“ಬಾಗೇಶ್ವರ್ ಧಾಮ್ ಸರ್ಕಾರ್” (Bageshwar Dham Sarkar) ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರುವ ಹೆಸರಿದು. ಮರಾಠಾ ಪೇಶ್ವೆ ರಾಜರಂತೆ ತಲೆಗೆ ಪೇಟವನ್ನು ಧರಿಸಿ, ಬಣ್ಣ ಬಣ್ಣದ ಬಟ್ಟೆ ತೊಟ್ಟು, ಕೊರಳಲ್ಲಿ ದೊಡ್ಡ ದೊಡ್ಡ ಮಣಿಗಳ ಮಾಲೆ ಧರಿಸಿ, ಹಣೆಯಲ್ಲೊಂದು ತಿಲಕವಿಟ್ಟು, ವೈಭವದ ಆಸನದ ಮೇಲೆ ಕುಳಿತು, ಹನುಮ ಭಕ್ತ ಎಂದು ಹೇಳಿಕೊಳ್ಳುವ ನೆರೆದ ಸಾವಿರಾರು ಭಕ್ತರ ಸಮಸ್ಯೆಗಳನ್ನು ನಿವಾರಿಸುವುದಾಗಿ ಹೇಳಿಕೊಳ್ಳುವ 26 ವರ್ಷದ ಆಧುನಿಕ ಗುರೂಜಿ, ಧೀರೇಂದ್ರ ಕೃಷ್ಣ ಶಾಸ್ತ್ರಿ (Dhirendra Krishna Shastri) ಅಲಿಯಾಸ್ ಬಾಗೇಶ್ವರ್ ಧಾಮ್ ಸರ್ಕಾರ್. ಗುರೂಜಿ ಎಂದ ಮಾತ್ರಕ್ಕೆ ಅವರೇನು ಗಂಭೀರ ವದನರಲ್ಲ. ತಮ್ಮನ್ನು ತಾವೇ ಅವಿದ್ಯಾವಂತ ಎಂದು ಹೇಳಿಕೊಳ್ಳುವ, ಕೆಲವೊಮ್ಮೆ ಮಕ್ಕಳಂತೆ ಚಪ್ಪಾಳೆ ತಟ್ಟುವ, ಕೆಲವೊಮ್ಮೆ ಬಾಲಿಶವಾಗಿ ವರ್ತಿಸುವ ಗುರೂಜಿ ಅವರು. ಭೂತಪ್ರೇತದ ಬಾಧೆಗಳನ್ನು, ಔದ್ಯೋಗಿಕ ಅಥವಾ ಕುಟುಂಬದ ಸಮಸ್ಯೆಗಳನ್ನು ನಿವಾರಿಸುವುದಾಗಿ ಹೇಳಿಕೊಳ್ಳುವ ಈ ಗುರೂಜಿಯನ್ನು ಅವರ ಭಕ್ತರು “ಪವಾಡ ಪುರುಷ” ಎಂದೇ ನಂಬುತ್ತಾರೆ.
ಅಂತಹ ಪವಾಡ ಅವರೇನು ಮಾಡುತ್ತಾರೆ?
