ಬೆಂಗಳೂರು, ಮಾ.15- ಈ ಬಾರಿ ಲೋಕಸಭಾ Electionಯಲ್ಲಿ ಕರ್ನಾಟಕದಿಂದ ಅತ್ಯಧಿಕ ಸ್ಥಾನ ಗೆಲ್ಲಲು ರಣತಂತ್ರ ರೂಪಿಸಿರುವ ರಾಜ್ಯ ಕಾಂಗ್ರೆಸ್ ನಾಯಕರು ಗೆಲುವಿನ ಮಾನದಂಡ ಆಧರಿಸಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಪೂರ್ಣಗೊಳಿಸಿದ್ದಾರೆ.
ಸಂಭವನೀಯ ಅಭ್ಯರ್ಥಿಗಳ ಪಟ್ಟಿಯನ್ನು ಹೈಕಮಾಂಡ್ ಗೆ ರವಾನಿಸಿದ್ದು, ಸೋಮವಾರ ನಡೆಯಲಿರುವ ಚುನಾವಣೆ ಸಮಿತಿ ಸಭೆಯಲ್ಲಿ ಇವುಗಳ ಬಗ್ಗೆ ಚರ್ಚಿಸಿ ಅಧಿಕೃತ ಪಟ್ಟಿ ಬಿಡುಗಡೆ ಮಾಡಲಾಗುತ್ತದೆ.
ಬಹುತೇಕ ಕ್ಷೇತ್ರಗಳಿಗೆ ಮಂತ್ರಿಗಳ ಕುಟುಂಬ ಸದಸ್ಯರನ್ನು ಕಣಕ್ಕಿಳಿಸಲಾಗುತ್ತಿದ್ದು,ಗೆಲ್ಲಿಸಿಕೊಂಡು ಬರಲೇಬೇಕು ಎಂಬ ಷರತ್ತು ವಿಧಿಸಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಬೆಳಗಾವಿಯಿಂದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಪುತ್ರ ಮೃಣಾಲ್ ಹೆಬ್ಬಾಳ್ಕರ್, ಚಿಕ್ಕೋಡಿಯಲ್ಲಿ ಸಚಿವ ಸತೀಶ್ ಜಾರಕಿಹೊಳಿ ಅವರ ಪುತ್ರಿ ಪ್ರಿಯಾಂಕಾ ಜಾರಕಿಹೊಳಿ ಅವರ ಹೆಸರು ಅಂತಿಮಗೊಳಿಸಲಾಗಿದೆ.
ನಿವೃತ್ತ ಐಎಎಸ್ ಅಧಿಕಾರಿ ಜಿ.ಕುಮಾರ ನಾಯಕ್ ಅವರನ್ನು ರಾಯಚೂರು ಕ್ಷೇತ್ರದಿಂದ ಕಣಕ್ಕಿಳಿಸಲು ನಿರ್ಧರಿಸಲಾಗಿದ್ದು,ಕಲಬುರಗಿಯಿಂದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅಳಿಯ ರಾಧಾಕೃಷ್ಣ ದೊಡ್ಡಮನಿ ಅವರನ್ನು ಕಣಕ್ಕಿಳಿಸಲು ನಿರ್ಧರಿಸಲಾಗಿದೆ.
