ಬೆಂಗಳೂರು, ಜೂ.6,:
ವಿದ್ಯುತ್ ಉತ್ಪಾದನಾ ವಲಯದಲ್ಲಿ ನವೀಕರಿಸಬಹುದಾದ ಇಂಧನದ ಪಾಲನ್ನು ಹೆಚ್ಚಿಸುವತ್ತ ರಾಜ್ಯ ಸರ್ಕಾರ ಗಮನಹರಿಸಿದ್ದು, ಇದರಿಂದ ರಾಜ್ಯದಲ್ಲಿ ಹೆಚ್ಚಿನ ಉದ್ಯೋಗ ಸೃಷ್ಟಿಯೂ ಆಗುತ್ತಿದೆ ಎಂದು ಇಂಧನ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿ ಗೌರವ್‌ಗುಪ್ತಾ ಹೇಳಿದ್ದಾರೆ.
ಪ್ರತಿ ವರ್ಷ ಜೂನ್ 15ರಂದು ವಿಶ್ವ ಪವನ ದಿನ ಆಚರಿಸಲಾಗುತ್ತಿದ್ದು, ಅದಕ್ಕೆ ಪೂರ್ವಭಾವಿಯಾಗಿ ಬುಧವಾರ ನಾಗರಬಾವಿಯ ಕ್ರೆಡಲ್ ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವೀಡಿಯೋ ಕಾನ್ಫರೆನ್ಸ್ ಮೂಲಕ ಪಾಲ್ಗೊಂಡು ಮಾತನಾಡಿದರು.
ಇಂಗಾಲದ ಹೊರಸೂಸುವಿಕೆಯ ಪ್ರಮಾಣ ಕಡಿಮೆ ಮಾಡುವುದರ ಜತೆಗೆ ಗಾಳಿಯ ಗುಣಮಟ್ಟ ಸುಧಾರಿಸುವ ಪರಿಸರ ಸ್ನೇಹಿ ಕ್ರಮಗಳ ಹೊರತಾಗಿಯೂ ಪವನ ವಿದ್ಯುತ್ ಸುಸ್ಥಿರ ಆರ್ಥಿಕತೆ ಸಾಧಿಸಲು ನೆರವಾಗುತ್ತದೆ. ರಾಜ್ಯಕ್ಕೆ ಬಂಡವಾಳ ಹೂಡಿಕೆ ಆಕರ್ಷಿಸುವ ಜತೆಗೆ ಉದ್ಯೋಗ ಸೃಷ್ಟಿ ಸಾಧ್ಯವಾಗಿಸುತ್ತಿದೆ,”ಎಂದು ಅವರು ವಿವರಿಸಿದರು.
ಇಂಧನ ಸಚಿವರಾದ ಕೆ.ಜೆ. ಜಾರ್ಜ್ ಅವರ ಮಾರ್ಗದರ್ಶನದಲ್ಲಿ ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಕರ್ನಾಟಕದ ಗಮನಾರ್ಹ ಸಾಧನೆ ಮಾಡುತ್ತಿದೆ. ಶುದ್ಧ ಇಂಧನ ಉತ್ಪಾದನೆ ಹಾಗೂ ನವೀನ ಇಂಧನ ಸಂಪನ್ಮೂಲಗಳ ಅಭಿವೃದ್ಧಿಯಲ್ಲಿ ನಮ್ಮ ರಾಜ್ಯ ಮುಂಚೂಣಿಯಲ್ಲಿದೆ. ಸಾಂಪ್ರದಾಯಿಕ ಇಂಧನ ಮೂಲಗಳಿಗಿಂತ ಪವನ ವಿದ್ಯುತ್ ಕಡಿಮೆ ಖರ್ಚಿನ ಪರ್ಯಾಯ ಇಂಧನ ಮೂಲವಾಗಿದೆ,” ಎಂದು ಅವರು ಹೇಳಿದರು.
