ಬೆಂಗಳೂರು,ಆ.17:
ಮತದಾರರ ಪಟ್ಟಿ ಕುರಿತು ಹೇಳಿಕೆ ನೀಡಿ ವಿವಾದ ಮೈಮೇಲೆ ಎಳೆದುಕೊಂಡ ಸಹಕಾರ ಮಂತ್ರಿ ಕೆ ಎನ್ ರಾಜಣ್ಣ ಅವರನ್ನು ಸಂಪುಟದಿಂದ ವಜಾ ಮಾಡುವ ಮೂಲಕ ಕಾಂಗ್ರೆಸ್ ಹೈಕಮಾಂಡ್ ಪಕ್ಷದ ನಾಯಕರು, ಮಂತ್ರಿಗಳು ಮತ್ತು ಶಾಸಕರಿಗೆ ಎಚ್ಚರಿಕೆಯ ಸಂದೇಶ ರವಾನಿಸಿದೆ.
ನಾಯಕತ್ವ ಬದಲಾವಣೆ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರ ಬದಲಾವಣೆ ಸೇರಿದಂತೆ ಪಕ್ಷ ಮತ್ತು ಸರ್ಕಾರದ ಕಾರ್ಯವೈಖರಿ ಕುರಿತಾಗಿ ಹಲವು ಶಾಸಕರು ಮತ್ತು ಮಂತ್ರಿಗಳು ಬಹಿರಂಗ ಹೇಳಿಕೆ ನೀಡುವ ಮೂಲಕ ವಿವಾದ ಸೃಷ್ಟಿಸುತ್ತಿದ್ದರು. ಈ ರೀತಿಯ ಹೇಳಿಕೆ ನೀಡದಂತೆ ಹಲವು ಬಾರಿ ಎಚ್ಚರಿಕೆ ನೀಡಿದರೂ ಕೂಡ ಅದನ್ನು ಯಾರೂ ಗಂಭೀರವಾಗಿ ಪರಿಗಣಿಸಿರಲಿಲ್ಲ.
ಈ ಹಿನ್ನೆಲೆಯಲ್ಲಿ ಹೈಕಮಾಂಡ್ ಇಂತಹ ಬೆಳವಣಿಗೆಗಳಿಗೆ ಕಡಿವಾಣ ಹಾಕಬೇಕು ಎಂದು ನಿರ್ಧರಿಸಿ ರಾಜಣ್ಣ ಅವರ ಪ್ರಕರಣವನ್ನು ಬಳಸಿಕೊಂಡಿದೆ.
ವಿವಾದದಲ್ಲಿ ಸಿಲುಕಿದ ಮಂತ್ರಿ ರಾಜಣ್ಣ ಹೈಕಮಾಂಡ್ ಕೆಂಗಣ್ಣಿಗೆ ಗುರಿಯಾದ ಬಳಿಕ
ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿ ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿಯವರಿಗೆ ರಾಜೀನಾಮೆ ಪತ್ರ ಕೂಡ ನೀಡಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡ ರಾಜಣ್ಣ ಅವರ ರಾಜೀನಾಮೆ ಪಡೆಯಲು ಮುಂದಾಗಿದ್ದರು.
ಆದರೆ ಇದಕ್ಕೆ ಒಪ್ಪದ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಎಚ್ಚರಿಕೆ ಸಂದೇಶ ರವಾನಿಸಲು ತೀರ್ಮಾನಿಸಿದರು ಅದರಂತೆ ರಾಜಣ್ಣ ಅವರ ರಾಜೀನಾಮೆಗೆ ಬದಲಾಗಿ ಸಂಪುಟದಿಂದ ವಜಾ ಗೊಳಿಸಬೇಕು ಎಂದು ಸೂಚನೆ ನೀಡಿದರು ಎಂದು ಗೊತ್ತಾಗಿದೆ.
ಕೊನೆಯ ಹಂತದವರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ರಾಜಣ್ಣ ಅವರಿಗೆ ಮುಜುಗರವಾಗದಂತೆ ನೋಡಿಕೊಳ್ಳಲು ಸಾಕಷ್ಟು ಪ್ರಯತ್ನ ನಡೆಸಿದರು ಸದ್ಯ ವಿಧಾನಸಭೆಯ ಅಧಿವೇಶನ ನಡೆಯುತ್ತಿದೆ ಈ ಸಮಯದಲ್ಲಿ ಮಂತ್ರಿಯೊಬ್ಬರನ್ನು ಸಂಪುಟದಿಂದ ವಜಾ ಗೊಳಿಸುವ ತೀರ್ಮಾನ ಸಾಕಷ್ಟು ವಿವಾದಕ್ಕೆ ಕಾರಣವಾಗಲಿದೆ ಎಂದು ಕೆ ಸಿ ವೇಣುಗೋಪಾಲ್ ಅವರ ಮೂಲಕ ರಾಹುಲ್ ಗಾಂಧಿ ಅವರ ಮನವೊಲಿಸಲು ಪ್ರಯತ್ನ ನಡೆಸಿದರು ವಿಫಲವಾಯಿತು ಎಂದು ಗೊತ್ತಾಗಿದೆ.
