ನವದೆಹಲಿ.
ದೇಶದ ರಾಜಕೀಯ ಇತಿಹಾಸದಲ್ಲಿ ತಮ್ಮ ಅತ್ಯುತ್ತಮ ವಾಗ್ಜರಿ, ಮೋಡಿ ಮಾಡುವ ಮಾತುಗಾರಿಕೆ ಮೂಲಕ ಪ್ರಧಾನ ಮಂತ್ರಿ ಹುದ್ದೆಗೇರಿದ ನರೇಂದ್ರ ಮೋದಿ ಅವರಿಗೆ ಪರ್ಯಾಯ ನಾಯಕನ ಹುಡುಕಾಟದಲ್ಲಿ ಬಿಜೆಪಿ ಮತ್ತು ಸಂಘ ಪರಿವಾರ ನಿರತವಾಗಿದೆ.
ಸತತ ಮೂರನೇ ಅವಧಿಗೆ ಪ್ರಧಾನಿ ಹುದ್ದೆ ಅಲಂಕರಿಸಿರುವ ನರೇಂದ್ರ ಮೋದಿ ಅವರು 70 ವರ್ಷವನ್ನು ದಾಟಿದ್ದಾರೆ.ಹೀಗಾಗಿ ಇದೀಗ ಅವರಿಗೆ ಸರಿಸಾಟಿಯಾಗಬಲ್ಲ ನಾಯಕನ ಅವಶ್ಯಕತೆ ಇದೆ ಎಂದು ಮನಗಂಡಿರುವ ಸಂಘ ಪರಿವಾರ ಇದಕ್ಕಾಗಿ ಕಳೆದ ಐದು ವರ್ಷಗಳಿಂದ ಹುಡುಕಾಟ ನಡೆಸಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ನಂತರದಲ್ಲಿ ಸರ್ಕಾರ ಮತ್ತು ಪಕ್ಷದಲ್ಲಿ ಅತ್ಯಂತ ಪ್ರಭಾವಿಯಾಗಿರುವ ಗೃಹ ಮಂತ್ರಿ ಅಮಿತ್ ಶಾ ಅವರು ಸ್ವಾಭಾವಿಕ ಆಯ್ಕೆ ಎಂದು ಹೇಳಲಾಗುತ್ತದೆಯಾದರೂ ಸಂಘ ಪರಿವಾರ ಇದಕ್ಕೆ ಸಹಮತ ಹೊಂದಿಲ್ಲ.ಅಲ್ಲದೆ ಬಿಜೆಪಿಯಲ್ಲಿರುವ ಹಲವು ಪ್ರಭಾವಿ ನಾಯಕರು ಕೂಡ ಅಮಿತ್ ಶಾ ಅವರನ್ನು ಪ್ರಧಾನಿ ಮೋದಿ ಅವರ ಸ್ಥಾನದಲ್ಲಿ ನೋಡಲು ಸಿದ್ದರಿಲ್ಲ.
ಹೀಗಾಗಿ ಸಂಘ ಪರಿವಾರ ಮತ್ತು ಬಿಜೆಪಿಯ ಎಲ್ಲ ನಾಯಕರು ಒಪ್ಪುವಂತಹ ವ್ಯಕ್ತಿಗಾಗಿ ಹುಡುಕಾಟ ನಡೆಸಿದ್ದು ಸಹಜವಾಗಿ ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಅವರ ಹೆಸರು ಕೇಳಿಬಂದಿತ್ತು.
ಆದರೆ ಅವರ ವಿರುದ್ಧ ಇತ್ತೀಚೆಗೆ ನಡೆದ ರಸ್ತೆ ಅಭಿವೃದ್ಧಿ ಕಾಮಗಾರಿಯಲ್ಲಿನ ಅಕ್ರಮ ಆರೋಪ ಹಾಗೂ ಹಲವು ಶೆಲ್ ಕಂಪೆನಿಗಳಲ್ಲಿ ಇವರು ಹಣ ತೊಡಗಿಸಿದ್ದಾರೆ ಎಂಬ ದೂರುಗಳು ಸಂಘ ಪರಿವಾರವನ್ನು ತಲುಪಿದೆ.
ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಎದುರಾಗಿ ಪರ್ಯಾಯ ನಾಯಕರಾಗಿ ನಿತಿನ್ ಗಡ್ಕರಿ ಹೊರಹೊಮ್ಮಲಿದ್ದಾರೆ ಎಂದು ಭಾವಿಸಿದ್ದ ಸಂಘ ಪರಿವಾರದ ನಾಯಕರು ಮತ್ತು ಬಿಜೆಪಿ ಮುಖಂಡರಿಗೆ ಈ ಬೆಳವಣಿಗೆ ತೀರಾ ಬೇಸರ ತರಿಸಿದೆ.
ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪರ್ಯಾಯ ಯಾರು ಎಂದು ಹುಡುಕಾಡುತ್ತಿದ್ದ ಸಂಘ ಪರಿವಾರದ ನಾಯಕರಿಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಹಾಗೂ ಚಿತ್ಪಾವನ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ದೇವೇಂದ್ರ ಫಡ್ನವೀಸ್ ಆಶಾಕಿರಣವಾಗಿ ಗೋಚರಿಸಿದ್ದಾರೆ.