ನೆರೆದ ಸಾವಿರಾರು ಜನರಲ್ಲಿ ಒಬ್ಬರನ್ನು ತಮ್ಮ ಬಳಿ ಕರೆಯುತ್ತಾರೆ. ಅವರು ಬಂದು ಗುರೂಜಿಯ ಬಳಿ ಕೂರುತ್ತಿದ್ದಂತೆ ಅವರ ಬಳಿ ಹೆಚ್ಚೇನೂ ಮಾತಾಡದೆ, ಒಂದು ಕಾಗದದ ಮೇಲೆ ಅವರ ಮನಸ್ಸಲ್ಲಿ ಮೂಡಿದ್ದನ್ನು ಮೊದಲು ಬರೆಯುತ್ತಾರೆ. ನಂತರ, ಅವರ ಬಳಿ ಅವರ ಸಮಸ್ಯೆಯನ್ನು ಕೇಳುತ್ತಾರೆ. ವಿಚಿತ್ರವೆಂದರೆ, ಅವರು ಹೇಳುವ ಸಮಸ್ಯೆ ಮತ್ತು ಗುರೂಜಿ ಕಾಗದದ ಮೇಲೆ ಬರೆದ ಸಮಸ್ಯೆ ಎರಡೂ ಒಂದೇ ಆಗಿರುತ್ತದೆ. ನೆರೆದ ಸಾವಿರಾರು ಜನರಲ್ಲಿ ಯಾರೋ ಒಬ್ಬರನ್ನು ಕರೆದು, ಅವರ ಬಳಿ ಏನನ್ನೂ ಕೇಳದೆ, ಅವರ ಸಮಸ್ಯೆಗಳನ್ನು ಯಥಾವತ್ತಾಗಿ ತಿಳಿಸುವ ಗುರೂಜಿಯ ತಂತ್ರದಿಂದ ಜನರು ಅವರನ್ನು ಪವಾಡ ಪುರುಷ ಎಂದು ನಂಬಿದ್ದಾರೆ. ಅಚ್ಚರಿಯ ವಿಷಯವೆಂದರೆ, ಇವರ ಬಳಿ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡು ಕೇವಲ ಜನಸಾಮಾನ್ಯರು ಅಥವಾ ಮೂಢನಂಬಿಕೆಗಳನ್ನು ಪಾಲಿಸುವವರು ಅಥವಾ ಅವಿದ್ಯಾವಂತರಷ್ಟೇ ಬರುವುದಿಲ್ಲ, ವಿದ್ಯಾವಂತರು, ಪ್ರಖ್ಯಾತ ಉದ್ಯಮಿಗಳು, ರಾಜಕಾರಣಿಗಳು ಅಷ್ಟೇ ಏಕೆ ವಿದೇಶದಿಂದ ಸಹ ಬರುವವರಿದ್ದಾರೆ!
ಗುರೂಜಿಯ ಈ ತಂತ್ರದ ಸತ್ಯವನ್ನು ಹೊರಗೆಳೆಯಲು ಸಾಕಷ್ಟು ಸುದ್ದಿ ಮಾಧ್ಯಮಗಳು ಪ್ರಯತ್ನ ಪಟ್ಟಿವೆ. ಗಂಟೆಗಟ್ಟಲೆ ಸಮಯವನ್ನು ಈ ಗುರೂಜಿಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಹೊರಹಾಕುವಲ್ಲಿ ವ್ಯಯಿಸಿವೆ. ಅವರಿಗೆಲ್ಲ ಗುರೂಜಿ ನೀಡುವ ಉತ್ತರ, “ನನಗೆ ದೇವನಿಂದ ಅನುಗ್ರಹವಾಗುತ್ತದೆ. ತನ್ನಿಂದ ತಾನೇ ನಾನು ಕಾಗದದ ಮೇಲೆ ಅವರ ಸಮಸ್ಯೆಯನ್ನು ಬರೆಯುತ್ತಾ ಹೋಗುತ್ತೇನೆ” ಎಂದು.
“ಇದೆಲ್ಲ ಕಣ್ಣಿಗೆ ಮಣ್ಣು ಸೋಕುವ ತಂತ್ರವಷ್ಟೇ. ಅವರು ಮಾಡುತ್ತಿರುವುದು ಪವಾಡವಲ್ಲ, ಬದಲಾಗಿ “Mind Reading”. ಜಾದುವಿನಂತೆ Mind Reading ಕೂಡ ಒಂದು ಕಲೆ ಅಷ್ಟೆ. ಅವರು ಈ ಕಲೆಯನ್ನು ಜನರ ಮೇಲೆ ಪ್ರಯೋಗಿಸುತ್ತಿದ್ದಾರೆ. ಇದನ್ನೇ ಪವಾಡ ಎಂದೆಲ್ಲ ಹೆಸರಿಸಿದರೆ ಅದು ಜನರಿಗೆ ಮೋಸ ಮಾಡಿದಂತಾಗುತ್ತದೆ” ಎಂದು Magician ಮತ್ತು mentalist ಆಗಿರುವ Suhani Shah ಹೇಳುತ್ತಾರೆ.
ಇವರ ಹಿನ್ನೆಲೆ ಏನು?
