ಬೆಂಗಳೂರು.ಜ.19:
ಕೇವಲ ಕೆಲವೇ ವರ್ಷಗಳ ಹಿಂದೆ ಕರ್ನಾಟಕ ಬಿಜೆಪಿಯ ಪ್ರಭಾವಿ ನಾಯಕರ ಪಟ್ಟಿಯಲ್ಲಿ ಕೇಂದ್ರ ಮಂತ್ರಿ ಶೋಭಾ ಕರಂದ್ಲಾಜೆ ಅವರ ಹೆಸರು ಪ್ರಮುಖವಾಗಿ ಕೇಳಿ ಬರುತ್ತಿತ್ತು. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಈ ನಾಯಕಿ ಯಡಿಯೂರಪ್ಪ ಅವರ ಉತ್ತರಾಧಿಕಾರಿ ಎನ್ನುವಷ್ಟರ ಮಟ್ಟಿಗೆ ಪ್ರಭಾವಿಯಾಗಿದ್ದರು. ಆದರೆ ಇತ್ತೀಚೆಗೆ ಅವರು ಈ ಪ್ರಭಾವಳಿಯಿಂದ ಹೊರಬಂದಿದ್ದಾರೆ.
ಎರಡು ಅವಧಿಗೆ ಸಂಸದರಾಗಿ ಸದ್ಯ ಕೇಂದ್ರ ಕೃಷಿ ಮಂತ್ರಿಯಾಗಿ ಕೆಲಸ ಮಾಡುತ್ತಿರುವ ಇವರು ಸಾಕಷ್ಟು ದಣಿದಿದ್ದಅವರು
ಹೀಗಾಗಿ ಇವರಿಗೆ ವಿಶ್ರಾಂತಿಯ ಅಗತ್ಯವಿದೆ ಎಂದು ಕೆಲವರು ಹೇಳಿದರೇ.ಮತ್ತೇ ಕೆಲವರು ಶೋಭಾ ಅವರು ರಾಷ್ಟ್ರ ರಾಜಕಾರಣದಲ್ಲಿ ಮತ್ತಷ್ಟು ಎತ್ತರಕ್ಕೆ ಹೋಗಲಿದ್ದಾರೆ ಎಂಬ ವಾದ ಮಂಡಿಸುತ್ತಿದ್ದಾರೆ.
ಇದೆಲ್ಲಾ ಯಾಕೆ ಈಗ ಎನ್ನುತ್ತಿರಾ..ಹಾಗಾದರೆ ಈ ಸ್ಟೋರಿ ನೋಡಿ.
ರಾಜ್ಯದಲ್ಲಿ ಲೋಕಸಭಾ Election ಅಖಾಡಕ್ಕೆ ನಿಧಾನವಾಗಿ ರಂಗೇರತೊಡಗಿದೆ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಆಕಾಂಕ್ಷಿಗಳು ಲಾಬಿ ಮಾಡುತ್ತಿದ್ದಾರೆ.
ಅದರಲ್ಲೂ ಪ್ರಧಾನಿ ಮೋದಿ ಅವರ ಅಲೆಯಲ್ಲಿ ಗೆದ್ದು ಬರುತ್ತೇವೆ ಎಂದು ಭಾವಿಸಿರುವ ಬಿಜೆಪಿಯಲ್ಲಿ ಕಣಕ್ಕಿಳಿಯಲು ಬಾರಿ ಪೈಪೋಟಿ ಉಂಟಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋತಿರುವ ಹಲವು ನಾಯಕರು ಹೈಕಮಾಂಡ್ ಮೇಲೆ ಪ್ರಭಾವ ಬೀರಿ ಟಿಕೆಟ್ ಗಿಟ್ಟಿಸಿಕೊಳ್ಳಲು ಪ್ರಯತ್ನ ನಡೆಸಿದ್ದಾರೆ.
ಹಾಲಿ ಸಂಸದರಾಗಿರುವ ಕೆಲವರಿಗೆ ಟಿಕೆಟ್ ಸಿಗುವುದಿಲ್ಲ ಎಂಬ ವರದಿಗಳು ಕೂಡಾ ಪೈಪೋಟಿ ಹೆಚ್ಚುವಂತೆ ಮಾಡಿದೆ.