ಮುಖ್ಯಮಂತ್ರಿಗಳ ಮನವೊಲಿಕೆಯ ಯಾವುದೇ ಮಾತನ್ನು ಕೇಳಲು ಬಯಸದ ರಾಹುಲ್ ಗಾಂಧಿ ಅವರು ತಕ್ಷಣವೇ ಅವರನ್ನು ಸಂಪುಟದಿಂದ ವಜಾ ಗೊಳಿಸುವಂತೆ ಪಟ್ಟು ಹಿಡಿದ ಪರಿಣಾಮ ಸಿದ್ದರಾಮಯ್ಯ ಅವರು ರಾಜಣ್ಣ ಅವರ ರಾಜೀನಾಮೆಯ ಪ್ರಸ್ತಾಪವನ್ನು ತಿರಸ್ಕರಿಸಿ ಸಂಪುಟದಿಂದ ವಜಾ ಗೊಳಿಸಿರುವ ಆದೇಶವನ್ನು ರಾಜ್ಯಪಾಲರಿಗೆ ರವಾನಿಸಿದರು ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.
ಈ ಪ್ರಕರಣದ ಮೂಲಕ ಇನ್ನು ಮುಂದೆ ರಾಜ್ಯ ಕಾಂಗ್ರೆಸ್ಸಿನಲ್ಲಿ ಯಾವುದೇ ವ್ಯಕ್ತಿ ಪಕ್ಷದ ತೀರ್ಮಾನ ಮತ್ತು ನಾಯಕತ್ವದ ಕುರಿತಾಗಿ ವಿವಾದಾತ್ಮಕ ಹೇಳಿಕೆ ನೀಡಿದಲ್ಲಿ ಇದೇ ರೀತಿ ಕ್ರಮ ಜರುಗಿಸಲಾಗುವುದು ಎಂಬ ಎಚ್ಚರಿಕೆಯ ಸಂದೇಶವನ್ನು ರವಾನಿಸಿದ್ದಾರೆ ಎಂದು ತಿಳಿದುಬಂದಿದೆ
ಎಚ್ಚರಿಕೆ ಗಂಟೆ:
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪಕ್ಷದ ಹಿರಿಯ ನಾಯಕ ಬಿಕೆ ಹರಿಪ್ರಸಾದ್, ಸಚಿವ ಸ್ಥಾನದಿಂದ ಕೆ.ಎನ್ ರಾಜಣ್ಣ ವಜಾಗೊಳಿಸಿರುವ ವಿಚಾರ ಸಂಬಂಧ ಮುಂದೆ ಹೀಗೆ ಆಗಬಾರದು ಅಂತಾ ಇದು ಎಚ್ಚರಿಕೆಯ ಗಂಟೆಯಾಗಿದೆ ಎಂದು ಹೇಳಿದರು.
ರಾಜಣ್ಣ ಅವರು ತಮ್ಮ ವಿರುದ್ಧ ವ್ಯವಸ್ಥಿತ ಪಿತೂರಿ ಮತ್ತು ಷಡ್ಯಂತರ ನಡೆದಿದೆ ಎಂದು ಹೇಳಿದ್ದಾರೆ.ಆ ಪಿತೂರಿ ಮತ್ತು ಷಡ್ಯಂತರದ ಬಗ್ಗೆ ಮುಂದೆ ಅವರೇ ಬಹಿರಂಗಪಡಿಸಲಿದ್ದಾರೆ ಆದರೆ ಈ ಪ್ರಕರಣ ಮಾತ್ರ ಹೈಕಮಾಂಡ್ ನ ಕಠಿಣ ಸಂದೇಶವಾಗಿದೆ ಎಂದು ತಿಳಿಸಿದರು.
ಕಾಂಗ್ರೆಸಿನಲ್ಲಿ ಯಾವುದೇ ವ್ಯಕ್ತಿ ಎಷ್ಟೇ ಉನ್ನತ ಹುದ್ದೆಯಲ್ಲಿರಲಿ, ಎಷ್ಟೇ ಪ್ರಭಾವಿಯಾಗಿದ್ದರೂ ಕೂಡ ಪಕ್ಷದ ಶಿಸ್ತು ಮತ್ತು ನಾಯಕತ್ವಕ್ಕೆ ಬದ್ಧರಾಗಿರಬೇಕು ಅದನ್ನು ಮೀರಿದರೆ ಯಾವುದೇ ರೀತಿಯ ಕ್ರಮಕ್ಕೂ ಹಿಂಜರಿಯುವುದಿಲ್ಲ ಎನ್ನುವುದು ಇತಿಹಾಸ ಈಗ ಅದು ಮತ್ತೊಮ್ಮೆ ಪುನರಾವರ್ತನೆಯಾಗಿದೆ ಎಂದು ವಿಶ್ಲೇಷಿಸಿದರು.
Previous Articleಎಲ್ಲಾ ನಗರಗಳಲ್ಲೂ ಇ ಖಾತೆ ವ್ಯವಸ್ಥೆ ಜಾರಿ
Next Article ಕಡು ಬಡವ ಮಹಿಳೆಯರಿಗೆ ದೋಖಾ