ಯುದ್ಧ ಮಾಡುತ್ತಾ ಆಕಡೆ ಗೆಲುವೂ ಕಾಣದೆ ಸೋಲೂ ಇಲ್ಲದೆ ಎರಡು ವರ್ಷಗಳಿಂದ ಹೆಣಗಾಡುತ್ತಿರುವ ರಷ್ಯಾ ದೇಶದಲ್ಲಿ ಯುದ್ಧಕ್ಕೆ ರಷ್ಯನ್ ಯುವಕರನ್ನು ಬಲವಂತವಾಗಿ ಕಳಿಸಲು ಸಾಧ್ಯವಾಗುತ್ತಿಲ್ಲ. ಆ ದೇಶದಲ್ಲಿ ಅದಕ್ಕೆ ಬಹಳಷ್ಟು ವಿರೋಧ ವ್ಯಕ್ತವಾಗುತ್ತಿದೆ. ಯುದ್ಧಕ್ಕೆ ಹೋಗುವುದೆಂದರೆ ದೇಶಸೇವೆಗೆ ಹೋಗುವುದು ಎಂದೆಲ್ಲ ತೋರಿಸಿದ ಜಾಹೀರಾತುಗಳು ಆರಂಭದಲ್ಲಿ ಯುವಕರನ್ನು ಆರ್ಮಿಗೆ ಆಕರ್ಷಿಸಿತಾದರೂ ಯುದ್ಧದಲ್ಲಿ ಆಗಿರುವ ಅನಾಹುತಗಳನ್ನು ನೋಡಿ ಆರ್ಮಿಯಲ್ಲಿ ಸರ್ಕ್ರಿಯರಾಗಿರುವವರ ಪತ್ನಿಯರೂ ಕೂಡ ಈಗ ಪ್ರತಿಭಟಿಸಲು ಆರಂಭಿಸಿದ್ದಾರೆ. ಇದೆಲ್ಲದರ ಮಧ್ಯೆ ರಷ್ಯಾ ನೇಪಾಳಿ ಯುವಕರನ್ನು ತನ್ನ ಯುದ್ಧಕ್ಕೆ ಯೋಧರನ್ನಾಗಿ ಭರ್ತಿಮಾಡಲು ಉತ್ಸುಕವಾಗಿದೆ.
ಒಂದು ಅಂಕಿ ಅಂಶ ಪ್ರಕಾರ ಈಗಾಗಲೇ 15000 ಕೊ ಹೆಚ್ಚು ಮಂದಿ ನೇಪಾಳಿ ಗಂಡಸರು ರಷ್ಯಾದ ಪರ ಯುಕ್ರೇನ್ ನಲ್ಲಿ ಹೋರಾಡುತ್ತಿದ್ದಾರೆ ಎನ್ನುವ ಮಾಹಿತಿ ಹೊರಬಂದಿದೆ. ‘ನಾವು ಇಷ್ಟಪಟ್ಟು ಈ ಯುದ್ಧ ಮಾಡುತ್ತಿಲ್ಲ ಆದರೆ ನೇಪಾಳದಲ್ಲಿ ಆರ್ಥಿಕ ಪರಿಸ್ಥಿತಿ ಹಾಳಾಗಿದ್ದು ಉದ್ಯೋಗ ದೊರೆಯುವ ಸಾಧ್ಯತೆ ಇಲ್ಲದ ಕಾರಣ ಇಂಥಾ ಕೆಲಸವನ್ನು ಒಪ್ಪಿಕೊಂಡಿದ್ದೇವೆ’ ಎಂದು ರಷ್ಯಾದಿಂದ ಹಿಂದಿರುಗಿರುವ ಅನೇಕ ಮಂದಿ ಅವರನ್ನು ಭೇಟಿಮಾಡಿದ ಪತ್ರಕರ್ತರಿಗೆ ಹೇಳಿಕೊಂಡಿದ್ದಾರೆ.