ಇಂತಹ ಪೈಪೋಟಿಯ ನಡುವೆ ಕೇಂದ್ರ ಮಂತ್ರಿ ಶೋಭಾ ಕರಂದ್ಲಾಜೆ ಅವರು ಚುನಾವಣೆಗೆ ಸ್ಪರ್ಧಿಸುತ್ತಾರಾ.ಅಥವಾ ಇಲ್ಲವಾ..ಸ್ಪರ್ಧೆ ಮಾಡಿದರೆ ಎಲ್ಲಿಂದ ಸ್ಪರ್ಧಿಸುತ್ತಾರೆ ಎಂಬ ವಿಷಯ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಅವರು ಈ ಬಾರಿ ತಮ್ಮ ಕ್ಷೇತ್ರ ಸ್ವ ಕ್ಷೇತ್ರ ಉಡುಪಿ– ಚಿಕ್ಕಮಗಳೂರಿನಿಂದ ಸ್ಪರ್ಧಿಸುವುದಿಲ್ಲ ಅದರ ಬದಲಾಗಿ ಬೆಂಗಳೂರು ಗ್ರಾಮಾಂತರ ಇಲ್ಲವೇ ಬೆಂಗಳೂರು ಉತ್ತರ ಅಥವಾ ತುಮಕೂರು ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಉಡುಪಿ- ಚಿಕ್ಕಮಗಳೂರು ಕ್ಷೇತ್ರದಿಂದ ಎರಡನೇ ಬಾರಿ ಸಂಸದರಾಗಿ ಆಯ್ಕೆಯಾಗಿರುವ ಅವರು ಕ್ಷೇತ್ರದೊಂದಿಗೆ ಸಂಪರ್ಕ ಕಡಿಮೆ ಮಾಡಿಕೊಂಡಿದ್ದಾರೆ ಕಳೆದ ಬಾರಿಯೇ ಇವರ ಗೆಲುವು ಕಷ್ಟ ಇತ್ತು. ಸ್ಥಳೀಯ ಕಾರ್ಯಕರ್ತರೊಂದಿಗೆ ಅಂತಹ ಉತ್ತಮ ಒಡನಾಟ ಹೊಂದಿಲ್ಲದ ಇವರು ಸ್ಥಳೀಯ ನಾಯಕರ ವಿಶ್ವಾಸ ಗಳಿಸುವಲ್ಲಿ ವಿಫಲವಾಗಿದ್ದಾರೆ ಎಂಬ ಅಸಮಾಧಾನ ಕೇಳಿಬಂದಿತ್ತು.ಹೀಗಾಗಿ ಇವರ ಗೆಲುವು ಕಷ್ಟ ಎನ್ನಲಾಗಿತ್ತು. ಆದರೆ ಕಳೆದ ಬಾರಿ ದೇಶಾದ್ಯಂತ ಎದ್ದಿದ್ದ ಪ್ರಧಾನಿ ಮೋದಿ ಅಲೆಯಲ್ಲಿ ಈಜಿ ದಡ ಸೇರಿಕೊಂಡ ಇವರು ಈ ಬಾರಿ ಆ ರೀತಿ ಗೆಲುವು ಸಾಧಿಸಲು ಸಾಧ್ಯವೇ ಇಲ್ಲ ಎಂಬ ವರದಿಗಳು ಬರುತ್ತಿವೆ.
ರಾಜ್ಯ ಮತ್ತು ಕೇಂದ್ರ ನಾಯಕತ್ವ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಶೋಭಾ ಕರಂದ್ಲಾಜೆ ಅವರನ್ನು ಕಣಕ್ಕಿಳಿಸಿದರೆ ಗೆಲುವಿನ ಸಾಧ್ಯತೆ ಎಷ್ಟಿದೆ ಎಂಬ ಕುರಿತಾಗಿ ಪ್ರತ್ಯೇಕ ಸಮೀಕ್ಷೆ ನಡೆಸಿದ್ದು ಯಾವ ಸಮೀಕ್ಷೆಯಲ್ಲೂ ಇವರಿಗೆ ಪೂರಕವಾದ ವರದಿಗಳು ಲಭ್ಯವಾಗಿಲ್ಲ ಎಂದು ಮೂಲಗಳು ತಿಳಿಸಿವೆ.
