ಬೆಂಗಳೂರು, ಮಾ 6: ಬೆಂಗಳೂರು ನಗರದ ಬೃಹತ್ ಕಟ್ಟಡ ಸಮುಚ್ಚಯಗಳ ತ್ಯಾಜ್ಯ ನೀರನ್ನು ಸಂಸ್ಕರಿಸಿ, ಶುದ್ಧೀಕರಿಸಿ ಅದನ್ನು ಪುನರ್ಬಳಕೆಗಾಗಿ ಮಾರಾಟ ಮಾಡಲು ಹೊಸ ಮಾನದಂಡ ಬಿಡುಗಡೆಗೆ ರಾಜ್ಯ ಸರ್ಕಾರ ನಿರ್ಧರಿಸಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ (Eshwar Khandre) ಮಾರಾಟದ ಮಾರ್ಗಸೂಚಿಗಳನ್ನು ರೂಪಿಸಿ 1 ವಾರದೊಳಗೆ ಸರ್ಕಾರಿ ಆದೇಶ ಹೊರಡಿಸಲಾಗುವುದು ಎಂದು ಹೇಳಿದರು.
ಬೆಂಗಳೂರಿನಲ್ಲಿ ಜನಸಂಖ್ಯೆ ಹೆಚ್ಚಳವಾಗುತ್ತಿದ್ದು, ಅದಕ್ಕೆ ಅನುಗುಣವಾಗಿ ನೀರು ಪೂರೈಕೆ ಕಷ್ಟಸಾಧ್ಯವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜಲಮೂಲಗಳ ರಕ್ಷಣೆ ಮತ್ತು ನೀರಿನ ಮರುಬಳಕೆಗೆ ಆದ್ಯತೆ ನೀಡುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು.
ಸೂಕ್ತ ರೀತಿಯಲ್ಲಿ ನೀರು ಸಂಸ್ಕರಿಸಿದರೆ ಬೆಂಗಳೂರು ನಗರದಲ್ಲಿ ನಿತ್ಯ 250ರಿಂದ 300 ಎಂ.ಎಲ್.ಡಿ.ಯಷ್ಟು ನೀರು ಮರು ಬಳಕೆಗೆ ಲಭಿಸಲಿದೆ. ಆದರೆ ಈ ನೀರನ್ನು ಯಾವುದೇ ಕಾರಣಕ್ಕೂ ಕುಡಿಯಲು, ಔಷಧ ಮತ್ತು ಆಹಾರ ತಯಾರಿಕೆಗೆ ಬಳಸದಂತೆ ನಿರ್ಬಂಧಿಸಲಾಗುವುದು ಎಂದು ತಿಳಿಸಿದರು.
ಮಾರಾಟ ಮಾಡಲಾಗುವ ಮರುಬಳಕೆ ನೀರಿನ ಶುದ್ಧತೆಯ ಜವಾಬ್ದಾರಿ ಕಟ್ಟಡ ಸಮುಚ್ಚಯಗಳ ಸಂಘಗಳು, ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ ಹಾಗೂ ಬಿಡಬ್ಲ್ಯುಎಸ್.ಎಸ್.ಬಿ ಮತ್ತಿತತರೆ ಪೂರಕ ಸಂಸ್ಥೆಗಳ ಮೇಲೂ ಇರುತ್ತದೆ ಎಂದರು.
ಬಹುಮಹಡಿ ಕಟ್ಟಡಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯ ಜಲವನ್ನು ವೈಜ್ಞಾನಿಕವಾಗಿ ಸಂಸ್ಕರಿಸಿ ಆ ನೀರನ್ನು ಹತ್ತಿರದ ಕೆರೆಗಳಿಗೆ ಕೊಳವೆಯ ಮೂಲಕ ಹರಿಸಿದರೆ ಕೆರೆಗಳಲ್ಲಿ ನೀರೂ ಇರುತ್ತದೆ ಜೊತೆಗೆ ಅಂತರ್ಜಲ ಮಟ್ಟವೂ ಹೆಚ್ಚುತ್ತದೆ. ಈ ಕುರಿತಂತೆ ಇಂದು ತಮ್ಮ ಕಚೇರಿಯಲ್ಲಿ ಬಿಬಿಎಂಪಿ, ಬಿಡಿಎ, ನಗರಾಭಿವೃದ್ಧಿ ಇಲಾಖೆ, ಪರಿಸರ ಇಲಾಖೆಯ ಅಧಿಕಾರಿಗಳು ಮತ್ತು ಕಟ್ಟಡ ಸಮುಚ್ಛಯಗಳ ನಿವಾಸಿಗಳ ಸಂಘದ ಪ್ರತಿನಿಧಿಗಳು ಹಾಗೂ ಬಾಧ್ಯಸ್ಥರೊಂದಿಗೆ ನಡೆದ ಸಭೆಯಲ್ಲಿ ಸೂಚಿಸಲಾಗಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಹಕ್ಕಿಪಕ್ಷಿಗಳು ಹೆಚ್ಚಾಗಿ ಇರುವ ಮತ್ತು 2.25 ಹೆಕ್ಟೇರ್ ಗಿಂತ ಹೆಚ್ಚು ವ್ಯಾಪ್ತಿಯ ಕೆರೆ, ಕುಂಟೆಗಳನ್ನು ಜೌಗು ಭೂಮಿಯೆಂದು ಗುರುತಿಸಲು ತೀರ್ಮಾನಿಸಲಾಗಿದೆ. ಇಂತಹ 16,700ಕ್ಕೂ ಅಧಿಕ ಜೌಗು ಭೂಮಿ ತಾಣಗಳನ್ನು ಈಗಾಗಲೇ ಗುರುತಿಸಲಾಗಿದ್ದು,ಸಂಬಂಧಿತ ಪಂಚಾಯ್ತಿ, ನಗರ ಸ್ಥಳೀಯ ಸಂಸ್ಥೆಗಳು ಹಾಗೂ ವಿವಿಧ ಇಲಾಖೆಗಳ ಅನುಮತಿ ಪಡೆದು ಅದನ್ನು ಅಧಿಕೃತವಾಗಿ ಜೌಗು ಭೂಮಿ ಪ್ರದೇಶ ಎಂದು ಘೋಷಿಸಲಾಗುವುದು ಎಂದರು.
