ಬೆಂಗಳೂರು, ಡಿ.13- ನಾಗರೀಕ ಸಮಾಜ ಅಸಹ್ಯಪಡುವ ಅಸಹಜ ನಡವಳಿಕೆ ಎಂದೇ ಪರಿಗಣಿಸಲ್ಪಡುವ ವೈಪ್ ಸ್ವಾಪ್ (ಪತ್ನಿ ಬದಲಿಸುವ-Wife Swap) ಎಂಬ ಅಸಹ್ಯ ವಿದ್ಯಮಾನ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆಯುತ್ತಿದೆಯಾ ಎಂಬ ಅನುಮಾನಗಳ ಬೆನ್ನಲ್ಲೇ ಇದೀಗ ಇಂತಹ ಘಟನೆಗಳು ನಡೆಯುತ್ತಿವೆ.ಇದಕ್ಕೆ ತನ್ನನ್ನು ಬಲವಂತವಾಗಿ ದೂಡುವ ಪ್ರಯತ್ನ ನಡೆಯಿತು ಎಂದು ಆರೋಪಿಸಿ ಬಸವನಗುಡಿ ಮಹಿಳಾ ಠಾಣೆಯಲ್ಲಿ ಮಹಿಳೆಯೊಬ್ಬರು ದೂರು ನೀಡಿದ್ದಾರೆ.
ಇದು ಲೈಂಗಿಕ ಸುಖಕ್ಕಾಗಿ ಪತ್ನಿಯರನ್ನು ಬದಲಾಯಿಸಿಕೊಳ್ಳುವ ರೂಢಿಯಾಗಿದೆ.ತನ್ನ ಪತ್ನಿಯನ್ನು ಒಂದು ರಾತ್ರಿಯ ಮಟ್ಟಿಗೆ ಸ್ನೇಹಿತನ ಜೊತೆ ಇರುವಂತೆ ಮಾಡುವುದು, ಸ್ನೇಹಿತನ ಹೆಂಡತಿಯ ಜೊತೆಗೆ ತಾನು ಇರುವುದು ಹೀಗೆ ಇದು ನಡೆಯುತ್ತದೆ. ತಾತ್ಕಾಲಿಕ ಒಪ್ಪಂದಗಳಾದ ಇವು ಐಷಾರಾಮಿ ಬದುಕನ್ನು ಹೊಂದಿರುವ ಕುಬೇರರ ನಡುವೆ ನಡೆಯುತ್ತಿದೆ ಎನ್ನುವ ಮಾತಿದೆ. ಅಮೆರಿಕದಲ್ಲಿ ಆರಂಭವಾದ ಈ ಹೇಯ ಪದ್ಧತಿ ಅಲ್ಲಿಂದ ಇಲ್ಲಿಗೂ ಪಸರಿಸಿದೆ.
ಕೆಲ ವರ್ಷಗಳ ಹಿಂದೆ ಕೇರಳದಲ್ಲಿ ಇದು ದೊಡ್ಡ ಸದ್ದು ಮಾಡಿದ್ದಲ್ಲದೆ, ಬೆಂಗಳೂರಿನಲ್ಲೂ ಕೆಲವು ಪ್ರಕರಣಗಳು ದಾಖಲಾಗಿದ್ದವು. ಈಗ ರಾಜಧಾನಿಯಲ್ಲಿ ಮತ್ತೊಂದು ಪ್ರಕರಣ ದಾಖಲಾಗಿದೆ.
ಹೆಚ್ಚಾಗಿ ಇವು ಹೈಫೈ ಸೊಸೈಟಿಗಳಲ್ಲಿ ನಡೆಯುತ್ತಿದ್ದು, ಬೆಳಕಿಗೆ ಬರದೇ ಮುಚ್ಚಿ ಹೋಗುತ್ತಿವೆ.ಹೆಚ್ಚಾಗಿ ಲೈಂಗಿಕ ಸುಖಕ್ಕಾಗಿ ಮಾತ್ರ ಇಂಥ ಕೃತ್ಯಗಳು ನಡೆಯುವುದು ದಾಖಲಾಗಿದೆ.
ಇದೀಗ ಮಹಿಳಾ ಠಾಣೆಗೆ ದೂರು ನೀಡಿರುವ ಮಹಿಳೆ ವೈಫ್ ಸ್ವಾಪಿಂಗ್ಗೆ ಬಲವಂತ ಪಡಿಸಿರುವುದಲ್ಲದೇ, ವರದಕ್ಷಿಣೆ ಕಿರುಕುಳ, ದೌರ್ಜನ್ಯ ಎಸಗಿರುವುದಾಗಿ ಆರೋಪಿಸಿ ಪತಿ ಹಾಗೂ ಆತನ ಮನೆಯವರು ಸೇರಿದಂತೆ ಒಟ್ಟು 10 ಮಂದಿ ವಿರುದ್ಧ ಆರೋಪ ಮಾಡಿದ್ದಾರೆ.
ಅವರು ನೀಡಿದ ದೂರಿನ ಮೇರೆಗೆ ವರದಕ್ಷಿಣೆ ತಡೆ ಕಾಯ್ದೆ, ಲೈಂಗಿಕ ದೌರ್ಜನ್ಯ ಸೇರಿ ವಿವಿಧ ಐಪಿಸಿ ಸೆಕ್ಷನ್ಗಳ ಅಡಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ.
