ಧಾರವಾಡ : ರಾಜ್ಯದ 22 ಜಿಲ್ಲೆಗಳಿಗೆ ಪ್ರಮುಖ ಕಚೇರಿಯಾದ ಧಾರವಾಡದ ಕರ್ನಾಟಕ ನಿರಾವರಿ ನಿಗಮದಲ್ಲಿ ಬಾರಿ ಭ್ರಷ್ಟಾಚಾರ ನಡೆದಿದ್ದು ಈ ಕುರಿತು ಸಿಬಿಐ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿ ರೈತ ಸೇನಾ ಕರ್ನಾಟಕದ ರೈತ ಮುಖಂಡರು, ಮಹಿಳೆಯರು ಕಚೇರಿ ಮುಂಭಾಗದಲ್ಲಿ ನಡೆಸುತ್ತಿರುವ ನಿರಂತರ ಧರಣಿ ಸತ್ಯಾಗ್ರಹ ಇಂದು ಎರಡನೇ ದಿನಕ್ಕೆ ಕಾಲಿಟ್ಟಿದೆ.
ರೈತ ಮಹಿಳೆಯರು ಇಂದು ಬೆಳಿಗ್ಗೆ ಕಚೇರಿ ಮುಂಭಾಗದ ಕಸ ಗುಡಿಸಿ , ರಂಗೋಲಿ ಹಾಕುವ ಮೂಲಕ ಎರಡನೇ ದಿನದ ಧರಣಿ ಸತ್ಯಾಗ್ರಹ ಆರಂಭಿಸಿದ್ದಾರೆ . ಈ ನಿಗಮದಲ್ಲಿ ಆದ ಭ್ರಷ್ಟಾಚಾರದ ಕುರಿತ ದಾಖಲೆಪತ್ರಗಳನ್ನು ಜಿಲ್ಲಾಧಿಕಾರಿಗಳ ಮುಖಾಂತರ ಸರ್ಕಾರಕ್ಕೆ ಸಲ್ಲಿಕೆ ಮಾಡಲಾಗಿದೆ.
ರಾಜ್ಯಪಾಲರನ್ನೂ ಭೇಟಿ ಮಾಡಿ ನಿಗಮದಲ್ಲಿನ ಭ್ರಷ್ಟಾಚಾರದ ಕುರಿತು ಅವರ ಗಮನಕ್ಕೆ ತಂದು , ಹತ್ತು ದಿನಗಳ ಒಳಗಾಗಿ ಈ ನಿಗಮದ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದೆವು . ಇದುವರೆಗೂ ಯಾವುದೇ ಕ್ರಮ ಜರುಗಿಸಿಲ್ಲ ಎಂದು ರೈತ ಮಹಿಳೆಯರು ನಿಗಮದ ಮುಂದೆ ನಿರಂತರ ಧರಣಿ ಸತ್ಯಾಗ್ರಹ ನಡೆಸುತ್ತಿದ್ದಾರೆ.