2017ರಲ್ಲಿ ಕೇಂದ್ರ ಸರ್ಕಾರ ಜೌಗು ಪ್ರದೇಶ ಘೋಷಣೆ ಮತ್ತು ಅಭಿವೃದ್ದಿಗೆ ಮಾನದಂಡಗಳನ್ನು ಪ್ರಕಟಿಸಿ ಅಧಿಸೂಚನೆ ಹೊರಡಿಸಿದ್ದು, ಈವರೆಗೆ ರಾಜ್ಯದಲ್ಲಿ ಜೌಗು ಭೂಮಿಯ ಅಧಿಕೃತ ಪ್ರಕಟಣೆ ಆಗಿರಲಿಲ್ಲ. ಹೀಗಾಗಿ ತಾವು ಈ ಬಗ್ಗೆ ಆಸಕ್ತಿ ತೋರಿದ್ದು, ಕೂಡಲೇ ತಜ್ಞರ ತಂಡ ರೂಪಿಸಿ ಜೌಗು ಭೂಮಿ ಪ್ರಾಧಿಕಾರವನ್ನು ಸಕ್ರಿಯಗೊಳಿಸಲು ಸೂಚಿಸಲಾಗಿದೆ ಎಂದರು.
ಇಂದು ಬಿಡುಗಡೆ ಮಾಡಲಾದ ಅಂತರ್ಜಾಲ ತಾಣದಲ್ಲಿ ಸಾರ್ವಜನಿಕರಿಗೆ ಜೌಗು ಪ್ರದೇಶ ಘೋಷಣೆಯಿಂದ ಆಗುವ ಪ್ರಯೋಜನಗಳ ಬಗ್ಗೆ, ಕಾಯಿದೆ, ನಿಯಮ ನಿಬಂಧನೆಗಳ ಕುರಿತಂತೆ ಮಾಹಿತಿ ನೀಡುವುದರ ಜೊತೆಗೆ ಜೌಗು ಭೂಮಿಯಲ್ಲಿ ತ್ಯಾಜ್ಯ ಸುರಿಯದಂತೆ ಜಾಗೃತಿ ಮೂಡಿಸುವ ಕಾರ್ಯ ಮಾಡಲಾಗುವುದು ಎಂದರು.
ರಾಜ್ಯದಲ್ಲಿ 4 ತಾಣಗಳನ್ನು ರಾಮ್ಸರ್ ತಾಣಗಳೆಂದು ಘೋಷಿಸಲಾಗಿದೆ. ಅದೇ ರೀತಿ ನಾವು ಜೌಗು ಭೂಮಿಗಳನ್ನು ಸಂರಕ್ಷಿಸಿದರೆ, ಅಭಿವೃದ್ಧಿ ಪಡಿಸಿದರೆ, ರಾಜ್ಯದಲ್ಲಿ ಇನ್ನೂ ಹೆಚ್ಚಿನ ಜೌಗುಭೂಮಿ ಪ್ರದೇಶ ಮಾಡಲು ಸಾಧ್ಯ ಎಂದು ತಿಳಿಸಿದರು.


2 Comments
Mostbet – o cassino online que faz acontecer de verdade – https://mostbetpt.pro/como-se-registrar/ , Mostbet te dГЎ o empurrГЈo perfeito para viver grandes emoГ§Гµes .
The energy is electric and the wins are endless – https://atamsulosin.com/betano-casino-2026-bonuses-slots-real-payouts/ , Unleash your inner winner — the table is hot .