“ಪವನ ವಿದ್ಯುತ್ ಸಾಮರ್ಥ್ಯದಲ್ಲಿ ಭಾರತವು ನಾಲ್ಕನೇ ಸ್ಥಾನದಲ್ಲಿದ್ದು, 2024ರ ಏಪ್ರಿಲ್ ವೇಳೆಗೆ 46 ಗಿಗಾ ವ್ಯಾಟ್ ಪವನ ವಿದ್ಯುತ್ ಉತ್ಪಾದನೆ ಆಗಿದೆ. ಕರ್ನಾಟಕವು 124 ಗಿ.ವ್ಯಾ. ಪವನ ವಿದ್ಯುತ್ ಉತ್ಪಾದನಾ ಸಾಮರ್ಥ್ಯ ಹೊಂದಿದ್ದು, 5.3 ಗಿ.ವ್ಯಾ. ಸಾಮರ್ಥ್ಯದ ಪವನ ವಿದ್ಯುತ್ ಯೋಜನೆಗಳನ್ನು ಸ್ಥಾಪಿಸಲಾಗಿದೆ. ಅಲ್ಲದೇ, 15.4 ಗಿ.ವ್ಯಾ. ಪವನ ಯೋಜನೆಗಳು ಶೀಘ್ರದಲ್ಲೇ ಅನುಷ್ಠಾನಗೊಳ್ಳಲಿವೆ. ಬೀದರ್, ಗದಗ, ಕೊಪ್ಪಳ, ಬಳ್ಳಾರಿ, ದಾವಣಗೆರೆ, ವಿಜಯಪುರ, ತುಮಕೂರಿನಲ್ಲಿ ಉತ್ಪಾದನೆಯಾಗುವ ನವೀಕರಿಸಬಹುದಾದ ಇಂಧನವನ್ನು ಕೇಂದ್ರ ಜಾಲಕ್ಕೆ ಪಡೆಯಲು ಸಿಟಿಯುನಿಂದ ಯೋಜನೆ ಸಿದ್ಧಗೊಂಡಿದೆ. ಪವನ ವಿದ್ಯುತ್ ಯೋಜನೆ ಅನುಷ್ಠಾನಕ್ಕೆ ಕರ್ನಾಟಕವು ಅನುಕೂಲಕರ ನೀತಿ ಹೊಂದಿರುವುದರಿಂದ ಇವೆಲ್ಲಾ ಸಾಧ್ಯವಾಗಿದೆ,” ಎಂದು ಅವರು ವಿವರಿಸಿದರು.
“ಪವನ ವಿದ್ಯುತ್ ಯೋಜನೆಗಳ ಅನುಮೋದನೆಗಳನ್ನು ಸರಳೀಕರಿಸುವ ಮೂಲಕ ಭೂ ಸ್ವಾಧೀನ ಪ್ರಕ್ರಿಯೆ ಸಗುಮಗೊಳಿಸಿದ್ದೇವೆ. ಇಂಥ ಸುಧಾರಣಾ ಕ್ರಮಗಳ ಮೂಲಕ ನವೀಕರಿಸಬಹುದಾದದ ಇಂಧನ ವಲಯದಲ್ಲಿ ಕರ್ನಾಟಕವನ್ನು ನಂಬರ್ ಒನ್ ರಾಜ್ಯವನ್ನಾಗಿಸುವ ಪ್ರಯತ್ನ ನಡೆದಿದೆ. ಇದಕ್ಕೆ ಉದ್ಯಮದ ನಾಯಕರ ಸಹಕಾರವೂ ಅಗತ್ಯ,”ಎಂದರು.
“2030ರ ವೇಳೆಗೆ ನವೀಕರಿಸಬಹುದಾದ ಇಂಧನ ಮೂಲಗಳಿಂದ ಶೇ. 50 ರಷ್ಟು ವಿದ್ಯುತ್ ಉತ್ಪಾದನೆಯ ಸಾಮರ್ಥ್ಯವನ್ನು ಸಾಧಿಸುವ ಮತ್ತು 2070ರ ವೇಳೆಗೆ ತಟಸ್ಥ ಇಂಗಾಲದ ಗುರಿ ಸಾಧಿಸುವಲ್ಲಿ ಪವನ ಶಕ್ತಿಯು ಪ್ರಮುಖವಾಗಿದೆ. ಸುಸ್ಥಿರ ಭವಿಷ್ಯಕ್ಕಾಗಿ ಪವನ ಶಕ್ತಿಯ ಉತ್ಪಾದನೆಗೆ ಒತ್ತು ನೀಡಲು ಬದ್ಧವಾಗಿ ವಿಶ್ವ ಪವನ ದಿನವನ್ನು ಅರ್ಥಪೂರ್ಣವಾಗಿಸೋಣ,”ಎಂದರು
