- ಬೆಂಗಳೂರು, ಮೇ.21:
ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಅಶ್ಲೀಲ ವಿಡಿಯೋ ಪ್ರಕರಣ ಎಲ್ಲರೂ ತಲೆತಗ್ಗಿಸುವ ಪ್ರಕರಣ. ಹಾಗಾಗಿ ನಾನು ಸಾರ್ವಜನಿಕವಾಗಿ ಮತ್ತೊಮ್ಮೆ ಕ್ಷಮೆ ಕೋರುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ನಾನು ಕೈ ಮುಗಿದು ಮನವಿ ಮಾಡುತ್ತೇನೆ ನನ್ನ ಹಾಗೂ ದೇವೇಗೌಡರ ಮೇಲೆ ಅಭಿಮಾನ ಇದ್ದರೆ ಮುಂದಿನ 48 ಗಂಟೆಯೊಳಗೆ ಎಸ್ಐಟಿ ಮುಂದೆ ಶರಣಾಗು ಎಂದು ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಮನವಿ ಮಾಡಿದ್ದಾರೆ.
ಇದು ಎಲ್ಲರೂ ಅಸಹ್ಯ ಪಡುವ ಪ್ರಕರಣ,ಪ್ರಧಾನಿ ಎಚ್.ಡಿ.ದೇವೇಗೌಡರ ಪರವಾಗಿ ನಾನೇ ಪ್ರಜ್ವಲ್ ರೇವಣ್ಣ ಅವರಿಗೆ ಬಹಿರಂಗ ಕರೆಯನ್ನು ಕೊಡುತ್ತಿದ್ದೇನೆ. ಮುಂದಿನ 24 ಗಂಟೆ ಇಲ್ಲವೇ 48 ಗಂಟೆಯೊಳಗೆ ವಾಪಸ್ಸಾಗಿ ತನಿಖೆಯನ್ನು ಎದುರಿಸಬೇಕು ಎಂದರು.
ಈ ನೆಲದ ಕಾನೂನು ಇದೆ, ಕಾನೂನಿಗೆ ಯಾರೂ ದೊಡ್ಡವರಲ್ಲ. ಕೇಳಿಬಂದಿರುವ ಆರೋಪದ ಸತ್ಯಾಸತ್ಯತೆ ತನಿಖೆಯಿಂದ ಹೊರಬೇಕು
ಯಾಕೆ ಹೆದರಬೇಕು. ಎಷ್ಟು ದಿನ ಕಳ್ಳ ಪೊಲೀಸ್ ಆಟ. ವಿದೇಶದಿಂದ ಬಂದು ತನಿಖೆಗೆ ಸಹಕಾರ ನೀಡಬೇಕು ಎಂದು ಹೇಳಿದರು.
ಪದ್ಮನಾಭನಗರಕ್ಕೆ ನಾನು ಪ್ರಜ್ವಲ್ನನ್ನು ಬಿಡಿಸಲು ತಂದೆ ಜೊತೆ ಮಾತನಾಡಲು ಹೋಗಿಲ್ಲ. ತಂದೆ- ತಾಯಿ ಅವರ ಆರೋಗ್ಯ ವಿಚಾರಿಸಲು ಮತ್ತು ಧೈರ್ಯ ಹೇಳಲು ಹೊಗುತ್ತೇನೆ. ನಾನು ತಂದೆಗೆ ಮನವಿ ಮಾಡಿದ್ದೇನೆ. ಪ್ರಜ್ವಲ್ ಎಲ್ಲೆ ಇದ್ದರೂ ಬಂದು ಸರೆಂಡರ್ ಆಗಲು ಮಾನವಿ ಮಾಡಲು ಹೇಳಿದ್ದೇನೆ ಎಂದು ತಿಳಿಸಿದರು.
ಪ್ರಜ್ವಲ್ ಮೇಲೆ ಆರೋಪ ಕೇಳಿಬಂದ ಕೂಡಲೇ ಬಹಳಷ್ಟು ನೊಂದಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ರಾಜ್ಯಸಭಾ ಸ್ಥಾನಕ್ಕೆ ರಾಜೀನಾಮೆ ಕೊಡಲು ಮುಂದಾಗಿದ್ದರು. ರಾಜ್ಯದ ಹಿತಕ್ಕಾಗಿ ನೀವು ರಾಜ್ಯಸಭೆಯಲ್ಲಿ ಇರಬೇಕು ಎಂದು ಅವರ ಮನವೊಲಿಸಿದ್ದೇನೆ ಎಂದು ಹೇಳಿದರು.
