ಬೆಂಗಳೂರು,ಅ.9 :
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಹಂಚಿಕೆ ಕರ್ಮಕಾಂಡ ಆರೋಪದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕುರ್ಚಿಗೆ ಯಾವುದೇ ರೀತಿಯ ಕಂಟಕ ಇಲ್ಲಾ ಎಂದು ಹೈಕಮಾಂಡ್ ಸೇರಿದಂತೆ ಹಲವು ನಾಯಕರು ಪದೇ ಪದೇ ಸ್ಪಷ್ಟನೆ ನೀಡಿದರೂ ತೆರೆಮರೆಯಲ್ಲಿ ನಡೆಯುತ್ತಿರುವ ಚಟುವಟಿಕೆಗಳು ಕುತೂಹಲ ಮೂಡಿಸಿವೆ.
ಅದರಲ್ಲೂ ಮುಖ್ಯಮಂತ್ರಿ ಆಪ್ತ ವಲಯದಲ್ಲೇ ಗುರುತಿಸಿಕೊಂಡಿರುವ ಸಚಿವರಾದ ಸತೀಶ್ ಜಾರಕಿಹೊಳಿ ಡಾ.ಮಹದೇವಪ್ಪ ಮತ್ತು ಡಾ.ಪರಮೇಶ್ವರ್ ನಿರಂತರವಾಗಿ ಸಭೆಗಳನ್ನು ನಡೆಸುತ್ತಿರುವುದು ಹಲವು ಶಾಸಕರನ್ನು ಸಂಪರ್ಕಿಸುತ್ತಿರುವುದು ವಿದ್ಯಮಾನಗಳಿಗೆ ರೋಚಕ ತಿರುವು ನೀಡಿದೆ.
ಕಳೆದ ವಾರ ಬೆಂಗಳೂರಿನಲ್ಲಿ ಈ ನಾಯಕರು ಸಭೆ ನಡೆಸಿ ಹಲವು ವಿದ್ಯಮಾನಗಳ ಬಗ್ಗೆ ವಿಚಾರ ವಿನಿಮಯ ಮಾಡಿಕೊಂಡಿದ್ದರು. ಇದಾದ ನಂತರ ಜಾರಕಿಹೊಳಿ ಅವರು ದೆಹಲಿಗೆ ತೆರಳಿ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು.
ಈ ವೇಳೆ ನಿವೇಶನ ಹಂಚಿಕೆ ಹಗರಣದ ಆರೋಪದ ಹೊಡೆತಕ್ಕೆ ಸಿಲುಕಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಲ್ಲಿ ಅದರಿಂದ ತೆರವಾಗುವ ಸ್ಥಾನವನ್ನು ದಲಿತ ಸಮುದಾಯಕ್ಕೆ ನೀಡಬೇಕು ಅದರಲ್ಲೂ ಅತ್ಯಂತ ಹಿರಿಯರಾದ ತಾವು ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಬೇಕು ಎಂದು ಮನವಿ ಮಾಡಿದ್ದರು.
ಆದರೆ ತಾವು ಈಗಾಗಲೇ ಅಖಿಲ ಭಾರತ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಲ್ಲಿದ್ದು ಈಗ ಮತ್ತೆ ರಾಜ್ಯ ರಾಜಕಾರಣಕ್ಕೆ ಮರಳುವುದರಲ್ಲಿ ಅರ್ಥವಿಲ್ಲ ಹೀಗಾಗಿ ತಾವು ಮುಖ್ಯಮಂತ್ರಿ ಆಗುವುದಿಲ್ಲ ಎಂದು ಖರ್ಗೆ ಅವರು ಸ್ಪಷ್ಟಪಡಿಸಿದ್ದರು ಎನ್ನಲಾಗಿದೆ. ಎ ಐ ಸಿ ಸಿ ಅಧ್ಯಕ್ಷರಿಂದ ಇಂತಹ ಸ್ಪಷ್ಟನೆ ಬಂದ ನಂತರ ಜಾರಕಿಹೊಳಿ ಅವರು ತಾವು ಉನ್ನತ ಹುದ್ದೆ ಅಲಂಕರಿಸಬೇಕು ಎನ್ನುವುದು ನಮ್ಮೆಲ್ಲರ ಅಪೇಕ್ಷೆಯಾಗಿದೆ ಒಂದು ವೇಳೆ ತಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆಯಾಗದೆ ಹೋದಲ್ಲಿ ರಾಜ್ಯದಲ್ಲಿ ಮುಂದಿನ ಮುಖ್ಯಮಂತ್ರಿ ಆಗಿ ದಲಿತ ಸಮುದಾಯಕ್ಕೆ ಸೇರಿದವರೊಬ್ಬರನ್ನು ನೇಮಕ ಮಾಡಬೇಕು ನೀವು ಯಾರನ್ನು ನೇಮಕ ಮಾಡಿದರು ನಾವು ತಕರಾರು ಮಾಡುವುದಿಲ್ಲ ಆದರೆ ಈ ಹುದ್ದೆ ಮಾತ್ರ ದಲಿತರಿಗೆ ಸಿಗಬೇಕು ಎಂದು ಪ್ರತಿಪಾದಿಸಿದ್ದರು ಎನ್ನಲಾಗಿದೆ.
ಇದಾದ ನಂತರ ಬೆಂಗಳೂರಿಗೆ ಬಂದ ಸತೀಶ್ ಜಾರಕಿಹೊಳಿ ಅವರು ಗೃಹ ಸಚಿವ ಪರಮೇಶ್ವರ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು ಬಳಿಕ ಇದೀಗ ಮೈಸೂರಿಗೆ ತೆರಳಿದ ಅವರು ದಲಿತ ಸಮುದಾಯದ ಕೆಲವು ಕಾಂಗ್ರೆಸ್ ಶಾಸಕರನ್ನು ಭೇಟಿ ಮಾಡಿ ಮಾತುಕತೆ ನಡೆಸುವ ಮೂಲಕ ಕುತೂಹಲ ಮೂಡಿಸಿದ್ದಾರೆ.
ಇದರ ಬೆನ್ನಲ್ಲೇ ಚಾಮರಾಜನಗರದಲ್ಲಿರುವ ಸುನಿಲ್ ಬೋಸ್ ನಿವಾಸದಲ್ಲಿ ಸತೀಶ್ ಜಾರಕಿಹೊಳಿ, ಪರಮೇಶ್ವರ್ ಮತ್ತು ಮಹಾದೇವಪ್ಪ ಸಭೆ ನಡೆಸಿದರು.
ಈ ವಿದ್ಯಮಾನ ಈಗ ಸಾಕಷ್ಟು ಕುತೂಹಲ ಮೂಡಿಸಿದೆ.
Previous Articleಅಯ್ಯಪ್ಪನ ದರ್ಶನಕ್ಕಾಗಿ ಇದು ಅನಿವಾರ್ಯ.
Next Article ಮಾಜಿ ಮುಖ್ಯಮಂತ್ರಿಗಳಿಗೆ ಹನಿ ಟ್ರ್ಯಾಪ್.?