ಬಳ್ಳಾರಿಯಿಂದ ಕ್ರೀಡಾ ಸಚಿವ ಬಿ ನಾಗೇಂದ್ರ ಅವರ ಸೋದರ ಬಿ ವೆಂಕಟೇಶ್ ಪ್ರಸಾದ್ ಅವರನ್ನು ಕಣಕ್ಕಿಳಿಸಲು ನಿರ್ಧರಿಸಿರುವ ರಾಜ್ಯ ನಾಯಕರು ಉಡುಪಿ ಚಿಕ್ಕಮಗಳೂರು ಕ್ಷೇತ್ರದಿಂದ ಕೆ ಜಯಪ್ರಕಾಶ ಹೆಗಡೆ, ಕೊಪ್ಪಳದಲ್ಲಿ ರಾಜಶೇಖರ್ ಹಿಟ್ನಾಳ್ ಉತ್ತರ ಕನ್ನಡದಿಂದ ಅಂಜಲಿ ನಿಂಬಾಳ್ಕರ್ ದಾವಣಗೆರೆಯಿಂದ ಪ್ರಭಾವತಿ ಮಲ್ಲಿಕಾರ್ಜುನ ಚಿತ್ರದುರ್ಗದಿಂದ ಬಿಎನ್ ಚಂದ್ರಪ್ಪ ಬೆಂಗಳೂರು ದಕ್ಷಿಣದಿಂದ ಸೌಮ್ಯ ರಾಮಲಿಂಗಾರೆಡ್ಡಿ ಅವರನ್ನು ಕಣಕ್ಕಿಳಿಸಲು ರಾಜ್ಯ ನಾಯಕರು ನಿರ್ಧರಿಸಿ ಹೈಕಮಾಂಡ್ ಗೆ ಹೆಸರು ಶಿಫಾರಸು ಮಾಡಿದ್ದಾರೆ.
ಬೆಂಗಳೂರು ಉತ್ತರ ಕ್ಷೇತ್ರದಿಂದ ಪ್ರಿಯಾ ಕೃಷ್ಣ ಇಲ್ಲವೇ ಪ್ರೊ. ಎಂ.ವಿ. ರಾಜೀವ್ ಗೌಡ ಬೆಂಗಳೂರು ಕೇಂದ್ರ ದಿಂದ ಎನ್ ಎ ಹ್ಯಾರಿಸ್ ಇಲ್ಲವೇ ಮನ್ಸೂರ್ ಅಲಿಖಾನ್, ಹುಬ್ಬಳ್ಳಿ ಧಾರವಾಡ ಕ್ಷೇತ್ರದಿಂದ ಶಿವಲೀಲಾ ಕುಲಕರ್ಣಿ ಅಥವಾ ವಿನೋದ್ ಅಸೂಟಿ, ಬಾಗಲಕೋಟೆಯಿಂದ ಆನಂದ್ ನ್ಯಾಮೇಗೌಡ ಅಥವಾ ಸಂಯುಕ್ತಾ ಪಾಟೀಲ್, ದಕ್ಷಿಣ ಕನ್ನಡದಿಂದ ವಿನಯ್ ಕುಮಾರ್ ಸೊರಕೆ ಅಥವಾ ಪದ್ಮರಾಜ್ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ವೀರಪ್ಪ ಮೊಯ್ಲಿ ಅಥವಾ ರಕ್ಷಾ ರಾಮಯ್ಯ ಅವರನ್ನು ಕಣಕ್ಕಿಳಿಸಬೇಕು ಎಂದು ಹೈಕಮಾಂಡ್ ಗೆ ರಾಜ್ಯ ನಾಯಕರು ಪಟ್ಟಿ ರವಾನಿಸಿದ್ದಾರೆ.
ಕೋಲಾರ, ಚಾಮರಾಜನಗರ ಮತ್ತು ಮೈಸೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳ ಆಯ್ಕೆ ಕಗ್ಗಂಟಾಗಿ ಪರಿಣಮಿಸಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ವಿಷಯದಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಬೇಕು ಎಂದು ರಾಜ್ಯ ನಾಯಕರು ತೀರ್ಮಾನ ಕೈಗೊಂಡಿದ್ದಾರೆ.
ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಭಾವ್ಯ ಅಭ್ಯರ್ಥಿಗಳ ಜೊತೆ ಮಾತುಕತೆ ನಡೆಸಿದ್ದು ಕೋಲಾರ ಕ್ಷೇತ್ರದಿಂದ ರಾಜ್ಯಸಭೆಯ ಮಾಜಿ ಸದಸ್ಯ ಎಲ್ ಹನುಮಂತಯ್ಯ ಚಾಮರಾಜನಗರ ಕ್ಷೇತ್ರದಿಂದ ಬಿಜೆಪಿ ಹಿರಿಯ ಮುಖಂಡ ವಿ ಶ್ರೀನಿವಾಸ ಪ್ರಸಾದ್ ಅವರ ಚಿಕ್ಕ ಅಳಿಯ ಡಾ. ಎನ್ ಎಸ್ ಮೋಹನ್ ಅವರನ್ನು ಕಣಕ್ಕಿಳಿಸುವ ಕುರಿತಂತೆ ಸಿಎಂ ಚರ್ಚೆ ನಡೆಸಿದ್ದಾರೆ ಆದರೆ ಮೈಸೂರು ಕ್ಷೇತ್ರದ ಅಭ್ಯರ್ಥಿಯ ಕುರಿತಂತೆ ಇನ್ನು ಅವರು ಗುಟ್ಟು ಬಿಟ್ಟುಕೊಟ್ಟಿಲ್ಲ.
