ.ಆರ್. ಚಂದ್ರಶೇಖರ್ ಸಾವಿನ ಪ್ರಕರಣ ದಿನಕ್ಕೊಂದು ಸ್ವರೂಪ ಪಡೆದುಕೊಳ್ಳುತ್ತಿದೆ.ಹಲವು ಆಯಾಮಗಳಲ್ಲಿ ತನಿಖೆ ನಡೆಸುತ್ತಿರುವ ಪೊಲೀಸರ ತಂಡ ಮೃತರ ಸ್ನೇಹಿತರು, ಆಪ್ತರು, ಬಂಧುಗಳಿಂದ ಹಲವಾರು ಮಾಹಿತಿ ಸಂಗ್ರಹಿಸಿದ್ದಾರೆ.
ತನಿಖಾ ತಂಡಕ್ಕೆ ಹಲವರು ಮೃತ ಚಂದ್ರಶೇಖರ್ ಗೌರಿಗದ್ದೆಯ ವಿನಯ್ ಗುರೂಜಿ ಜೊತೆ ಅಪಾರ ನಂಟು ಹೊಂದಿದ್ದರು. ನಿಯಮಿತವಾಗಿ ಅವರನ್ನು ಭೇಟಿ ಮಾಡುತ್ತಿದ್ದರು.ಪ್ರತಿಯೊಂದು ವಿಷಯ ಗಳಲ್ಲೂ ವಿನಯ್ ಗುರೂಜಿ ಸಲಹೆ,ಅಭಿಪ್ರಾಯ ಕೇಳಿಯೇ ಮುಂದುವರೆಯುತ್ತಿದ್ದರು ಎಂಬ ಮಾಹಿತಿ ನೀಡಿದರೆ,ಅವರ ಆಪ್ತರು ಮೃತ ಚಂದ್ರಶೇಖರ ಅನೇಕ ಬಾರಿ ಪ್ರತ್ಯೇಕವಾಗಿ ಗುರೂಜಿ ಜೊತೆ ಮಾತನಾಡುತ್ತಿದ್ದರು ಆಗ ಬೇರೆ ಯಾರಿಗೂ ಪ್ರವೇಶವಿರುತ್ತಿರಲಿಲ್ಲ ಎಂದಿರುವುದಾಗಿ ತನಿಖಾ ತಂಡದ ಮೂಲಗಳು ತಿಳಿಸಿವೆ.
ಮೃತ ಚಂದ್ರಶೇಖರ್ ಕೊನೆಯ ಬಾರಿ ತಮ್ಮ ಮನೆಯಿಂದ ಹೊರ ಹೋಗುವಾಗ ಹೇಳಿದ್ದು,ತಾನು ಗೌರಿಗದ್ದೆಗೆ ಹೋಗುತ್ತಿದ್ದೇನೆ.ಗುರೂಜಿ ಅವರನ್ನು ಭೇಟಿಯಾಗಬೇಕಿದೆ ಎಂದು ಹೋದವ ಪತ್ತೆಯಾಗಿದ್ದು ಶವವಾಗಿ.ಹೀಗಾಗಿ ಈ ಪ್ರಕರಣ ಇದೀಗ ತೀವ್ರ ಕುತೂಹಲ ಕೆರಳಿಸಿದೆ.ಚಂದ್ರಶೇಖರ ಗೌರಿಗದ್ದೆಗೆ ಯಾಕೆ ಬಂದಿದ್ದರು. ಅಲ್ಲಿಂದ ಎಲ್ಲಿ ಹೋದರು, ನಂತರ ಏನಾಯಿತು ಎಂಬ ಹಲವು ಪ್ರಶ್ನೆಗಳು ಈಗ ಎದ್ದಿವೆ.
