ಬೆಂಗಳೂರು,ಜೂ.7:
ವಿಧಾನ ಪರಿಷತ್ತಿನ ಶಿಕ್ಷಕರು ಮತ್ತು ಪದವೀಧರ ಕ್ಷೇತ್ರದ ಆರು ಸ್ಥಾನಗಳಿಗೆ ನಡೆದ Electionಯಲ್ಲಿ ಕಾಂಗ್ರೆಸ್ ಮೂರು ಜೆಡಿಎಸ್ ಎರಡು ಮತ್ತು ಬಿಜೆಪಿ ಒಂದು ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿದೆ.
ಸುಶಿಕ್ಷಿತ ವರ್ಗ ಸದಾ ಬಿಜೆಪಿಯನ್ನು ಬೆಂಬಲಿಸಲಿದೆ ಎಂಬ ಸಾಮಾನ್ಯ ನಂಬಿಕೆಯನ್ನು ಹುಸಿ ಮಾಡಿರುವ ಈ ಚುನಾವಣೆ ಆಡಳಿತರೂಢ ಕಾಂಗ್ರೆಸ್ ಪಾಳಯದಲ್ಲಿ ಸಂತಸಕ್ಕೆ ಕಾರಣವಾಗಿದೆ.
ತೀವ್ರ ಕುತೂಹಲ ಕೆರಳಿಸಿದ್ದ ಈಶಾನ್ಯ ಪದವೀಧರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಚಂದ್ರಶೇಖರ ಪಾಟೀಲ್ ಅವರು ಬಿಜೆಪಿಯ ಅಮರನಾಥ ಪಾಟೀಲ್ ವಿರುದ್ಧ ಗೆದ್ದರು.
ಗುರುವಾರ ಬೆಳಗ್ಗೆ 8 ಗಂಟೆಯಿಂದ ಮತ ಏಣಿಕೆ ಕಾರ್ಯ ಕಲಬುರಗಿ ನಗರದ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆದಿದ್ದು, ಸಂಜೆ 4 ಗಂಟೆವರೆಗೆ ಬ್ಯಾಲೆಟ್ ಪೇಪರ್ ಜೋಡಿಕೆ ಮಾಡಿ ನಂತರ ಮತಗಳ ಎಣಿಕೆ ಕೈಗೊಳ್ಳಲಾಗಿದೆ. ರಾತ್ರಿ ಮತಗಳ ಎಣಿಕೆ ನಡೆದು ಶುಕ್ರವಾರ ಬೆಳಗ್ಗೆ 11 ಗಂಟೆಗೆ ಪ್ರಥಮ ಪ್ರಾಶಸ್ತ್ಯದ ಅಂತಿಮ 8ನೇ ಸುತ್ತಿನ ಮತ ಎಣಿಕೆ ಪೂರ್ಣಗೊಂಡಿದೆ.
ಪ್ರಥಮ ಪ್ರಾಶಸ್ತ್ಯದಲ್ಲಿ ಕಾಂಗ್ರೆಸ್ನ ಚಂದ್ರಶೇಖರ್ ಪಾಟೀಲ್ 39,496 ಮತಗಳನ್ನು ಪಡೆದು 4,446 ಅಂತರದಿಂದ ಪ್ರತಿಸ್ಪರ್ಧಿ ಬಿಜೆಪಿಯ ಅಮರನಾಥ ಪಾಟೀಲ್ಗಿಂತ ಮುನ್ನಡೆ ಸಾಧಿಸಿದ್ದರು. ಆದರೆ, ಗೆಲುವಿನ ಕೋಟಾ 48,260ಕ್ಕೆ ಫಿಕ್ಸ್ ಮಾಡಿದ್ದರಿಂದ ಎರಡನೇ ಪ್ರಾಶಸ್ತ್ಯದ ಮತ ಎಣಿಕೆ ನಡೆಯಿತು. ಅದರಲ್ಲೂ ಕಾಂಗ್ರೆಸ್ ಅಭ್ಯರ್ಥಿ ಚಂದ್ರಶೇಖರ್ ಪಾಟೀಲ್ ಮುನ್ನಡೆಯೊಂದಿಗೆ ಭರ್ಜರಿ ಜಯ ಸಾಧಿಸುವ ಮೂಲಕ ಗೆಲುವಿನ ನಗೆ ಬೀರಿದರು. ಈ ಕ್ಷೇತ್ರದ ಮತ ಎಣಿಕೆ ಕಾರ್ಯ ಎರಡು ದಿನಗಳ ಕಾಲ ನಡೆಯುವ ಮೂಲಕ ದಾಖಲೆ ನಿರ್ಮಿಸಿತು.
