ನವದೆಹಲಿ:ಮಿಲಿಯನ್ ಡಾಲರ್ ಟೂರ್ನಿ ಐಪಿಎಲ್ ಮಾರ್ಚ್ 23 ರಿಂದ ಆರಂಭಗೊಳ್ಳಲಿದೆ.
ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಅವರು ಐಪಿಎಲ್ ಆರಂಭದ ದಿನವನ್ನು
ಬಹಿರಂಗ ಪಡಿಸಿದ್ದಾರೆ. ಬಿಸಿಸಿಐನ ವಿಶೇಷ ಸಾಮಾನ್ಯ ಸಭೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿರುವ ರಾಜೀವ್ ಶುಕ್ಲಾ ಅವರು ಮಾರ್ಚ್ 23 ರಿಂದ ಐಪಿಎಲ್ ಆರಂಭವಾಗಲಿದೆ ಎಂದು ಖಚಿತಪಡಿಸಿದ್ದಾರೆ.
ಆದರೆ ಸದ್ಯಕ್ಕೆ ಮೊದಲ ಪಂದ್ಯ ಯಾವೆರಡು ತಂಡಗಳ ನಡುವೆ ನಡೆಯಲಿದೆ ಎಂಬ ಮಾಹಿತಿಯನ್ನು ಅವರು ಬಿಟ್ಟುಕೊಟ್ಟಿಲ್ಲ.
ವಾಸ್ತವವಾಗಿ ಇಂದು ಮುಂಬೈನಲ್ಲಿ ಬಿಸಿಸಿಐ, ವಿಶೇಷ ಸಾಮಾನ್ಯ ಸಭೆ ನಡೆಸಿತ್ತು. ಈ ಸಭೆಯಲ್ಲಿ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆದಿದ್ದು, ಇದರಲ್ಲಿ ಮುಂಬರುವ ಐಪಿಎಲ್ ಹಾಗೂ ಮಹಿಳಾ ಪ್ರೀಮಿಯರ್ ಲೀಗ್ ಬಗ್ಗೆಯೂ ಚರ್ಚಿಸಿ, ತೀರ್ಮಾನ ತೆಗೆದುಕೊಳ್ಳಲಾಗಿದೆ. ಆ ಪ್ರಕಾರ, 18ನೇ ಆವೃತ್ತಿಯ ಐಪಿಎಲ್ ಅನ್ನು ಮಾರ್ಚ್ 23 ರಿಂದ ಆರಂಭಿಸಲು ನಿರ್ಧರಿಸಲಾಗಿದೆ.
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ರಾಜೀವ್ ಶುಕ್ಲಾ, ‘ಈ ಸಭೆಯಲ್ಲಿ ಬಿಸಿಸಿಐನ ನೂತನ ಖಜಾಂಚಿ ಮತ್ತು ಕಾರ್ಯದರ್ಶಿಯನ್ನು ಆಯ್ಕೆ ಮಾಡಲಾಗಿದೆ. ಇದಲ್ಲದೇ ಒಂದು ವರ್ಷಕ್ಕೆ ಐಪಿಎಲ್ ಆಯುಕ್ತರ ನೇಮಕವನ್ನೂ ಮಾಡಲಾಗಿದೆ. 2025 ರ ಐಪಿಎಲ್ ಮಾರ್ಚ್ 23 ರಿಂದ ಪ್ರಾರಂಭವಾಗಲಿದೆ. ಇದರ ಜೊತೆಗೆ ಮಹಿಳಾ ಪ್ರೀಮಿಯರ್ ಲೀಗ್ ಬಗ್ಗೆಯೂ ಕೆಲವೊಂದು ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದ್ದು, ಈ ಟೂರ್ನಿಯನ್ನು ಆಯೋಜಿಸಲು ಸ್ಥಳಗಳನ್ನು ಸಹ ನಿರ್ಧರಿಸಲಾಗಿದೆ, ಅದನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದಿದ್ದಾರೆ.
ಟ್ರೋಫಿಗೆ ತಂಡ ಆಯ್ಕೆ:
ವಾಸ್ತವವಾಗಿ ಫೆಬ್ರವರಿ 18 ರಿಂದ ಆರಂಭವಾಗಲಿರುವ ಚಾಂಪಿಯನ್ಸ್ ಟ್ರೋಫಿ ಹಾಗೂ ಅದಕ್ಕೂ ಮುನ್ನ ನಡೆಯುವ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗೆ ಭಾರತ ಏಕದಿನ ತಂಡವನ್ನು ಇನ್ನು ಆಯ್ಕೆ ಮಾಡಿಲ್ಲ. ಚಾಂಪಿಯನ್ಸ್ ಟ್ರೋಫಿಗೆ ತಂಡವನ್ನು ಪ್ರಕಟಿಸಲು ಐಸಿಸಿ ಇಂದು ಕೊನೆಯ ದಿನವಾಗಿ ಗಡುವು ನೀಡಿತ್ತು. ಆದರೆ ಬಿಸಿಸಿಐ, ತಂಡ ಪ್ರಕಟಿಸಲು ಐಸಿಸಿ ಬಳಿ ಕೊಂಚ ಸಮಯಾವಕಾಶ ಕೇಳಿದೆ ಎಂದು ಹೇಳಲಾಗಿತ್ತು. ಇದೀಗ ರಾಜೀವ್ ಶುಕ್ಲಾ ಅವರು ತಂಡವನ್ನು ಯಾವಾಗ ಆಯ್ಕೆ ಮಾಡುತ್ತಾರೆ ಎಂಬುದರ ಕುರಿತು ಸುಳಿವು ನೀಡಿದ್ದಾರೆ. ಜನವರಿ 18 ಅಥವಾ 19 ರಂದು ಆಯ್ಕೆ ಸಮಿತಿ ಸಭೆ ನಡೆಯಲಿದೆ ಎಂದು ರಾಜೀವ್ ಶುಕ್ಲಾ ತಿಳಿಸಿದ್ದಾರೆ. ಅಂದರೆ ಸಭೆಯ ನಂತರವೇ ಭಾರತ ತಂಡವನ್ನು ಪ್ರಕಟಿಸುವ ಸಾಧ್ಯತೆಗಳಿವೆ.

