ಬೆಂಗಳೂರು,ಜೂ.17:
ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ವಿರೋಧಿಸಿ ಬಿಜೆಪಿ ರಾಜ್ಯ ಸರ್ಕಾರದ ವಿರುದ್ಧ ನಡೆಸುತ್ತಿದ್ದ ಅಣಕು ಶವ ಯಾತ್ರೆಯ ವೇಳೆ ಪಕ್ಷದ ಹಿರಿಯ ನಾಯಕ ಹಾಗೂ ವಿಧಾನಪರಿಷತ್ ಮಾಜಿ ಸದಸ್ಯ ಭಾನುಪ್ರಕಾಶ್ ಹಠಾತ್ ಕುಸಿದು ಬಿದ್ದು ಮೃತಪಟ್ಟಿರುವ ಧಾರಣ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಕರೆ ನೀಡಿದ್ದ ಪ್ರತಿಭಟನೆಯಲ್ಲಿ ಶಿವಮೊಗ್ಗದ ಜನಪ್ರತಿನಿಧಿಗಳು ಮತ್ತು ಪಕ್ಷದ ನೂರಾರು ಮಂದಿ ಕಾರ್ಯಕರ್ತರು ಪಾಲ್ಗೊಂಡಿದ್ದರು. ದರ ಏರಿಕೆ ವಿರೋಧಿಸಿ ವಿಧಾನ ಪರಿಷತ್ ಸದಸ್ಯ ಡಿಎಸ್ ಅರುಣ್ ಕುದುರೆ ಏರಿಗೊಂದು ಗಮನ ಸೆಳೆದರೆ, ಶಾಸಕ ಚನ್ನಬಸಪ್ಪ ಅಣಕು ಶವಯಾತ್ರೆ ನಡೆಸುವ ಮೂಲಕ ಆಕ್ರೋಶ ಹೊರ ಹಾಕಿದರು.
ಇದರಲ್ಲಿ ಪಾಲ್ಗೊಂಡಿದ್ದ ವಿಧಾನ ಪರಿಷತ್ ಮಾಜಿ ಸದಸ್ಯ ಭಾನುಪ್ರಕಾಶ್ ಅವರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಮೊಳಗಿಸಿದರು ಆನಂತರ ಎಲ್ಲ ಕಾರ್ಯಕರ್ತರು ರಸ್ತೆ ಮಧ್ಯದಲ್ಲಿ ಕುಳಿತು ರಘುಪತಿ ರಾಘವ ಭಜನೆ ಹಾಡತೊಡಗಿದರು ಈ ವೇಳೆ ನಾಯಕ ಭಾನುಪ್ರಕಾಶ್ ಅವರು ಏಕಾಏಕಿ ಕುಸಿದು ಬಿದ್ದರು. ತಕ್ಷಣವೇ ಅವರನ್ನು ಸಮೀಪದ ಆಸ್ಪತ್ರೆಗೆ ಕೊಂಡಯ್ಯಲಾಯಿತು ಆದರೆ ಆ ವೇಳೆಗಾಗಲೇ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು. ಅವರನ್ನು ಪರೀಕ್ಷಿಸಿದ ವೈದ್ಯರು ತೀವ್ರ ಹೃದಯಘಾತದಿಂದ ಮೃತಪಟ್ಟಿದ್ದಾರೆ ಎಂದು ಪ್ರಕಟಿಸಿದರು.
ಈ ಮೂಲಕ ರಾಜ್ಯ ಸರ್ಕಾರದ ವಿರುದ್ಧ ನಡೆಯುತ್ತಿದ್ದ ಹಾಸ್ಯ , ವಿಡಂಬನೆಯ ಪ್ರತಿಭಟನೆಯ ತಾಣ ಶೋಕಸಾಗರವಾಗಿ ಪರಿವರ್ತನೆಯಾಯಿತು.
ನಿಷ್ಠಾವಂತ ಕಾರ್ಯಕರ್ತ:
ಶಿವಮೊಗ್ಗದಲ್ಲಿ ಬಿಜೆಪಿ ನಾಯಕರಾದ ಈಶ್ವರಪ್ಪ ಯಡಿಯೂರಪ್ಪ ಮತ್ತು ಶಂಕರಮೂರ್ತಿ ಅವರೊಂದಿಗೆ ಆತ್ಮೀಯ ಒಡನಾಟ ಹೊಂದಿದ್ದ ಭಾನುಪ್ರಕಾಶ್ ಅವರು ಸಂಘ ಪರಿವಾರದ ನಿಷ್ಠಾವಂತ ಕಾರ್ಯಕರ್ತರಾಗಿದ್ದರು.
ರಾಜ್ಯ ಆರ್ ಎಸ್ ಎಸ್ ನ ಶಕ್ತಿಕೇಂದ್ರ ಹಾಗೂ ಸಂಸ್ಕೃತ ಗ್ರಾಮ ಮತ್ತೂರಿನವರಾದ ಭಾನುಪ್ರಕಾಶ್ ಅವರು ಬಾಲ್ಯದಿಂದಲೂ ಸಂಘ ಪರಿವಾರದ ಕಾರ್ಯಕರ್ತರಾಗಿ ಆನಂತರ ಜನಸಂಘದ ಮೂಲಕ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದರು. ಶಿವಮೊಗ್ಗ ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿ ಪಕ್ಷದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ವಿವಿಧ ಹುದ್ದೆಗಳನ್ನು ನಿಭಾಯಿಸಿದವರು ಕಳೆದ 2013 ರಿಂದ 2019 ರವರೆಗೆ ವಿಧಾನ ಪರಿಷತ್ ಸದಸ್ಯರಾಗಿದ್ದರು.
ಭಾನುಪ್ರಕಾಶ್ ಅವರ ನಿಧನಕ್ಕೆ ಬಿಜೆಪಿ ಮತ್ತು ಸಂಘ ಪರಿವಾರದ ನಾಯಕರು ಆಘಾತ ವ್ಯಕ್ತಪಡಿಸಿ ಕಂಬನಿ ಮಿಡಿದಿದ್ದಾರೆ.
ಅಣಕು ಶವಯಾತ್ರೆಯಲ್ಲಿ ಕುಸಿದು ಬಿದ್ದು ಮೃತಪಟ್ಟ ಬಿಜೆಪಿ ನಾಯಕ.
Previous Articleಜನರಿಗೆ ತೊಂದರೆಯಾಗದಂತೆ ತೆರಿಗೆ ಹಾಕುತ್ತಾರಂತೆ.
Next Article CID ವಿಚಾರಣೆ ಎದುರಿಸಿದ ಯಡಿಯೂರಪ್ಪ