ಇಶಾ ಫೌಂಡೇಶನ್ ನ ಜಗ್ಗಿ ವಾಸುದೇವ್ ಸದ್ಗುರು ಎಂದು ಜಗತ್ತಿನ ಹಲವಡೆ ಪ್ರಸಿದ್ಧಿ ಪಡೆದಿದ್ದಾರೆ. ಯೂ ಟ್ಯೂಬ್ ನಲ್ಲಿ ದೊಡ್ಡ ಪ್ರಮಾಣದ ಫಾಲೋವರ್ಸ್ ಹೊಂದಿದ್ದಾರೆ.
ಧಾರ್ಮಿಕ ಪ್ರವಚನಕಾರರಾಗಿ ಗುರುತಿಸಿಕೊಳ್ಳುತ್ತಿರುವ ಇವರು ಧಾರ್ಮಿಕ ವಿಚಾರಗಳಿಗಿಂತ ಹೆಚ್ಚಾಗಿ ಇತರೆ ಸಾಮಾಜಿಕ ವಿಚಾರಗಳನ್ನು ಪ್ರಸ್ತಾಪಿಸುವ ಮೂಲಕ ಗಮನ ಸೆಳೆದಿದ್ದಾರೆ.
ಪರಿಸರ ಹೋರಾಟಗಾರ, ಶಾಂತಿ ಮಂತ್ರ ಬೋಧಿಸುವ ಧಾರ್ಮಿಕ ಪ್ರವಚನಕಾರ ಶಿವನ ಆರಾಧನೆಯೊಂದಿಗೆ ಸರಳ ಜೀವನದ ಪಾಠ ಮಾಡುವ ವ್ಯಕ್ತಿತ್ವ ವಿಕಸನದ ಪ್ರಮುಖ ಭಾಷಣಕಾರನಂತೆ ಕಾಣಿಸುವ ಜಗ್ಗಿ ವಾಸುದೇವ್ ಯಾವ ರಾಜಕಾರಣಿಗಿಂತ ಕಡಿಮೆ ಇಲ್ಲ.
ಆಡಳಿತರೂಢ ರಾಜಕೀಯ ಪಕ್ಷಗಳ ಜೊತೆ ಹೆಚ್ಚು ಹೆಚ್ಚು ಗುರುತಿಸಿಕೊಳ್ಳುವ ಸದ್ಗುರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಯಾರು ಎಂದು ಕೇಳುವ ಮೂಲಕ ಹೋದಲ್ಲಿ ಬಂದಲ್ಲಿ ಅವರ ಬಗ್ಗೆ ವ್ಯಂಗ್ಯವಾಡಿ ಪ್ರಸಿದ್ಧಿ ಪಡೆದಿದ್ದಾರೆ. ಜೊತೆಗೆ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರದ ಕಾರ್ಯಕ್ರಮಗಳು ಮತ್ತು ಬಿಜೆಪಿ ನಾಯಕತ್ವವನ್ನು ಪ್ರಬಲವಾಗಿ ಬೆಂಬಲಿಸುವ ಜಗ್ಗಿ ವಾಸುದೇವ್ ಇದೀಗ ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳ ಕಟು ಟೀಕಾಕಾರವಾಗಿ ಗಮನ ಸೆಳೆಯುತ್ತಿದ್ದಾರೆ.
ಈ ಹಿಂದೆ ದೇಶದಲ್ಲಿ ಕಾಂಗ್ರೆಸ್ ಆಡಳಿತ ನಡೆಸುತ್ತಿದ್ದ ವೇಳೆ ಅಶಾಂತಿ ತಾಂಡವಾಡುತ್ತಿತ್ತು.ಎಲ್ಲೆಂದರಲ್ಲಿ ಸ್ಪೋಟ ನಡೆಯುತ್ತಿತ್ತು.ಆದರೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಸಂಪೂರ್ಣ ಶಾಂತಿ ನೆಲೆಸಿದೆ ಎಂದು ಬಣ್ಣಸುತ್ತಿದ್ದಾರೆ.ಹೀಗಾಗಿ ಜನ ಸಾಮಾನ್ಯರು ಇವರನ್ನು ಯಾವ ಪಕ್ಷ ಎಂದು ಕೇಳುತ್ತಿದ್ದಾರೆ.
ಕೊಯಮತ್ತೂರಿನಲ್ಲಿ ಇಶಾ ಫೌಂಡೇಶನ್ ಆರಂಭಿಸಿದ ಜಗ್ಗಿ ವಾಸುದೇವ್ ಮೊದಲಿಗೆ ಪರಿಸರ ಉಳಿಸಿ ಎಂಬ ಘೋಷಣೆಯೊಂದಿಗೆ ಗಿಡ ನೆಡುವ ಆಂದೋಲನ ಆರಂಭಿಸಿ ಅಂದಿನ ತಮಿಳುನಾಡಿನ ಡಿಎಂಕೆ ಸರ್ಕಾರದ ವಿಶ್ವಾಸ ಗಿಟ್ಟಿಸುವಲ್ಲಿ ಯಶಸ್ವಿಯಾದರು.ಅಂದು ಅನೇಕರು ಇವರನ್ನು ಧಾರ್ಮಿಕ ನಾಯಕ ಎನ್ನುವುದಕ್ಕಿಂತ ಡಿಎಂಕೆ ಬೆಂಬಲಿಗ ಎಂದೇ ಗುರುತಿಸುತ್ತಿದ್ದರು.
ಆ ಬಳಿಕ ಪರಿಸರ ಮತ್ತು ಅಂತರ್ಜಲ ಕಾಪಾಡುವ ಹಲವಾರು ಪರಿಸರ ಸಂಬಂಧಿ ಹೋರಾಟಗಳ ಮೂಲಕ ಆಡಳಿತರೂಢ ಪಕ್ಷಗಳು ಒಲವು ಗಳಿಸಿದ ಸದ್ಗುರು ಕಾಲಕ್ಕೆ ತಕ್ಕಂತೆ ಆಡಳಿತ ಪಕ್ಷದ ಬೆಂಬಲಿಗರಂತೆ ಇದ್ದರು.
ಆದರೆ ಇದೀಗ ಸಂಪೂರ್ಣ ಬದಲಾಗಿದ್ದಾರೆ. ಬಿಜೆಪಿ ಪಡಸಾಲೆಯಲ್ಲಿ ಸಂಭ್ರಮಿಸುತ್ತಿದ್ದಾರೆ.ಕೇಂದ್ರ ಸರ್ಕಾರ ಮತ್ತು ಬಿಜೆಪಿ ನಾಯಕತ್ವವನ್ನು ಹೋದಲ್ಲಿ, ಬಂದಲ್ಲಿ ಹೊಗಳುವ ಮೂಲಕ ಗಮನ ಸೆಳೆದಿದ್ದಾರೆ
Previous Articleಮಾರ್ಚ್ 22ರಂದು ಕರ್ನಾಟಕ ಬಂದ್
Next Article ಸತೀಶ್ ಜಾರಕಿಹೊಳಿ ಅವರಲ್ಲಿ ಡಿಕೆ ಸುರೇಶ್ ಕೇಳಿದ್ದೇನು.?