ಇದರ ಬೆನ್ನಲ್ಲೇ ತನಿಖಾ ತಂಡವು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಗೌರಿಗದ್ದೆಗೆ ಭೇಟಿ ನೀಡಿ ವಿನಯ್ ಗುರೂಜಿ ಆಶ್ರಮದಲ್ಲಿ ಮಾಹಿತಿ ಕಲೆ ಹಾಕಿದೆ. ಚಂದ್ರಶೇಖರ್ ಅವರು ಗೌರಿಗದ್ದೆಗೆ ಬಂದುಹೋಗಿದ್ದ ಕುರಿತು ವಿವರ ಪಡೆದಿದ್ದಾರೆ. ಸಿ.ಸಿ. ಟಿವಿ ಕ್ಯಾಮೆರಾ ಫೂಟೇಜ್ ಸಂಗ್ರಹಿಸಿದ್ದಾರೆ ಎಂದು ತನಿಖಾ ತಂಡದ ಮೂಲಗಳು ತಿಳಿಸಿವೆ
ವಿನಯ್ ಗುರೂಜಿ ಆಶ್ರಮಕ್ಕೆ ಚಂದ್ರಶೇಖರ್ ಅವರು ಅಂದು ರಾತ್ರಿ 9 ಗಂಟೆಯ ಸುಮಾರಿಗೆ ಆಶ್ರಮಕ್ಕೆ ಬಂದಿದ್ದರು. ಸುಮಾರು 9.40ರವರೆಗೂ ವಿನಯ್ ಗುರೂಜಿಗಾಗಿ ಕಾದಿದ್ದರು.ಅವರನ್ನು ಭೇಟಿ ಮಾಡಿದ ಗುರೂಜಿ ಯಾಕೋ ಲೇಟ್ ಆಗಿ ಬಂದೆ, ಇದು ಬರುವ ಟೈಮಾ ಎಂದು ಸಲುಗೆಯಿಂದಲೇ ಚಂದ್ರಶೇಖರ್ಗೆ ಪ್ರಶ್ನಿಸಿದ್ದರಂತೆ
ಚಂದ್ರಶೇಖರ್ ಅವರು ಆಗಾಗ ಆಶ್ರಮಕ್ಕೆ ಬರುತ್ತಿದ್ದ ಕಾರಣ ಗುರೂಜಿ ಜೊತೆಗೆ ಸಲುಗೆಯಿಂದ ಇದ್ದರು ಎಂದು ಅವರ ಆಪ್ತರು ಪೊಲೀಸರಿಗೆ ತಿಳಿಸಿದ್ದಾರೆ
ವಿನಯ್ ಗುರೂಜಿ ಜೊತೆ ಮಾತಾಡಿ ವಾಪಸ್ ತೆರಳುತ್ತಿದ್ದ ವೇಳೆ ಚಂದ್ರಶೇಖರ್ ಅವರನ್ನು ಕರೆದು ವಿನಯ್ ಗುರೂಜಿ ಹೀಗೆ ಹೇಳಿದ್ದರಂತೆ, ಈಗಾಗಲೇ ತಡವಾಗಿದೆ, ಜಾಗ್ರತೆಯಿಂದ ಹೋಗಿ ಎಂದು ಎಚ್ಚರಿಕೆ ಹೇಳಿದ್ದರು. ನಂತರ ರಾತ್ರಿ ಸುಮಾರು 9.45ರ ಹೊತ್ತಿಗೆ ಚಂದ್ರಶೇಖರ್ ಅವರು ಆಶ್ರಮದಿಂದ ಸ್ನೇಹಿತ ಕಿರಣ್ ಜೊತೆಗೆ ಹೊರ ಹೊರಟರು. ರಾತ್ರಿ 10 ಗಂಟೆಯ ವೇಳೆಯಲ್ಲಿ ಚಂದ್ರಶೇಖರ್ ಅವರಿದ್ದ ಕಾರು ಕೊಪ್ಪ ಬಸ್ ನಿಲ್ದಾಣದಿಂದ ದಾಟಿ ಹೋಗಿರುವ ದೃಶ್ಯ ಕೂಡ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.ಈ ಎಲ್ಲವನ್ನೂ ಪೊಲೀಸರು ವಶ ಪಡಿಸಿಕೊಂಡಿದ್ದಾರೆ.
