ಬೆಂಗಳೂರು, ಜೂ.30- ಬಹಳ ದಿನಗಳ ನಂತರ ಅಧಿಕಾರದ ಗದ್ದುಗೆ ಹಿಡಿದಿರುವ ಕಾಂಗ್ರೆಸ್‍ನಲ್ಲಿ ಹಲವಾರು ಹಪಾಹಪಿಗಳು ಕೇಳಿಬರುತ್ತಿದ್ದು, ಕಾರ್ಯಕರ್ತರ ಧಾವಂತ ಹಾಗೂ ಒತ್ತಡಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಂದಿಸುತ್ತಿಲ್ಲ ಎಂಬ ಆರೋಪ ಕೇಳಿ ಬರುತ್ತಿರಿವುದು ಚಡಪಡಿಕೆಗೆ ಕಾರಣವಾಗಿದೆ.
ಸರ್ಕಾರ ರಚನೆಯಾಗಿ ನೂರು ದಿನಗಳು ಸಮೀಪಿಸಿವೆ. ಶತ ದಿನೋತ್ಸವ ಆಚರಣೆಗೆ ಮುಖ್ಯಮಂತ್ರಿ ಗಳ ಆಪ್ತ ವಲಯ ಸಿದ್ದತೆ ನಡೆಸಿದೆ.ಸರ್ಕಾರದ ಮಟ್ಟದಲ್ಲಿ ಸಂಭ್ರಮಾಚರಣೆಗೆ ತಯಾರಿಗಳು ನಡೆದಿವೆ.ಆದರೆ ಮುಖ್ಯಮಂತ್ರಿ ಆಪ್ತ ವಲಯ ಹೊರತುಪಡಿಸಿ ಉಳಿದ ಕಾರ್ಯಕರ್ತರ ವಲಯದಲ್ಲಿ ಇಂತಹ ಸಂಭ್ರಮ ಕಾಣುತ್ತಿಲ್ಲ. ಇದಕ್ಕೆ ಕಾರಣ ಮುಖ್ಯಮಂತ್ರಿ ಎಂಬ ಆರೋಪ ಕೇಳಿಬಂದಿದೆ.
ಸುಮಾರು 5 ವರ್ಷಗಳ ಬಳಿಕ ಅಧಿಕಾರದ ಅಂಗಳಕ್ಕೆ ಕಾಲಿಟ್ಟ ಕಾಂಗ್ರೆಸಿಗರಲ್ಲಿ ಹಲವಾರು ನಿರೀಕ್ಷೆಗಳಿದ್ದವು. ಆದರೆ ಅವುಗಳಿಗೆ ಸರಿಯಾದ ಸ್ಪಂದನೆ ದೊರೆಯುತ್ತಿಲ್ಲ.ಕೆಪಿಸಿಸಿ (KPCC) ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಶಿವಕುಮಾರ್ ಅವರಲ್ಲಿ ಕಾರ್ಯಕರ್ತರು ತಮ್ಮ ಕಷ್ಟ ಸುಖ ಹೇಳಿಕೊಳ್ಳಬಹುದಾಗಿದೆ.ಅವರು ತಮ್ಮ ಮಿತಿಯಲ್ಲಿ ಇವುಗಳಿಗೆ ಸ್ಪಂದಿಸುತ್ತಾರೆ.ಆದರೆ,ಬಹುತೇಕ ಸಮಸ್ಯೆಗಳಿಗೆ ಮುಖ್ಯಮಂತ್ರಿ ಮಟ್ಟದಲ್ಲಿ ಪರಿಹಾರ ಸಿಗಬೇಕಾಗುತ್ತದೆ.ಹೀಗಾಗಿ ಮುಖ್ಯಮಂತ್ರಿಗಳ ಬಳಿ ಅಹವಾಲು ಹೇಳಿಕೊಳ್ಳುವ ಅವಕಾಶವೇ ಇಲ್ಲ ಎಂದು ಕಾರ್ಯಕರ್ತರು ಬೇಸರ ಹೊರ ಹಾಕುತ್ತಿದ್ದಾರೆ.