ಯುದ್ಧದಲ್ಲಿ ಭಾಗವಹಿಸಲು ಅನೇಕರಿಗೆ ತಿಂಗಳಿಗೆ ಸುಮಾರು 1.5 ರಿಂದ 3 ಲಕ್ಷ ರೂಪಾಯಿಯಷ್ಟು ಸಿಗುತ್ತಿರುವುದು ಅವರಿಗೆ ನೇಪಾಳದಂಥ ದೇಶದಲ್ಲಿ ಉತ್ತಮ ಆದಾಯವಾಗಿ ಕಾಣುತ್ತಿದೆ. ಆದರೆ ಈಗಾಗಲೇ ಅನೇಕ ನೇಪಾಳಿಯರು ಯುದ್ಧದಲ್ಲಿ ಭೀಕರ ಗಾಯಗೊಂಡಿದ್ದು ಕೆಲವರು ಅಂಗಾಂಗಗಳನ್ನೂ ಕಳೆದುಕೊಂಡಿದ್ದಾರೆ. ಎಷ್ಟು ಮಂದಿ ನೇಪಾಳಿಯರು ರಷ್ಯಾದ ಯುದ್ಧದಲ್ಲಿ ಪ್ರಾಣ ಕಳೆದು ಕೊಂಡಿದ್ದಾರೆ ಎನ್ನುವ ಬಗ್ಗೆ ಸ್ಪಷ್ಟವಾದ ಅಂಕಿ ಅಂಶಗಳಿಲ್ಲ. ಹಾಗೇ ಕೆಲವು ನೇಪಾಳೀಯರು ಯುದ್ಧ ಕೈದಿಗಳಾಗಿ ಯುಕ್ರೇನ್ ನಿಂದ ಸೆರೆಹಿಡಿಯಲ್ ಪಟ್ಟಿದ್ದಾರೆ. ಇದೆಲ್ಲದರ ಬಗ್ಗೆ ನೇಪಾಳ ಸರ್ಕಾರ ಕ್ಕೆ ಆಸಕ್ತಿ ಇದ್ದಂತಿಲ್ಲ.
ಅದು ಹಾಗಿರಲಿ, ಈಗ ರಷ್ಯಾದ ರೀತಿಯಲ್ಲೇ ಯುದ್ಧದಲ್ಲಿ ನಿರತವಾಗಿರುವ ಇಸ್ರೇಲ್ ಕೂಡ ಕೆಲಸವಿಲ್ಲದ ಭಾರತೀಯ ಗಂಡಸರನ್ನು ದೊಡ್ಡ ಸಂಬಳ ಮತ್ತು ಇಸ್ರೇಲಿ ಪಾಸ್ ಪೋರ್ಟ್ ಕೊಡುವ ಆಮಿಷದ ಮೂಲಕ ಆಕರ್ಷಿಸುತ್ತಿರುವ ಸುದ್ದಿ ಕೆಲ ತಿಂಗಳುಗಳಿಂದ ಹೊರಬರುತ್ತಿದೆ. ಈಗಾಗಲೇ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಮಂದಿ ಭಾರತೀಯ ಗಂಡಸರು ಗಾಝ ಪಟ್ಟಿಯಲ್ಲಿ ಫೆಲೆಸ್ತೀನಿಯರ ಬದಲಾಗಿ ಅಲ್ಲಿನ ಕಟ್ಟಡ ಕಾಮಗಾರಿಗಳಲ್ಲಿ ತೊಡಗಿಕೊಳ್ಳಲು ಇಸ್ರೇಲ್ ನತ್ತ ಮುಖ ಮಾಡಿದ್ದಾರೆ. ಸಾವಿರಾರು ಮಂದಿ ಈಗಾಗಲೇ ಇಸ್ರೇಲ್ ತಲುಪಿದ್ದಾರೆ ಕೂಡ ಎಂದು ವರದಿಯಾಗಿದೆ. ತನ್ನ ದೇಶದ ಯುವಕರು ಯುದ್ಧದಲ್ಲಿ ಸಾಯುವುದನ್ನು ಇಚ್ಛಿಸದ ಇಸ್ರೇಲ್ ಯಾವಾಗ ಮತ್ತು ಹೇಗೆ ಭಾರತೀಯ ಗಂಡಸರನ್ನು ಕೆಲಸದ ಆಸೆ ತೋರಿಸಿ ತನ್ನ ಯುದ್ಧ ಕಾರ್ಯಗಳಲ್ಲಿ ಬಳಸಿಕೊಳ್ಳುತ್ತದೊ ಎಂದು ನೋಡಬೇಕಾಗಿದೆ