ಬೆಂಗಳೂರು,ಅ.6 – ಬಿಜೆಪಿಯವರು ನಕಲಿ ಹಿಂದುಗಳು, ರಾಜಕೀಯ ಲಾಭಕ್ಕಾಗಿ ಮಾತ್ರ ಹಿಂದುತ್ವದ ಜಪ ಮಾಡುತ್ತಾರೆ. ಕಾಂಗ್ರೆಸಿಗರು ನಿಜವಾದ ಹಿಂದುಗಳು, ಸಾವಿರಾರು ವರ್ಷಗಳಿಂದಲೂ ನಾವು ಧರ್ಮಪಾಲನೆ ಮಾಡುತ್ತಿದ್ದೇವೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಹುಟ್ಟಿದ ದಿನದಿಂದಲೂ ಹಿಂದುತ್ವವನ್ನೇ ಆಚರಣೆ ಮಾಡುತ್ತಿದೆ.
ನಾವು ಕಟ್ಟಿರುವ ದೇವಸ್ಥಾನಗಳನ್ನು, ಧರ್ಮಕ್ಕೆ ನೀಡಿದಷ್ಟು ದೇಣಿಗೆಗಳನ್ನು ಬಿಜೆಪಿಯವರು ನೀಡಿಲ್ಲ. 20-30 ವರ್ಷಗಳ ಹಿಂದಿನಿಂದ ಅಷ್ಟೇ ಬಿಜೆಪಿಯವರು ಹಿಂದುತ್ವದ ಚರ್ಚೆ ಮಾಡುತ್ತಿದ್ದಾರೆ. ಆದರೆ ನಾವು ಸಾವಿರಾರು ವರ್ಷಗಳಿಂದಲೂ ನಿಜವಾದ ಹಿಂದುಗಳು. ಅವರಂತೆ ರಾಜಕಾರಣದ ನಕಲಿ ಹಿಂದೂಗಳಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸಿಗರು ಯಾವತ್ತು ಒಂದು ಧರ್ಮಕ್ಕೆ ಆದ್ಯತೆ ನೀಡುವುದಿಲ್ಲ. ಎಲ್ಲಾ ಧರ್ಮಗಳನ್ನು ಸಮಾನವಾಗಿ ನೋಡುತ್ತದೆ. ಆದರೆ ಬಿಜೆಪಿಯವರು ಆ ರೀತಿಯಲ್ಲ. ಒಂದು ಧರ್ಮಕ್ಕೆ ಸೀಮಿತವಾಗಿ ರಾಜಕಾರಣ ಮಾಡುತ್ತಾರೆ. ಧರ್ಮ ಒಡೆಯುವ ಕೆಲಸ ಮಾಡುತ್ತಾರೆ ಎಂದು ಕಿಡಿ ಕಾರಿದರು.
ತಪ್ಪಿತಸ್ಥರು ಯಾವುದೇ ಪಕ್ಷ ಅಥವಾ ಧರ್ಮದವರಾದರೂ ನಾವು ಕ್ರಮ ಕೈಗೊಳ್ಳುತ್ತೇವೆ. ಆದರೆ ಬಿಜೆಪಿಯವರು ಅಧಿಕಾರದಲ್ಲಿದ್ದಾಗ ನೈತಿಕ ಪೊಲೀಸ್‍ಗಿರಿ ಮಾಡುತ್ತಾರೆ, ಪಬ್ ಗಲಾಟೆಯಾಯಿತು, ಇದರಲ್ಲೆಲ್ಲಾ ಭಾಗವಹಿಸಿದ್ದವರು ಯಾರು, ಬಿಜೆಪಿ ಸರ್ಕಾರ ಯಾವ ಕ್ರಮ ಕೈಗೊಂಡಿತ್ತು, ರಾಜಕಾರಣಕ್ಕಾಗಿ ಇಂತಹ ನಕಲಿ ಹಿಂದುತ್ವವನ್ನು ಬಿಜೆಪಿ ಮೊದಲಿನಿಂದಲೂ ಬಳಕೆ ಮಾಡುತ್ತಿದೆ ಎಂದು ಆಪಾದಿಸಿದರು.
ಬಿಜೆಪಿ ಸರ್ಕಾರದ ವೇಳೆ 279 ಕೋಮುಗಲಭೆಯ ಪ್ರಕರಣಗಳನ್ನು ಹಿಂಪಡೆದರು. 7000 ಕ್ಕೂ ಹೆಚ್ಚು ಮಂದಿ ರೌಡಿ ಶೀಟರ್ ಗಳನ್ನು ರೌಡಿ ಪಟ್ಟಿಯಿಂದ ಕೈಬಿಟ್ಟಿದ್ದಾರೆ.ಆದರೆ ಕಾಂಗ್ರೆಸ್ ಎಂದಿಗೂ ಈ ರೀತಿ ಧರ್ಮಾಧಾರಿತವಾಗಿ ನಿರ್ಧಾರ ತೆಗೆದುಕೊಂಡಿಲ್ಲ. ರೈತರು, ಕನ್ನಡಪರ ಸಂಘಟನೆಗಳು ಸೇರಿದಂತೆ ಸಾರ್ವಜನಿಕ ಉದ್ದೇಶದ ಪ್ರತಿಭಟನೆಯನ್ನು ಹಿಂಪಡೆಯುತ್ತೇವೆ. ಪೊಲೀಸರ ಮೇಲೆ ಹಲ್ಲೆ ಮಾಡಿರುವುದು ಗಂಭೀರ ಸ್ವರೂಪದ ಅಪರಾಧಗಳಲ್ಲಿ ತೊಡಗಿರುವವರ ಮೇಲಿನ ಪ್ರಕರಣಗಳನ್ನು ಹಿಂಪಡೆಯುವುದಿಲ್ಲ ಎಂದು ಸ್ಪಷ್ಟಪಡಿಸಿದರು.


1 Comment
One heartbeat away from rewriting reality – http://ropinirolec.com/gates-of-olympus-slot-game-review-2026-epic-zeus-wins-strategies/ , One card flip and silence turns into thunder .