ಆಗೊಮ್ಮೆ, ಈಗೊಮ್ಮೆ ಕಾರ್ಯಕರ್ತರ ಜೊತೆ ಬೆರೆಯುತ್ತಿದ್ದ ಶೋಭಾ ಕರಂದ್ಲಾಜೆ ಅವರು ಕೇಂದ್ರ ಕೃಷಿ ಮಂತ್ರಿಯಾದ ನಂತರದಲ್ಲಿ ಕ್ಷೇತ್ರದೊಂದಿಗಿನ ಸಂಪರ್ಕ ಕಡಿಮೆ ಮಾಡಿಕೊಂಡಿದ್ದಾರೆ ಯಾವುದಾದರೂ ವಿಶೇಷ ಸಂದರ್ಭ ಇದ್ದಾಗ ಮಾತ್ರ ಉಡುಪಿ ಅಥವಾ ಚಿಕ್ಕಮಗಳೂರು ಜಿಲ್ಲಾ ಕೇಂದ್ರ ಸ್ಥಾನದಲ್ಲಿ ಕಾಣಿಸಿಕೊಂಡಿದ್ದನ್ನು ಬಿಟ್ಟರೆ ಬೇರೆ ಕಡೆ ಇವರ ಓಡಾಟ ಕಡಿಮೆ ಎಂದು ಹೇಳಲಾಗುತ್ತಿದೆ ಹೀಗಾಗಿ ಅಲ್ಲಿನ ಬಹುತೇಕ ನಾಯಕರು ಮತ್ತು ಕಾರ್ಯಕರ್ತರು ಇವರ ಬಗ್ಗೆ ಬೇಸರ ಹೊಂದಿದ್ದಾರೆ ಎಂಬ ವರದಿಗಳು ನಾಯಕತ್ವವನ್ನು ತಲುಪಿದೆ.
ಜನ ಸಾಮಾನ್ಯರೂ ಕೂಡ ಶೋಭಾ ಅವರ ಪರವಾಗಿಲ್ಲ. ಕಾರ್ಯಕರ್ತರು ಪೂರ್ಣ ಮನಸ್ಸಿನಿಂದ ಇವರ ಪರವಾಗಿ ಕೆಲಸ ಮಾಡುವುದಿಲ್ಲ. ಚಿಕ್ಕಮಗಳೂರಿನಲ್ಲಿ ಪಕ್ಷದ ಶಾಸಕರಿಲ್ಲ.ಉಡುಪಿಯ ಯಾವುದೇ ಶಾಸಕರೂ ಇವರ ಪರವಾಗಿಲ್ಲ ಎಂಬ ವರದಿಗಳಿವೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ಇನ್ನೂ ಇವರ ಎದುರಾಳಿಯಾಗಿ ಸದ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿರುವ ಜಯಪ್ರಕಾಶ್ ಹೆಗಡೆ ಅವರು ಕಾಂಗ್ರೆಸ್ ನಿಂದ ಸ್ಪರ್ಧೆಗಿಳಿಯುವ ಸಾಧ್ಯತೆ ಇದೆ. ಸದ್ಯ ಬಿಜೆಪಿಯಲ್ಲಿರುವ ಜಯಪ್ರಕಾಶ್ ಹೆಗಡೆಯವರು ಹಿಂದುಳಿದ ವರ್ಗಗಳ ಆಯೋಗದ ತಮ್ಮ ಅಧಿಕಾರ ಅವಧಿ ಪೂರ್ಣಗೊಳ್ಳುತ್ತಿದ್ದಂತೆ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ. ಆನಂತರ ಅವರು ಉಡುಪಿ – ಚಿಕ್ಕಮಗಳೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಸಾಧ್ಯತೆಗಳು ನಿಚ್ಚಳವಾಗಿವೆ ಹೀಗಾದಲ್ಲಿ ಶೋಭಾ ಕರಂದ್ಲಾಜೆ ಅವರು ಪ್ರಬಲ ಪೈಪೋಟಿ ಎದುರಿಸಬೇಕಾಗುತ್ತದೆ ಇದರಿಂದ ಅವರು ಗೆಲುವು ಸಾಧಿಸಲು ಸಾಧಿಸುವುದು ಕಷ್ಟ ಎಂಬ ವರದಿಗಳು ನಾಯಕತ್ವವನ್ನು ತಲುಪಿವೆ.