ಅಂದಹಾಗೆ ವಿನಯ್ ಗುರೂಜಿ ಹೆಸರು ಇತ್ತೀಚೆಗೆ ರಾಜ್ಯದಲ್ಲಿ ಪ್ರಮುಖವಾಗಿ ಕೇಳಿಬರುತ್ತಿದೆ.ಕೆಲ ಕಾಲ ತೀರ್ಥಹಳ್ಳಿಯ ಕಾಲೇಜೊಂದರಲ್ಲಿ ಕೆಲಸ ಮಾಡುತ್ತಿದ್ದ ಇವರು ಕೆಲಸಕ್ಕೆ ಗುಡ್ ಬೈ ಹೇಳಿ
ಚಿಕ್ಕಮಗಳೂರು ಜಿಲ್ಲೆ, ಹರಿಹರ ಪುರ ತಾಲೂಕು ಗೌರಿಗದ್ದೆ ಎಂಬ ಹಳ್ಳಿಯಲ್ಲಿ ಸ್ವರ್ಣ ಪೀಠಿಕೇಶ್ವರಿ ದತ್ತಾಶ್ರಮದ ಹೆಸರಿನಲ್ಲಿ ಆಶ್ರಮವೊಂದನ್ನು ಆರಂಭಿಸಿದ್ದರು ಆರಂಭದಲ್ಲಿ ಗುಡಿಸಲಿನಂತಿದ್ದ ಈ ಆಶ್ರಮ ಈಗ ಬೃಹದಾಕಾರವಾಗಿ ಬೆಳೆದಿದೆ
ಅನೇಕ ರಾಜಕಾರಣಿಗಳು ಹಾಗೂ ಗಣ್ಯರು ಅವಧೂತ ವಿನಯ್ ಗುರೂಜಿಯನ್ನು ಭೇಟಿಯಾಗ್ತಾರೆ. ಗುರೂಜಿ ಆಶೀರ್ವಾದ ಪಡೆದು ಹೋಗುತ್ತಾರೆ. ಕುಮಾರಸ್ವಾಮಿ, ನಿಖಿಲ್, ಡಿಕೆ ಶಿವಕುಮಾರ್, ಯಡಿಯೂರಪ್ಪ ಸೇರಿದಂತೆ ಅನೇಕ ರಾಜಕಾರಣಿಗಳು ವಿನಯ್ ಗುರೂಜಿ ಅವರನ್ನು ಭೇಟಿಯಾಗುತ್ತಾರೆ.ಅಷ್ಟೇ ಏಕೆ ಗೃಹ ಸಚಿವರಾದ ನಂತರ ಅರಗ ಜ್ಞಾನೇಂದ್ರ ಮೊದಲಿಗೆ ಭೇಟಿ ನೀಡಿದ್ದೇ ಈ ವಿನಯ್ ಗುರೂಜಿ ಆಶ್ರಮಕ್ಕೆ.ಇನ್ನೂ
ರಾಜಕಾರಣಿಗಳು ನಡೆಸೋ ಪೂಜೆ, ಸಮಾರಂಭಗಳಲ್ಲಿ ಸಹ ವಿನಯ್ ಗುರೂಜಿ ಭಾಗಿಯಾಗುತ್ತಾರೆ.ಭವಿಷ್ಯ ಹೇಳುತ್ತಾರೆ ಅದನ್ನು ಹಲವರು ನಂಬುತ್ತಾರೆ ತಮ್ಮ ಬಗ್ಗೆ ಅವರು ಹೇಳಿದಂತೆ ಆಗಿದೆ ಎಂದು ಪ್ರಶಂಸಿಸುವರು ಕೆಲವರಾದರೆ ಅದೇ ರೀತಿ ತೆಗಳುವವರೂ ಅನೇಕರಿದ್ದಾರೆ.ಅದೇನೆ ಇರಲಿ ಇದೀಗ ಚಂದ್ರಶೇಖರ ಸಾವಿನ ಸುತ್ತ ಅನುಮಾನದ ಹುತ್ತ ಬೆಳೆದಿದ್ದು ಸತ್ಯ ಸಂಗತಿ ಯಾವಾಗ ಬಹಿರಂಗವಾಗಲಿದೆ ಎಂದು ಎಲ್ಲರೂ ಕಾಯುತ್ತಿದ್ದಾರೆ