ಈ ನಡುವೆ,ಕಾಂಗ್ರೆಸ್‌ನ ಕೇಂದ್ರ ಚುನಾವಣಾ ಸಮಿತಿಯ ಸಭೆ ಇದೇ 18ಕ್ಕೆ ನಿಗದಿಯಾಗಿದೆ. ಕರ್ನಾಟಕ, ಉತ್ತರ ಪ್ರದೇಶ ಸೇರಿದಂತೆ ಹಲವು ರಾಜ್ಯಗಳಿಗೆ ಅಭ್ಯರ್ಥಿಗಳ ಹೆಸರನ್ನು ಅಂದು ಅಖೈರುಗೊಳಿಸಲಾಗುತ್ತದೆ. ಕರ್ನಾಟಕದಲ್ಲಿ ಏಳು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿಯನ್ನು ಕಾಂಗ್ರೆಸ್ ಈಗಾಗಲೇ ಪ್ರಕಟಿಸಿದೆ.
ಒಮ್ಮತದ ನಿರ್ಧಾರ:
ಈ ಬಗ್ಗೆ ಪ್ರತಿಕ್ರಿಯಿಸಿರುವ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಸ್ಥಳೀಯ ಮಟ್ಟದ ಕಾರ್ಯಕರ್ತರ ಅಭಿಪ್ರಾಯ ನಾಯಕರ ಅನಿಸಿಕೆ ಆಧರಿಸಿ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸಿ ಹೈಕಮಾಂಡ್ ಗೆ ರವಾನಿಸಿದ್ದೇವೆ ಸೋಮವಾರ ಕಾಂಗ್ರೆಸ್ಸಿನ ಕೇಂದ್ರ ಚುನಾವಣಾ ಸಮಿತಿ ಸಭೆ ಸೇರುತ್ತಿದ್ದು ಅದಾದ ಬಳಿಕ ಪಟ್ಟಿ ಪ್ರಕಟವಾಗಲಿ ಎಂದು ಹೇಳಿದರು.
ಬಿಜೆಪಿ ಜೊತೆಗೆ ಜೆಡಿಎಸ್ ಮೈತ್ರಿ ಮಾಡಿಕೊಂಡ ಪರಿಣಾಮ ರಾಜ್ಯದಲ್ಲಿ ಜೆಡಿಎಸ್ ಅಸ್ತಿತ್ವ ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ ಸುಮಾರು ಐದರಿಂದ ಆರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ನೇರ ಸ್ಪರ್ಧೆ ಏರ್ಪಡುತ್ತಿತ್ತು ಇದೀಗ ಅಲ್ಲಿ ಜೆಡಿಎಸ್ ಸ್ಪರ್ಧೆ ಮಾಡುತ್ತಿಲ್ಲ ಹೀಗಾಗಿ ಬೇಸರಗೊಂಡಿರುವ ಜೆಡಿಎಸ್ ನಾಯಕರು ಕಾಂಗ್ರೆಸ್ ಸೇರಲು ಸದ್ದುಕೊಂಡಿದ್ದಾರೆ ಸದ್ಯದಲ್ಲೇ ಸಾಕಷ್ಟು ಮಂದಿ ನಾಯಕರು ಕಾಂಗ್ರೆಸ್ ಪಕ್ಷ ಸೇರಲಿದ್ದಾರೆ ಎಂದು ಹೇಳಿದರು.