ಹೀಗಾಗಿ ಉಡುಪಿ ಚಿಕ್ಕಮಗಳೂರು ಕ್ಷೇತ್ರದಿಂದ ಮಾಜಿ ಶಾಸಕರಾದ ಸಿ.ಟಿ.ರವಿ ಅಥವಾ ಡಿ.ಎನ್.ಜೀವರಾಜ್ ಇಲ್ಲವೇ ಮಾಜಿ ಮಂತ್ರಿ ಹಾಗೂ ಮೀನುಗಾರ ಸಮುದಾಯಕ್ಕೆ ಸೇರಿರುವ ಪ್ರಮೋದ್ ಮಧ್ವರಾಜ್ ಅವರನ್ನು ಕಣಕ್ಕಿಳಿಸಬೇಕು ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.
ಬಿಜೆಪಿಯಲ್ಲಿ ಮೀನುಗಾರ ಸಮುದಾಯದ ನಾಯಕತ್ವ ಕೊರತೆ ಇದ್ದು ಇದನ್ನು ಬರಿಸುವ ದೃಷ್ಟಿಯಿಂದ ಪ್ರಮೋದ್ ಮಧ್ವರಾಜ್ ಅವರಿಗೆ ಟಿಕೆಟ್ ನೀಡಿದ್ದೆ ಆದಲ್ಲಿ ಪಕ್ಷಕ್ಕೆ ದೊಡ್ಡ ಪ್ರಮಾಣದ ಅನುಕೂಲವಾಗಲಿದೆ ಎಂಬ ಲೆಕ್ಕಾಚಾರಗಳು ಕೇಳಿಬಂದಿವೆ.
ಹೀಗಾಗಿ ಶೋಭಾ ಕರಂದ್ಲಾಜೆ ಅವರು ಈ ಕ್ಷೇತ್ರದಿಂದ ಕಣಕ್ಕಿಳಿಯುವ ಸಾಧ್ಯತೆ ತೀರಾ ಕಡಿಮೆ ಇದೆ ಎನ್ನುತ್ತದೆ ಬಿಜೆಪಿಯ ಮೂಲಗಳು. ಶೋಭಾ ಅವರನ್ನು ಈ ಕ್ಷೇತ್ರದ ಬದಲಾಗಿ ಬೆಂಗಳೂರಿನ ಉತ್ತರ ಲೋಕಸಭಾ ಕ್ಷೇತ್ರ ಅಥವಾ ತುಮಕೂರು ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸುವುದು ಸೂಕ್ತ ಎನ್ನುವ ವಾದ ಕೇಳಿಬಂದಿದೆ.ಇದಕ್ಕೆ ಪ್ರಮುಖ ಕಾರಣ ಈ ಎರಡು ಕ್ಷೇತ್ರಗಳಲ್ಲಿ ಒಕ್ಕಲಿಗ ಸಮುದಾಯದ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಅಲ್ಲದೆ ಈ ಹಿಂದೆ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಯಶವಂತಪುರ ವಿಧಾನಸಭಾ ಕ್ಷೇತ್ರದಿಂದ ಗೆಲುವು ಸಾಧಿಸಿದ್ದ ಶೋಭಾ ಅವರು ಕ್ಷೇತ್ರದಲ್ಲಿ ಇನ್ನು ಜನಪ್ರಿಯತೆ ಉಳಿಸಿಕೊಂಡಿದ್ದಾರೆ ಎಂಬ ವಾದ ಕೇಳಿ ಬರುತ್ತಿದೆ ಮತ್ತೊಂದೆಡೆ ಒಮ್ಮೆ ತುಮಕೂರು ಜಿಲ್ಲಾ ಉಸ್ತುವಾರಿ ಮಂತ್ರಿಯಾಗಿ ಕೆಲಸ ಮಾಡಿ ಜಿಲ್ಲೆಯಲ್ಲಿ ಸಾಕಷ್ಟು ಜನಪ್ರಿಯತೆ ಗಳಿಸಿದ್ದರು ಹೀಗಾಗಿ ಅವರನ್ನು ತುಮಕೂರಿನಿಂದ ಕಣಕ್ಕಿಳಿಸಿದರೆ ಗೆಲುವು ಸುಲಭ ಎನ್ನಲಾಗುತ್ತಿದೆ.