23 ವರ್ಷದ ಸಂತ್ರಸ್ತೆ ಕಳೆದ ವರ್ಷ ಡಿಸೆಂಬರ್ನಲ್ಲಿ ಖಾಸಗಿ ಕಂಪನಿ ಉದ್ಯೋಗಿಯೊಬ್ಬರ ಜೊತೆ ಮದುವೆಯಾಗಿದ್ದಾರು. ಹಿಂದೂ ಸಂಪ್ರದಾಯದಂತೆ ಗುರು – ಹಿರಿಯರ ಸಮ್ಮುಖದಲ್ಲಿ ಯುವತಿಯ ಪೋಷಕರು ಅದ್ದೂರಿಯಾಗಿ ಮದುವೆ ಮಾಡಿ ಕೊಟ್ಟಿದ್ದರು.
ಮದುವೆ ಸಮಯದಲ್ಲಿ ಮಾತುಕತೆಯಂತೆ ವರನಿಗೆ 2 ಲಕ್ಷ ನಗದು, ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣವನ್ನ ವರದಕ್ಷಿಣೆ ರೂಪವಾಗಿ ಕೊಟ್ಟಿದ್ದರು. ಮದುವೆ ಬಳಿಕ ಕೆಲವು ದಿನಗಳ ಕಾಲ ಎಲ್ಲವೂ ಸರಿಯಾಗಿತ್ತು. ಕಾಲ ಕ್ರಮೇಣ ಪತಿರಾಯ ತನಗೆ ನೀಡಲಾಗಿರುವ ಚಿನ್ನಾಭರಣದ ಗುಣಮಟ್ಟ ಸರಿಯಿಲ್ಲ ಎಂದು ಕ್ಯಾತೆ ತೆಗೆದು ಕಿರುಕುಳ ನೀಡಲಾರಂಭಿಸಿದ.
ಮದುವೆಗಾಗಿ ತಾನು 10 ಲಕ್ಷ ರೂಪಾಯಿ ಸಾಲ ಮಾಡಿದ್ದೇನೆ, ಇದನ್ನು ತೀರಿಸಬೇಕಿದೆ ಹೀಗಾಗಿ ಮತ್ತಷ್ಟು ಹಣ ತರುವಂತೆ ಹೆಂಡತಿಗೆ ಪೀಡಿಸತೊಡಗಿದ.ಇದಾದ ನಂತರ ಮತ್ತೆ 2 ಲಕ್ಷ ರೂಪಾಯಿ ನೀಡಲಾಯಿತು.ಇದರಿಂದ ಸಂತೃಪ್ತನಾಗದೇ ಕಿರುಕುಳ ನೀಡುವುದು ಮುಂದುವರೆಸಿದ.
ಈ ವೇಳೆ ಆತನ ಸಂಬಂಧಿಯೊಬ್ಬ ನನ್ನ ಕೈ- ಕಾಲನ್ನು ಅಸಹ್ಯವಾಗಿ ಮುಟ್ಟಿದ್ದ. ಅಲ್ಲದೇ ಪತಿ ವಿಡಿಯೋ ತೋರಿಸಿ ಅಸ್ವಾಭಾವಿಕ ಲೈಂಗಿಕ ಕ್ರಿಯೆಗೆ ಬಲವಂತಪಡಿಸಿದ್ದ ಎಂದು ದೂರಿನಲ್ಲಿ ಸಂತ್ರಸ್ತೆ ಆರೋಪಿಸಿದ್ದಾರೆ.
ಪತಿ ಕೆಲಸ ಮಾಡುವ ಕಂಪನಿಯಲ್ಲಿ ವೈಪ್ ಸ್ವಾಪಿಂಗ್ ಸಂಸ್ಕೃತಿ ಇದ್ದು, ತನ್ನ ಸ್ಮೇಹಿತರೊಂದಿಗೆ ಮಲಗುವಂತೆ ಪೀಡಿಸಿದ್ದ. ಇದಕ್ಕೆ ಒಪ್ಪದಿದ್ದಾಗ ಬೆಲ್ಟ್ ನಿಂದ ಹೊಡೆದಿದ್ದಾನೆ. ಕಳೆದ ನ.31 ರಂದು ರಾತ್ರಿ ಮದ್ಯ ಸೇವನೆ ಮಾಡಿ ಬಂದು ಕೊಲೆ ಮಾಡುವ ಉದ್ದೇಶದಿಂದ ದಿಂಬಿನಿಂದ ಉಸಿರುಗಟ್ಟಿಸಿ ಸಾಯಿಸಲು ಪ್ರಯತ್ನಿಸಿದ್ದನಲ್ಲದೇ ಮಾನಸಿಕ ಹಾಗೂ ದೈಹಿಕವಾಗಿ ದೌರ್ಜನ್ಯ ನಡೆಸಿದ್ದ ಎಂದು ಆರೋಪಿಸಿರುವ ಸಂತ್ರಸ್ತೆ, ಗಂಡನ ಮನೆಯವರ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಮನವಿ ಮಾಡಿದ್ದಾರೆ.