ಧೀರೇಂದ್ರ ಕೃಷ್ಣ ಶಾಸ್ತ್ರಿ 1996 ರಲ್ಲಿ ಮಧ್ಯ ಪ್ರದೇಶ (Madhya Pradesh) ದ ಛತ್ತರ್‌ಪುರ (Chhatarpur) ಜಿಲ್ಲೆಯ ಗಡ (Gadha) ಗ್ರಾಮದಲ್ಲಿ ಒಂದು ಬಡ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ಕುಟುಂಬದ ಆರ್ಥಿಕ ಪರಿಸ್ಥಿತಿ ಅಷ್ಟೇನು ಚೆನ್ನಾಗಿಲ್ಲದಿದ್ದ ಕಾರಣ, ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸಿ, ದುಡಿಮೆಯತ್ತ ವಾಲಿದರು. ಹಾಗಿರುವಾಗಲೇ, ಒಮ್ಮೆ ಅವರು ಯಾರಿಗೂ ಕಾಣದಂತೆ ಮರೆಯಾಗಿದ್ದರಂತೆ. ಒಂದು ವರ್ಷದ ಅಜ್ಞಾತವಾಸದ ನಂತರ ಮರಳಿ ಬಂದಾಗ ಧೀರೇಂದ್ರ ಕೃಷ್ಣ ಶಾಸ್ತ್ರಿ ಬಾಗೇಶ್ವರ್ ಧಾಮ್ ಸರ್ಕಾರ್ ಆಗಿದ್ದರು.
ಜನವರಿಯಿಂದ ಈಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಾಗಿ ಪ್ರಖ್ಯಾತಿ ಪಡೆದಿರುವ ಈ ಗುರೂಜಿಯ ಬಗ್ಗೆ ವ್ಯಾಪಕ ಚರ್ಚೆಗಳಾಗುತ್ತಿರುವುದಂತೂ ನಿಜ. ಇಬ್ಬರ ಜಗಳ ಮೂರನೆಯವನಿಗೆ ಲಾಭ ಎನ್ನುವಂತೆ ಇವರ ಬಗ್ಗೆ ನಡೆಯುತ್ತಿರುವ ವ್ಯಾಪಕ ಚರ್ಚೆಯಿಂದ ಸಾಮಾಜಿಕ ಜಾಲತಾಣಗಳಲ್ಲಿ ಸಾವಿರದ ಲೆಕ್ಕದಲ್ಲಿದ್ದ ಗುರೂಜಿಯ ಹಿಂಬಾಲಕರ ಸಂಖ್ಯೆ ಈಗ ಮಿಲಿಯನ್ ತಲುಪಿದೆ! ಗಮನಿಸಬೇಕಾದ ಮತ್ತೊಂದು ವಿಷಯವೆಂದರೆ, ಅವರೇ ಹೇಳುವಂತೆ ಅವರು ನಡೆಸುವ “ದರ್ಬಾರ್” ನಲ್ಲಿ ಕ್ಯಾಮೆರಾ, ಮೈಕ್ ಸೆಟ್ಟಿಂಗ್ ಜೊತೆ Live telecast ಕೂಡ ಇರುತ್ತದೆ. ಸಮಸ್ಯೆ ಹೇಳಿಕೊಂಡು ಬಂದ ವ್ಯಕ್ತಿ ಸಹ ಎಲ್ಲರಿಗೂ ಕೇಳುವಂತೆ ಮೈಕ್ ನಲ್ಲಿಯೇ ತನ್ನ ಸಮಸ್ಯೆಗಳನ್ನು ಹೇಳಿಕೊಳ್ಳಬೇಕು. ಜನರ ಕಲ್ಯಾಣಕ್ಕಾಗಿ ನಡೆಯುವ ಕಾರ್ಯಕ್ಕೆ ಪ್ರಚಾರದ ಹಪಹಪಿ ಏಕೋ?
ಚಿತ್ರಗಳ ಕೃಪೆ – ಅಂತರ್ಜಾಲ
5 Comments
карниз с приводом для штор http://www.provorota.su/ .
принудительный вывод из запоя ростов http://www.vyvod-iz-zapoya-rostov11.ru/ .
выведение из запоя на дому спб цены выведение из запоя на дому спб цены .
онлайн казино беларусь онлайн казино беларусь .
магазин семена каталог http://www.semenaplus74.ru .