ಇದರ ನಡುವೆ ಈ ಕ್ಷೇತ್ರ ಬಿಜೆಪಿ ಮೈತ್ರಿಕೂಟದಲ್ಲಿರುವ ಜೆಡಿಎಸ್ ಗೆ ಬಿಟ್ಟು ಕೊಡಲಾಗುತ್ತದೆ ಎಂಬ ಮಾತೂ ಕೂಡ ಇದೆ.ಹಾಗೇನಾದರೂ ಆದರೆ ಶೋಭಾ ಅವರು ಇಲ್ಲಿಂದ ಸ್ಪರ್ಧೆ ಸಾಧ್ಯವಿಲ್ಲ.
ಇದೆಲ್ಲದರ ನಡುವೆ ಶೋಭಾ ಕರಂದ್ಲಾಜೆ ಮತ್ತು ಬಿಜೆಪಿ ರಾಜ್ಯಧ್ಯಕ್ಷ ಬಿ ವೈ ವಿಜಯೇಂದ್ರ ಅವರ ನಡುವಿನ ಸಂಬಂಧ ಅಷ್ಟಕಷ್ಟೇ. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದ ವೇಳೆ ಪಕ್ಷ ಮತ್ತು ಸರ್ಕಾರದ ಮೇಲೆ ಸಾಕಷ್ಟು ಹಿಡಿತ ಸಾಧಿಸಿದ್ದ ಶೋಭಾ ಕರಂದ್ಲಾಜೆ ಅವರು ವಿಜಯೇಂದ್ರ ಸೇರಿದಂತೆ ಯಡಿಯೂರಪ್ಪ ಅವರ ಕುಟುಂಬ ಸದಸ್ಯರು ಪಕ್ಷ ಮತ್ತು ಸರ್ಕಾರದಿಂದ ದೂರ ಇರುವಂತೆ ಮಾಡಿದ್ದರು ಎನ್ನುವ ಅಪವಾದ ಇದೆ ಅಂದಿನಿಂದ ಶೋಭಾ ಅವರೊಂದಿಗೆ ಒಂದು ರೀತಿಯಲ್ಲಿ ದ್ವೇಷ ಸಾಧಿಸುತ್ತಿರುವ ಯಡಿಯೂರಪ್ಪ ಅವರ ಕುಟುಂಬ ಇದೀಗ ಶೋಭಾ ಅವರನ್ನು ಸಾಕಷ್ಟು ದೂರ ಇರಿಸಿದೆ ವಿಜಯೇಂದ್ರ ಪಕ್ಷದ ಅಧ್ಯಕ್ಷರಾಗಿ ನೇಮಕವಾದ ನಂತರ ಅವರನ್ನು ಭೇಟಿ ಮಾಡಲು ಶೋಭಾ ಕರಂದ್ಲಾಜೆ ಸಾಕಷ್ಟು ಸಲ ಪ್ರಯತ್ನಿಸಿದರಾದರೂ ಅದು ಸಾಧ್ಯವಾಗಿಲ್ಲ ತಮ್ಮ ರಾಜಕೀಯ ಗುರು ಯಡಿಯೂರಪ್ಪ ಅವರನ್ನು ಭೇಟಿ ಮಾಡಲು ಕೂಡ ಶೋಭಾ ಕರಂದ್ಲಾಜೆ ಅವರಿಗೆ ಅವಕಾಶ ಸಿಗುತ್ತಿಲ್ಲ ಎನ್ನಲಾಗಿದೆ.