ಕ್ರೆಡಲ್ ವ್ಯವಸ್ಥಾಪಕ ನಿರ್ದೇಶಕ ಕೆ.ಪಿ ರುದ್ರಪ್ಪಯ್ಯ ಅವರು ಮಾತನಾಡಿ, “ಎಂಜನಿಯರಿಂಗ್ ಕಾಲೇಜು ವಿದ್ಯಾರ್ಥಿಗಳಿಗೆ ನವೀಕರಿಸಬಹುದಾದ ಇಂಧನ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಇಂಟರ್ನ್‌ಶಿಪ್, ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕ್ರೆಡಲ್ ಯಶಸ್ವಿಯಾಗಿ ನಡೆಸಿಕೊಂಡು ಬಂದಿದೆ.ಮುಂಬರುವ ದಿನಗಳಲ್ಲಿ ಗ್ರೀನ್ ಹೈಡ್ರೋಜನ್ ವಲಯದಲ್ಲಿ ಇಂಟರ್ನ್‌ಶಿಪ್ ನಡೆಸಲು ಉದ್ದೇಶಿಸಲಾಗಿದೆ. ನಮ್ಮಲ್ಲಿ ಇಂಟರ್ನ್‌ಶಿಪ್ ಮಾಡಿದ ಎಲ್ಲರಿಗೂ ಉದ್ಯೋಗ ದೊರೆತಿದೆ ಎಂಬ ಹೆಮ್ಮೆ ಇದೆ,” ಎಂದು ತಿಳಿಸಿದರು.
“ಪವನ ದಿನದ ಪ್ರಯುಕ್ತ ಇತ್ತೀಚೆಗೆ ಆಯೋಜಿಸಿದ್ದ ಪ್ರಬಂಧ ಮತ್ತು ಚಿತ್ರಕಲೆ ಸ್ಪರ್ಧೆಗಳಲ್ಲಿ ನೂರಾರು ಕಾಲೇಜುಗಳಿಂದ 170 ಕ್ಕೂ ಹೆಚ್ಚು ಪ್ರಬಂಧಗಳು ಮತ್ತು 100ಕ್ಕೂ ಹೆಚ್ಚು ಚಿತ್ರಗಳು ಬಂದಿದ್ದು, ಅತ್ಯುತ್ತಮ ಚಿತ್ರ ಹಾಗೂ ಪ್ರಬಂಧಕ್ಕೆ ಪ್ರಶಸ್ತಿ ನೀಡಲಾಗಿದೆ,” ಎಂದರು.
“ವಿಶ್ವ ಪವನದ ಪ್ರಯುಕ್ತ ಇಂಡಿಯನ್ ವಿಂಡ್ ಪವರ್ ಅಸೋಸಿಯೇಷನ್ ಸಹಯೋಗದಲ್ಲಿ ಆಯೋಜಿಸಿದ್ದ ‘ರನ್ ವಿತ್ ದ ವಿಂಡ್’ ಮ್ಯಾರಥಾನ್ ಯಶಸ್ವಿಯಾಗಿದೆ. ನವೀಕರಿಸಬಹುದಾದ ಇಂಧನಕ್ಕೆ ಒತ್ತು ನೀಡಿ, ಪರಿಸರ ಸಂರಕ್ಷಣೆಗಾಗಿ ನಮ್ಮ ಓಟ ಮುಂದುವರಿಸೋಣ,” ಎಂದು ರುದ್ರಪ್ಪಯ್ಯ ಹೇಳಿದರು.
ಕ್ರೆಡಲ್‌ನ ಪ್ರಧಾನ ವ್ಯವಸ್ಥಾಪಕ (ತಾಂತ್ರಿಕ) ಎನ್. ಅಮರನಾಥ್, ವಿಜ್ಞಾನಿ ಎಂ.ಪಿ ರಮೇಶ್, ಐಡಬ್ಲ್ಯುಪಿಎನ ಉಪಾಧ್ಯಕ್ಷ ಯು.ಬಿ.ರೆಡ್ಡಿ ಹಾಗೂ ಪ್ರಧಾನ ಕಾರ್ಯದರ್ಶಿ ಅಜಯ್ ದೇವರಾಜ್, ಉಪಸ್ಥಿತರಿದ್ದರು.
Previous Articleಫಲಿತಾಂಶ ಸಂತೋಷ ತಂದಿಲ್ಲ ಆದರೆ ಸಮಾಧಾನವಾಗಿದೆ.
Next Article ಸಿದ್ದರಾಮಯ್ಯ ಸರ್ಕಾರದ ಮೊದಲ ವಿಕೆಟ್ ಪತನ.