ಬಿಜೆಪಿಗೆ ಸೋಲು,:
ಆಗ್ನೇಯ ಶಿಕ್ಷಕರ ಕ್ಷೇತ್ರವನ್ನು ಬಿಜೆಪಿಯಿಂದ ಕಸಿದುಕೊಂಡು ತನ್ನ ಕೈವಶ ಮಾಡಿಕೊಳ್ಳುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದೆ ಈ ಕ್ಷೇತ್ರದಲ್ಲಿ ಹಲವು ದಶಕಗಳ ನಂತರ ಕಾಂಗ್ರೆಸ್ ಗೆಲುವು ಸಾಧಿಸಿದೆ.
ಇಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಶ್ರೀನಿವಾಸ್ 8,909 ಮತಗಳಿಂದ ಗೆದ್ದಿದ್ದು, ಹಾಲಿ ಸದಸ್ಯ ನಾರಾಯಣಸ್ವಾಮಿ ಸೋಲುಂಡರು. ಚಲಾವಣೆಯಾದ 24,106 ಮತಗಳನ್ನು ಏಳು ಸುತ್ತುಗಳಲ್ಲಿ ಎಣಿಕೆ ನಡೆಸಲಾಯಿತು. ಪ್ರಥಮ ಪ್ರಾಶಸ್ತ್ಯದ ಮತಗಳಲ್ಲಿಯೇ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಗೆದ್ದರು. 704 ಮತಗಳು ತಿರಸ್ಕೃತಗೊಂಡವು. ಬಿಜೆಪಿ ಅಭ್ಯರ್ಥಿ ವೈ.ಎ ನಾರಾಯಣಸ್ವಾಮಿ 7,142 ಮತ ಪಡೆದರು
ಬೆಂಗಳೂರು ಪದವೀಧರ ಕ್ಷೇತ್ರ ಕೂಡ ಕಾಂಗ್ರೆಸ್ಸಿನ ಪಾಲಾಗಿದೆ. ಇಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ರಾಮೋಜಿ ಗೌಡ ಅವರು ಬಿಜೆಪಿಯ ಅಭ್ಯರ್ಥಿಯ ಹಾಗೂ ಹಾಲಿ ವಿಧಾನ ಪರಿಷತ್ ಸದಸ್ಯ ಅ. ದೇವೇಗೌಡ ಅವರನ್ನು ಮಣಿಸುವ ಮೂಲಕ ಸುಮಾರು ನಾಲ್ಕು ದಶಕಗಳ ನಂತರ ಈ ಕ್ಷೇತ್ರವನ್ನು ಕಾಂಗ್ರೆಸ್ ಗೆಲ್ಲುವಂತೆ ಮಾಡಿದರು.
ಪದವೀಧರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಅ.ದೇವೇಗೌಡ 24,888 ಮತ ಪಡೆದರೆ, ಕಾಂಗ್ರೆಸ್ ಅಭ್ಯರ್ಥಿ ರಾಮೋಜಿಗೌಡ 36,729 ಮತ ಪಡೆದು ಜಯ ಸಾಧಿಸಿದರು. ಚಲಾವಣೆಯಾದ 80,080 ಮತಗಳನ್ನು ಆರು ಸುತ್ತುಗಳಲ್ಲಿ ಎಣಿಕೆ ಮಾಡಲಾಗಿದೆ. ಪ್ರಥಮ ಪ್ರಾಶಸ್ತ್ಯದ ಮತಗಳಲ್ಲಿಯೇ ಕಾಂಗ್ರೆಸ್ ಅಭ್ಯರ್ಥಿ ಗೆಲುವು ದಾಖಲಿಸಿದರು. 8,482 ಮತಗಳು ಅಸಿಂಧುಗೊಂಡವು.
ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಜೆಡಿಎಸ್ ಮೈತ್ರಿ ಅಭ್ಯರ್ಥಿ ವಿವೇಕಾನಂದ ಗೆದ್ದರೆ, ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಬಿಜೆಪಿ – ಜೆಡಿಎಸ್ ಮೈತ್ರಿ ಅಭ್ಯರ್ಥಿ ಬೋಜೇಗೌಡ ಹಾಗೂ ನೈರುತ್ಯ ಪದವೀಧರ ಕ್ಷೇತ್ರದ ಮತ ಎಣಿಕೆಯಲ್ಲಿ ಬಿಜೆಪಿ ಮೈತ್ರಿ ಅಭ್ಯರ್ಥಿ ಧನಂಜಯ ಸರ್ಜಿ ಜಯಶಾಲಿಯಾದರು. ಈ ಮೂರು ಕ್ಷೇತ್ರಗಳಲ್ಲಿಯೂ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ
Previous Articleರಾಹುಲ್ ಗಾಂಧಿಗೆ ಬೆಂಗಳೂರು ಕೋರ್ಟ್ ನಲ್ಲಿ ಜಾಮೀನು.
Next Article ಮಂತ್ರಿಗಳಿಗೆ ಶಾಕ್ ನೀಡಿದ ರಾಹುಲ್ ಗಾಂಧಿ.