ಇದಕ್ಕೆ ಮತ್ತೂ ಒಂದು ಕಾರಣವೆಂದರೆ ಯಡಿಯೂರಪ್ಪ ಅವರು ಅಧಿಕಾರದಿಂದ ದೂರವಾದ ನಂತರ ಶೋಭಾ ಅವರು ಬಿಜೆಪಿಯಲ್ಲಿ ಸಾಕಷ್ಟು ಪ್ರಭಾವಿಯಾಗಿದ್ದ ಬಿ.ಎಲ್.ಸಂತೋಷ್ ಅವರ ಪಾಳಯದಲ್ಲಿ ಗುರುತಿಸಿಕೊಂಡಿದ್ದರು.ಈ ಬಣ ಶೋಭಾ ಅವರನ್ನು ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ನೇಮಿಸಲು ಪ್ರಯತ್ನ ನಡೆಸಿದ್ದು ಈಗ ಗುಟ್ಟಾಗಿಯೇನೂ ಉಳಿದಿಲ್ಲ.ಹೀಗಾಗಿ ವಿಜಯೇಂದ್ರ ಮತ್ತು ಅವರ ಆಪ್ತ ವಲಯ ಎಷ್ಟು ಸಾಧ್ಯವೋ ಅಷ್ಟರಮಟ್ಟಿಗೆ ಶೋಭಾ ಅವರನ್ನು ದೂರವಿಡುವ ಪ್ರಯತ್ನ ಮಾಡುತ್ತಿದೆ.
ಅಭ್ಯರ್ಥಿಯ ಆಯ್ಕೆಯ ವಿಚಾರಕ್ಕೆ ಬಂದಾಗ ವಿಜಯೇಂದ್ರ ಮತ್ತು ಅವರ ಆಪ್ತ ಬಡ ವಿವಿಧ ಸಮೀಕ್ಷೆಗಳಲ್ಲಿ ಶೋಭಾ ಕರಂದ್ಲಾಜೆ ಅವರ ವಿರುದ್ಧವಾಗಿರುವ ಅಂಶಗಳನ್ನು ಮುಂದೆ ಮಾಡಿ ಅವರಿಗೆ ಟಿಕೆಟ್ ತಪ್ಪಿಸುವ ಸಾಧ್ಯತೆಯೇ ಹೆಚ್ಚಾಗಿದೆ ಎಂದು ಹೇಳುತ್ತವೆ ಬಿಜೆಪಿಯ ಉನ್ನತ ಮೂಲಗಳು ಶೋಭಾ ಕರಂದ್ಲಾಜೆ ಅವರು ಕಣಕ್ಕಿಳಿಯಲು ಬಯಸಿರುವ ಕ್ಷೇತ್ರದಲ್ಲಿ ಸಾಕಷ್ಟು ಪೈಪೋಟಿ ಏರ್ಪಡುವಂತೆ ಮಾಡುತ್ತಿರುವ ವಿಜಯೇಂದ್ರ ಅವರ ಆಪ್ತಬಣ ತುಮಕೂರಿನಿಂದ ಮಾಜಿ ಮಂತ್ರಿ ಜೆಸಿ ಮಾತು ಸ್ವಾಮಿ ಅವರನ್ನು ಕಣಕ್ಕಿಳಿಸಬೇಕು ಈ ಮೂಲಕ ಲಿಂಗಾಯತರ ಮತ ಗಳಿಸಬಹುದು ಎಂಬ ವಾದ ಮಂಡಿಸುತ್ತದೆ ಅದೇ ರೀತಿಯಲ್ಲಿ ಬೆಂಗಳೂರು ಉತ್ತರ ಕ್ಷೇತ್ರದಿಂದ ಹಾಲಿ ಸಂಸದ ಡಿವಿ ಸದಾನಂದ ಗೌಡ ಇಲ್ಲವೇ ಮಾಜಿ ಸಚಿವ ಸಿ ಟಿ ರವಿ ಅಥವಾ ಬೆಂಗಳೂರಿನ ಯಾವುದಾದರು ಪ್ರಭಾವಿ ನಾಯಕರನ್ನು ಕಣಕ್ಕಿಳಿಸುವುದು ಸೂಕ್ತ ಎಂಬ ವಾದ ಮಂಡಿಸುತ್ತಿದೆ ಹೀಗಾಗಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಶೋಭಾ ಕರಂದ್ಲಾಜೆ ಅವರು ಕಣಕ್ಕಿಳಿಯುವುದು ಅನುಮಾನ ಎಂದು ಹೇಳಲಾಗುತ್ತಿದೆ.