ಪ್ರಸಕ್ತ ದಿನಗಳಲ್ಲಿ ಆನ್ಲೈನ್ ಆಹಾರ ವಿತರಣಾ ಸೇವೆ (online food delivery services) ಯಲ್ಲಿ ಹೆಚ್ಚು ಬಳಕೆಯಲ್ಲಿರುವ ಕಂಪನಿ ಎಂದರೆ, Zomato. ಬಹು ವ್ಯಾಪಕವಾಗಿ ತನ್ನ ಸೇವೆಗಳನ್ನು ಪಸರಿಸಿಕೊಂಡಿರುವ Zomato, ಇದೀಗ 225 ಸಣ್ಣ ನಗರಗಳಲ್ಲಿ ತನ್ನ ಸೇವೆಯನ್ನು ಸ್ಥಗಿತಗೊಳಿಸುವ ನಿರ್ಧಾರವನ್ನು ವ್ಯಕ್ತಪಡಿಸಿದೆ. ಇದಕ್ಕೆ ಕಾರಣ, ಕಂಪನಿ ಅನುಭವಿಸಿದ 346 ಕೋಟಿ ರೂ. ಗಳ ನಷ್ಟ. ಕಳೆದ ಡಿಸೆಂಬರ್ ಅಂತ್ಯಕ್ಕೆ ತ್ರೈಮಾಸಿಕ ವರದಿಯಲ್ಲಿ 346 ಕೋಟಿ ರೂ. ಗಳ ನಷ್ಟ ಕಂಡುಬಂದಿತ್ತು.
ಇತ್ತೀಚಿನ ಕೆಲವು ತಿಂಗಳುಗಳಿಂದ ಆಹಾರ ವಿತರಣೆಯ ಬೇಡಿಕೆಗಳು ಹಠಾತ್ತನೆ ಕುಸಿದಿದ್ದರಿಂದ ಕಂಪನಿ ಈ ನಷ್ಟವನ್ನು ಅನುಭವಿಸುವಂತಾಯಿತು. ಆ ಹಿನ್ನೆಲೆಯಲ್ಲಿ, ಹೆಚ್ಚು ಬೇಡಿಕೆಯಿರದ ಮತ್ತು ಹೆಚ್ಚು ಲಾಭದಾಯಕವಾಗಿರದಿದ್ದ 225 ಸಣ್ಣ ಊರುಗಳನ್ನು ಕಂಪನಿ ತನ್ನ ಸೇವಾ ಪಟ್ಟಿಯಿಂದ ಹೊರತೆಗೆದಿದೆ. ಈ ಕ್ರಮದಿಂದ ಯಾವ ನಗರಗಳು ಪ್ರಭಾವಿತವಾಗಿವೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ವಹಿವಾಟನ್ನು ಮತ್ತೆ ಲಾಭದೆಡೆ ತಿರುಗಿಸುವ ನಿಟ್ಟಿನಲ್ಲಿ, ಜನವರಿ ಅಂತ್ಯದಲ್ಲಿ ‘ZOMATO GOLD ‘ ಎನ್ನುವ ಹೊಸ ‘ಗೋಲ್ಡ್ ಸಬ್ಸ್ಕ್ರಿಪ್ಷನ್’ ಸೌಲಭ್ಯವನ್ನು ಆರಂಭಿಸಲಾಗಿದೆ. ಇದಕ್ಕೆ ಈಗಾಗಲೇ 9 ಲಕ್ಷಕ್ಕೂ ಅಧಿಕ ಜನರು ನೋಂದಣಿಯಾಗಿದ್ದು, ಈ ಸೌಲಭ್ಯ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ ಎಂದು ಕಂಪನಿ ತಿಳಿಸಿದೆ. ಇವೆಲ್ಲದರ ನಡುವೆಯೇ, Zomato ಸಂಸ್ಥಾಪಕ ದೀಪಿಂದರ್ ಗೋಯಲ್ (Deepinder Goyal, Zomato founder) 800 ಹೊಸ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳುವ ಸುದ್ದಿಯನ್ನೂ ಘೋಷಿಸಿದ್ದಾರೆ. ಇದರಿಂದ ಉದ್ಯೋಗಾರ್ಥಿಗಳಿಗೆ ಹೊಸ ಭರವಸೆ ದೊರೆತಿದೆ.