ನಾನು ಎರಡು ಬಾರಿ ಮುಖ್ಯಮಂತ್ರಿಯಾಗಿದ್ದು, ಆ ಅವಧಿಯಲ್ಲಿ ಅಧಿಕಾರ ದುರುಪಯೋಗಪಡಿಸಿಕೊಂಡಿರುವುದನ್ನು ಸಾಬೀತುಪಡಿಸಿದರೆ ರಾಜಕೀಯ ನಿವೃತ್ತಿ ಹೊಂದುವುದಾಗಿ ಸವಾಲು ಹಾಕಿದರು
ಈ ಕೇಸ್ನಲ್ಲಿ ನನ್ನ ಹಾಗೂ ದೇವೇಗೌಡರನ್ನ ತಾಳೆ ಹಾಕಿದ್ದಾರೆ.
ನಿನ್ನೆ ಆಡಿಯೋ ಬಂತಲ್ಲ. ಈಗ ಕಾಂಗ್ರೆಸ್ ನಾಯಕರು ಯಾಕೆ ಮಾತನಾಡುತ್ತಿಲ್ಲ. ಕುಮಾರಸ್ವಾಮಿ ಪೆನ್ ಡ್ರೈವ್ ಕೊಟ್ಟಿದ್ದು ಅಂತ ಹೇಳು ಅಂತೀರಾ. ಈ ಸರ್ಕಾರ 376 ಸರ್ಕಾರ. ಯಾರು ನಿಮ್ಮ ವಿರುದ್ಧ ಮಾತನಾಡುತ್ತಾರೆ ಅವರ ವಿರುದ್ಧ 376 ಕಲಂ ಅಡಿಯಲ್ಲಿ ಕೇಸು ಹಾಕಿಸುತ್ತಾರೆ. ದೇವರಾಜೇಗೌಡ ಬಗ್ಗೆ ನಾನು ವಕಾಲತ್ತು ವಹಿಸಲ್ಲ ಸತ್ಯಾಂಶ ಹೇಳುತ್ತೇನೆ. ದೇವರಾಜೇಗೌಡ ಆಡಿಯೋದಲ್ಲಿ ಯಾರು ಮತನಾಡಿದ್ದು, ಸದಾಶಿವ ನಗರಕ್ಕೆ ಯಾರನ್ನ ಭೇಟಿ ಮಾಡಲು ಹೇಳಿದ್ದರು. ಆಡಿಯೋದಲ್ಲಿ ಶಿವಕುಮಾರ್ ಹೇಳಿದ್ದಾರೆ ಕುಮಾರಸ್ವಾಮಿ ಹೆಸರು ಹೇಳಿ ಅಂದಿದ್ದಿರಾ ಸಿಡಿ ಶಿವು ಎಂದು ಕಿಡಿಕಾರಿದರು.
ಶಿವಕುಮಾರ್ ನೀವು ತಿಹಾರ್ ಜೈಲಿನಲ್ಲಿ ಇದ್ದಾಗ ನಾನು ನಿಮ್ಮ ತಾಯಿ ಭೇಟಿ ಮಾಡಿ ಸಾಂತ್ವನ ಹೇಳಿದೆ. ನಿಮ್ಮನ್ನು ಕೂಡ ತಿಹಾರ್ ಜೈಲಿನಲ್ಲಿ ಭೇಟಿ ಮಾಡಿ ನಾಲ್ಕು ದಿನಗಳಲ್ಲಿ ನೀವು ಬಿಡುಗಡೆ ಆದ್ರಿ. ಈಗ ನೀವು ಏನು ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದರು.
ಪ್ರಕರಣದ ಬಗ್ಗೆ ಎಸ್‌ಐಟಿಯಿಂದ ಪಾರದರ್ಶಕ ತನಿಖೆ ನಡೆಯಬೇಕಾದರೆ ಶಿವರಾಮೇಗೌಡ ಹಾಗೂ ಉಪ ಮುಖ್ಯಮಂತ್ರಿ ಶಿವಕುಮಾರ್ ಅವರ ಮೇಲೂ ಕೇಸು ದಾಖಲಿಸಬೇಕು ಎಂದು ಒತ್ತಾಯಿಸಿದರು.