ಮುಖ್ಯಮಂತ್ರಿಗಳು ತಮ್ಮನ್ನು ಸುತ್ತುವರೆದಿರುವ ಕೆಲವೇ ಕೆಲವು ಜನರಿಗೆ ಮಾತ್ರ ಲಬ್ಯವಾಗುತ್ತಾರೆ. ಉಳಿದ ಕಾರ್ಯಕರ್ತರು ಮುಖ್ಯಮಂತ್ರಿಗಳನ್ನು ತಲುಪಲು ಇವರನ್ನು ಅವಲಂಬಿಸುವ ಪರಿಸ್ಥಿತಿ ಉಂಟಾಗಿದೆ. ದೇವರನ್ನು ಒಲಿಸಿಕೊಳ್ಳಲು ಪೂಜಾರಿ ಬೇಕಾದಂತೆ ಮುಖ್ಯಮಂತ್ರಿಗಳನ್ನು ತಲುಪಲು ಅವರ ಆಪ್ತೇಷ್ಡರನ್ನು ಅವಲಂಬಿಸಬೇಕಾಗಿದೆ ಎಂದು ಬಹುತೇಕ ಕಾರ್ಯಕರ್ತರು ಅಳಲು ತೋಡಿಕೊಳ್ಳುತ್ತಿದ್ದಾರೆ. ಇದಕ್ಕೆ ಪೂರಕವೆಂಬಂತೆ ಮುಖ್ಯಮಂತ್ರಿಗಳ ಆಪ್ತ ವಲಯದಲ್ಲಿ ಗುರುತಿಸಲ್ಪಡುವ ಪ್ರಕಾಶ್ ರಾಥೋಡ್,ಪಿ.ಎಂ.ಅಶೋಕ್ ಅವರಿಗೆ ಕ್ಯಾಬಿನೆಟ್ ಮಂತ್ರಿ ದರ್ಜೆಯ ಸ್ಥಾನಮಾನದೊಂದಿಗೆ ಪರಿಷತ್ ಮತ್ತು ವಿಧಾನಸಭೆಯ ಸಚೇತಕ ಹುದ್ದೆ ನೀಡಲಾಗಿದೆ.ನಸೀರ್ ಅಹಮದ್ ಮತ್ತು ಪಿ.ಗೋವಿಂದ ರಾಜು ಅವರನ್ನು ಸಂಪುಟ ದರ್ಜೆಯ ಸಚಿವ ಸ್ಥಾನದೊಂದಿಗೆ ರಾಜಕೀಯ ಕಾರ್ಯದರ್ಶಿ ಹುದ್ದೆಗೆ ನೇಮಕ ಮಾಡಲಾಗಿದೆ.ಇವರನ್ನು ಹೊರತುಪಡಿಸಿ ಬೇರೆ ಯಾರೂ ಇವರಿಗೆ ಕಾಣ ಸಿಗಲಿಲ್ಲವೇ ಎಂದು ಪ್ರಶ್ನಿಸುತ್ತಿರುವುದಾಗಿ ಗೊತ್ತಾಗಿದೆ.
ಈ ಎಲ್ಲಾ ಅಳಲನ್ನು ಉಪ ಮುಖ್ಯಮಂತ್ರಿಯಾಗಿರುವ ಡಿ.ಕೆ.ಶಿವಕುಮಾರ್ ಕೇಳಿಸಿಕೊಳ್ಳುತ್ತಾರೆ ಎಂಬ ಸಮಾಧಾನ ಬಿಟ್ಟರೆ ಬೇರೆ ಎನೂ ಇಲ್ಲ.ಇದು ಒಂದು ಕಡೆಯಾದರೆ, ಮುಖ್ಯಮಂತ್ರಿ ಆಪ್ತರೆನ್ನಲಾದ ಸಚಿವರ ಕತೆಯೂ ಇದಕ್ಕಿಂತ ಹೊರತಾಗಿಲ್ಲ ಎಂಬ ಅಪಸ್ವರ ಕೇಳಿಬಂದಿದೆ ಸಚಿವರಿಗೆ ಜನಸಾಮಾನ್ಯರು ಹಾಗೂ ಕಾರ್ಯಕರ್ತರನ್ನು ಭೇಟಿ ಮಾಡಲು ಸಮಯ ಸಾಲುತ್ತಿಲ್ಲ. ಪ್ರತಿಯೊಬ್ಬರೂ ಕೂಡ ಸಚಿವರನ್ನು ಭೇಟಿ ಮಾಡಿ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಬೇಕು ಎಂದು ಬಯಸುತ್ತಾರೆ. ಆದರೆ ಅಷ್ಟೂ ಜನರಿಗೆ ಸಮಯ ನೀಡಲು ಸಾಧ್ಯವಾಗದೆ ಸಚಿವರು ಕೆಲವು ಪ್ರಮುಖರನ್ನಷ್ಟೇ ಮಾತನಾಡಿಸಿ ಉಳಿದವರನ್ನು ಕಡೆಗಣಿಸುತ್ತಿದ್ದಾರೆ ಎಂಬ ಆಕ್ಷೇಪಗಳಿವೆ.
ಪ್ರಮುಖರ ಜೊತೆಗಿನ ಸಮಾಲೋಚನೆ ವೇಳಯಲ್ಲೂ ನಿರೀಕ್ಷಿತ ಮಟ್ಟದಲ್ಲಿ ಕೆಲಸಗಳಾಗುತ್ತಿಲ್ಲ ಎಂಬ ಅಸಮಾಧಾನಗಳಿವೆ. ಇನ್ನು ಜನಸಾಮಾನ್ಯರ ಪಾಡಂತೂ ಹೇಳತೀರದಾಗಿದ್ದು, ಕನಿಷ್ಟ ಭೇಟಿ ಮಾಡಲೂ ಕೂಡ ಸಚಿವರು ಅಲಭ್ಯವಾಗುತ್ತಿದ್ದಾರೆ.
ಭಾರೀ ನಿರೀಕ್ಷೆಗಳೊಂದಿಗೆ ಅಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಪಂಚಖಾತ್ರಿಗಳ ಯಶಸ್ವಿ ಜಾರಿಯ ಹುಮ್ಮಸ್ಸಿನಲ್ಲೇ ಕಾಲಾಹರಣ ಮಾಡುತ್ತಿದೆ ಎಂಬ ಕೊರಗು ಕಾಂಗ್ರೆಸ್ ಕಾರ್ಯಕರ್ತರ ಪಾಳಯದಲ್ಲಿ ದೊಡ್ಡದಾಗುತ್ತಾ ಸಾಗಿದೆ.