ಬೆಂಗಳೂರು,ಫೆ.4-
ತಂದೆ ತಾಯಿ ಇಲ್ಲದ ಅನಾಥನಿಗೆ ಆಶ್ರಯ ನೀಡಿದ್ದೇ ತಪ್ಪಾಗಿದ್ದು, ಸಾಕು ತಂದೆಗೆ ಬೆದರಿಕೆ ಹಾಕುತ್ತಿದ್ದದಲ್ಲದೆ ಅವರ ಒಡೆತನದ ಮನೆಗಳ ಬಾಡಿಗೆದಾರರಿಗೆ ಮನೆ ಖಾಲಿ ಮಾಡುವಂತೆ ಧಮ್ಕಿ ಹಾಕುತ್ತಿದ್ದವನನ್ನು ಸದಾಶಿವನಗರ ಪೊಲೀಸರು ಬಂಧಿಸಿದ್ದಾರೆ.
ಉತ್ತಮ್ ಕುಮಾರ್ ಎಂಬಾತ ಬಂಧಿತ ಆರೋಪಿಯಾಗಿದ್ದು, ಈತನನ್ನು ಮಂಜುನಾಥ್ ಅವರು ದತ್ತು ಪಡೆದು ಸಾಕಿ ಸಲುಹಿದ್ದರು. ಬಂಧಿತ ಉತ್ತಮ್ ಕುಮಾರ್ ನಿಯತ್ತಿಲ್ಲದ ಮಗನಾಗಿ 2018 ರಲ್ಲಿ ಕ್ಷುಲ್ಲಕ ವಿಚಾರಕ್ಕೆ ಪ್ರೀತಿ ನೀಡಿ, ಸಾಕಿದ ತಾಯಿಯ ಮೈಮೇಲೆ ಪೆಟ್ರೊಲ್ ಸುರಿದು ಬೆಂಕಿ ಹಚ್ಚಿದ್ದರಿಂದ ಈತನನ್ನು ಬಂಧಿಸಿ ಜೈಲಿಗಟ್ಟಲಾಗಿತ್ತು. ಒಂದೂವರೆ ವರ್ಷದ ಹಿಂದೆ ಜೈಲಿನಿಂದ ಹೊರ ಬಂದಿರುವ ಆರೋಪಿ ಉತ್ತಮ್ ಕುಮಾರ್ನ ಬುದ್ಧಿ ಸ್ವಲ್ಪವೂ ಬದಲಾಗದೆ, ವಾಪಸ್ ತನ್ನ ಸಾಕು ತಂದೆ ಬಳಿ ಬಂದು ಅವರಿಗೆ ಬೆದರಿಕೆ ಹಾಕುವುದಲ್ಲದೇ ಅವರ ಒಡೆತನದ ಮನೆಗಳ ಬಾಡಿಗೆದಾರರ ಮನೆಗೆ ನುಗ್ಗಿ ದಾಂಧಲೆ ಮಾಡಿದ್ದಾನೆ.
ತಂದೆ ಮಂಜುನಾಥ್ ಹೆಸರಿನಲ್ಲಿರುವ ಮನೆಗಳ ಬಾಡಿಗೆ ತನಗೆ ಬರಬೇಕು ಎಂದು ಬಾಡಿಗೆದಾರ ಮನೋಹರ್ ಪಾಂಡು ಲಮಾಣಿ ಎಂಬುವವರ ಮನೆಗೆ ತೆರಳಿ ಮಾರಕಾಸ್ತ್ರ ತೋರಿಸಿ ಆವಾಜ್ ಹಾಕಿದ್ದ. ಹಾಗಾಗಿ ವಿಚಾರ ತಿಳಿದ ಸದಾಶಿವನಗರ ಠಾಣಾ ಪೊಲೀಸರು ಆರೋಪಿಯನ್ನು ಬಂಧಿಸಲು ಹೋದಾಗ ಮಾರಕಾಸ್ತ್ರದ ಸಮೇತ ತನ್ನ ಮನೆಗೆ ನುಗ್ಗಿದ್ದ ಆರೋಪಿ ಹೈಡ್ರಾಮಾ ಸೃಷ್ಟಿಸಿದ್ದ. ಮನೆಯಲ್ಲಿರುವ ಯಾರಿಗೆ ಏನು ಮಾಡಿಬಿಡ್ತಾನೊ ಎನ್ನುವ ಭಯದಲ್ಲಿದ್ದ ಪೊಲೀಸರು ಕೊನೆಗೂ ಆರೋಪಿಯನ್ನು ಬಂಧಿಸಿದ್ದು, ಶಸ್ತ್ರಾಸ್ತ್ರ ಕಾಯ್ದೆಯಡಿ ಜೈಲಿಗಟ್ಟಿದ್ದಾರೆ.