ಅದರಲ್ಲೂ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರ ರಾಜಕೀಯ ತಂತ್ರಗಾರಿಕೆಯನ್ನು ನೆಚ್ಚಿಕೊಳ್ಳದೆ ಸಂಘ ಪರಿವಾರದ ಕಾರ್ಯಕರ್ತರನ್ನು ಸಂಪೂರ್ಣವಾಗಿ ಬಳಸಿಕೊಂಡು ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗ ಮತ್ತು ಗಿರಿಜನರ ಮತ ಬ್ಯಾಂಕ್ ಸೃಷ್ಟಿಸುವ ಮೂಲಕ ಅಧಿಕಾರ ಚುಕ್ಕಾಣಿ ಹಿಡಿದಿದ್ದು ಸಂಘ ಪರಿವಾರದ ನಾಯಕರಿಗೆ ಹೊಸ ಭರವಸೆ ಮೂಡುವಂತೆ ಮಾಡಿದೆ.
ಮರಾಠವಾಡ ವಿಧರ್ಭಪ್ರಾಂತ್ಯಗಳಲ್ಲಿ ಬಿಜೆಪಿಯ ಕಮಲ ಅರಳುವಂತೆ ಮಾಡಿರುವ ದೇವೇಂದ್ರ ಫಡ್ನವೀಸ್ ನಾಗಪುರದ ನೀಲಿ ಕಣ್ಣಿನ ಹುಡುಗನಾಗಿ ಹೊರಹೊಮ್ಮುತ್ತಿದ್ದಾರೆ ಎಂಬ ಸುದ್ದಿಯನ್ನು ತಿಳಿದ ಅಮಿತ್ ಶಾ ಈಗಾಗಲೇ ಅಡ್ಡಗಾಲು ಹಾಕಲು ಮುಂದಾಗಿದ್ದಾರೆ.
ವಿಧಾನಸಭೆ ಚುನಾವಣೆ ಸಮಯದಲ್ಲಿ ಪ್ರಚಾರ ತಂತ್ರಗಾರಿಕೆ ಸೇರಿದಂತೆ ಹಲವಾರು ವಿಷಯಗಳಲ್ಲಿ ದೇವೇಂದ್ರ ಫಡ್ನವೀಸ್ ಅವರ ಓಟಕ್ಕೆ ಕಡಿವಾಣ ಹಾಕಲು ಯತ್ನಿಸಿದ ಅಮಿತ್ ಶಾ ಪ್ರಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಹೆಚ್ಚು ಭಾಗಿಯಾಗದಂತೆ ನೋಡಿಕೊಂಡರು ಅಷ್ಟೇ ಅಲ್ಲ ತಾವು ವಿವಾದವೊಂದನ್ನು ಸೃಷ್ಟಿಸಿ ಮಣಿಪುರ ಬಿಕ್ಕಟ್ಟು ಬಗೆಹರಿಸುವ ನೆಪದಲ್ಲಿ ದೆಹಲಿಯಲ್ಲೇ ಉಳಿದುಕೊಂಡರು.
ಈ ಆಡೆ ತಡೆಯ ಬಗ್ಗೆ ತಲೆ ಕೆಡಿಸಿಕೊಳ್ಳದ ದೇವೇಂದ್ರ ಫಡ್ನವೀಸ್ ಸಂಘ ಪರಿವಾರ ಕಾರ್ಯಕರ್ತರ ಬೆಂಬಲದೊಂದಿಗೆ ಭರ್ಜರಿ ಗೆಲುವು ದಾಖಲಿಸಿದರು ಇದೀಗ ಮಹಾರಾಷ್ಟ್ರ ಮುಖ್ಯಮಂತ್ರಿ ಆಗಿರುವ ಅವರಿಗೆ ಆ ಹುದ್ದೆಗೇರುವ ಸಮಯದಲ್ಲಿ ಅಮಿತ್ ಶಾ ತಮ್ಮದೇ ಪ್ರಭಾವ ಬಳಸಿ ಅಡ್ಡಿ ಉಂಟು ಮಾಡಲು ಪ್ರಯತ್ನಿಸಿದ್ದು ಈಗ ಗುಟ್ಟಾಗಿಯೇನೂ ಉಳಿದಿಲ್ಲ.
ಅಂತಿಮವಾಗಿ ಸಂಘ ಪರಿವಾರದ ಶ್ರೀ ರಕ್ಷಣೆಯೊಂದಿಗೆ ಮುಖ್ಯಮಂತ್ರಿ ಆಗಿರುವ ಫಡ್ನವೀಸ್ ಅವರನ್ನು ಇನ್ನೆರಡು ವರ್ಷ ಕಳೆದ ಬಳಿಕ ದೆಹಲಿಯಲ್ಲಿ ಉನ್ನತ ಹುದ್ದೆಗೆ ನಿಯೋಜಿಸಲಾಗುತ್ತದೆ ಆ ಮೂಲಕ ಮುಂಬರುವ ಲೋಕಸಭಾ ಚುನಾವಣೆಯ ವೇಳೆಗೆ ಪ್ರಧಾನಿ ಇಳ
ನರೇಂದ್ರ ಮೋದಿ ಅವರಿಗೆ ಪರ್ಯಾಯವಾಗಿ ಅವರನ್ನು ಬಿಂಬಿಸಲು ಸಿದ್ಧತೆ ನಡೆಸಲಾಗಿದೆ.
Previous Articleಸಂಬರಗಿ ವಿರುದ್ಧ ಪ್ರಕಾಶ್ ರೈ ದೂರು
Next Article ಈ ಹೋಟೆಲ್ ಗೆ ಹೋದವರ ಸಾವು ಗ್ಯಾರಂಟಿ