ಬೆಂಗಳೂರು, ಮೇ.10
ಮಹಿಳೆಯ ಅಪಹರಣ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಮಾಜಿ ಸಚಿವ ಎಚ್.ಡಿ ರೇವಣ್ಣ ಅವರು ನಿನ್ನೆ ಜಾಮೀನು ಸಿಗದ ಹಿನ್ನೆಲೆಯಲ್ಲಿ ಮತ್ತಷ್ಟು ಮಂಕಾಗಿ ಮೌನಕ್ಕೆ ಶರಣಾಗಿದ್ದಾರೆ.
ಜೈಲಿನಲ್ಲಿರುವ ಅವರನ್ನು ಇನ್ನು ಮೂರು ದಿನ ಆಪ್ತರೂ ಸೇರಿ ಯಾರೂ ಭೇಟಿಯಾಗುವಂತಿಲ್ಲ.
ಇಂದು ಅಕ್ಷಯ ತೃತೀಯ ಸರ್ಕಾರಿ ರಜೆ, ನಾಳೆ ಎರಡನೇ ಶನಿವಾರ ರಜೆ, ನಾಡಿದು ಭಾನುವಾರ ಹೀಗೆ ಮೂರು ದಿನ ಸರ್ಕಾರಿ ರಜೆ ಹಿನ್ನೆಲೆಯಲ್ಲಿ, ಮೂರು ದಿನ ಜೈಲು ಬಂಧಿಗಳ ಭೇಟಿಗೆ ಅವಕಾಶವಿಲ್ಲ.
ಈ ಮೊದಲು ರೇವಣ್ಣ ಅವರನ್ನು ಆಪ್ತರು ಬಂದು ಪ್ರತಿದಿನ ಭೇಟಿಯಾಗುತ್ತಿದ್ದರು. ಆದರೆ ಇಂದು ಸೇರಿದಂತೆ ಮೂರು ದಿನ ರೇವಣ್ಣ ಯಾರನ್ನೂ ಭೇಟಿ ಮಾಡಲು ಸಾಧ್ಯವಿಲ್ಲದಾಗಿದೆ.
ಆಪ್ತರ ಭೇಟಿಯಲ್ಲಿ ರೇವಣ್ಣ ತಮ್ಮ ದುಗುಡ ದುಮ್ಮಾನ ಹೇಳಿಕೊಂಡು ಮನಸ್ಸು ಹಗುರ ಮಾಡಿಕೊಳ್ಳುತ್ತಿದ್ದರು. ಇದೀಗ ಅದಕ್ಕೂ ಸರ್ಕಾರಿ ರಜೆ ಅಡ್ಡಿಯಾಗಿದೆ.
ಪ್ರತಿ ಶುಕ್ರವಾರ ಜೈಲುವಾಸಿಗಳಿಗೆ ಕೋಳಿ ಮಾಂಸದ ಊಟ ನೀಡಲಾಗುತ್ತಿತ್ತು. ಆದರೆ ಇಂದು ಅಕ್ಷಯ ತೃತೀಯದ ಹಿನ್ನೆಲೆಯಲ್ಲಿ ಮಾಂಸಾಹಾರ ನೀಡಲಾಗುತ್ತಿಲ್ಲ. ಭಾನುವಾರ ಚಿಕನ್ ನೀಡಲಿದ್ದಾರೆ ಎಂದು ಗೊತ್ತಾಗಿದೆ. ಇಂದು ನಿತ್ಯ ಕೈದಿಗಳಿಗೆ ನೀಡಲಾಗುವ ಉಪ್ಪಿಟ್ಟು, ಚಿತ್ರಾನ್ನವನ್ನೇ ಅವರಿಗೂ ನೀಡಲಾಗಿದ್ದು, ಅದನ್ನು ಅವರು ಸೇವಿಸಿಲ್ಲ.
ಸಾಮಾನ್ಯ ವಿಚಾರಣಾಧೀನ ಕೈದಿಯಂತೆ ದಿನ ಕಳೆಯುತ್ತಿರುವ ರೇವಣ್ಣ ಅವರಿಗೆ ನಿನ್ನೆ ಜಾಮೀನು ಸಿಗದೆ ನಿರಾಸೆಯಾಗಿದೆ. ಜಾಮೀನು ಸಿಗದ ಹಿನ್ನೆಲೆಯಲ್ಲಿ ಮತ್ತಷ್ಟು ಮಂಕಾಗಿರುವ ರೇವಣ್ಣ ಆಪ್ತರ ಭೇಟಿ ವೇಳೆ ಬೇಸರ ಹೊರಹಾಕಿದ್ದಾರೆ. ರಾತ್ರಿ ಊಟ ಕೂಡ ತಡವಾಗಿ ಮಾಡಿದ್ದಾರೆ.

