ಬೆಂಗಳೂರು,ಆ.27-
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತನಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್ಗೆ ವಿಶೇಷ ಅತಿಥ್ಯ ದೊರೆತಿರುವ ಸಂಬಂಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಮೂರು ಪ್ರಕರಣ ದಾಖಲಿಸಲಾಗಿದೆ.ಇದರಲ್ಲಿ ಎರಡರಲ್ಲಿ ನಟ ದರ್ಶನ್ ಮೊದಲ ಆರೋಪಿಯಾಗಿದ್ದಾರೆ.
ಈ ಮೂರು ಪ್ರಕರಣದ ತನಿಖೆಗಾಗಿ ಆಗ್ನೇಯ ವಿಭಾಗ ಡಿಸಿಪಿ ಸಾರಾ ಫಾತೀಮಾ ಅವರು ಮೂರು ವಿಶೇಷ ತಂಡ ರಚನೆ ಮಾಡಿದ್ದು,ತಂಡಗಳು ಈಗಾಗಲೇ ಕಾರ್ಯೋನ್ಮುಖವಾಗಿವೆ.
ಈ ನಡುವೆ ದರ್ಶನ್ ಮಾಡಿಕೊಂಡ ಎಡವಟ್ಟಿನಿಂದ ಅವರನ್ನು ಈಗ ಬೆಂಗಳೂರಿನ ಕೇಂದ್ರ ಕಾರಾಗೃಹದಿಂದ ಬೆಳಗಾವಿಯ ಹಿಂಡಲಗಾ ಜೈಲಿನ ‘ಅಂದೇರಿʼ ಸೆಲ್‌ಗಳಿಗೆ ಶಿಫ್ಟ್ ಮಾಡಲು ಚಿಂತನೆ ನಡೆದಿದೆ. ದರ್ಶನ್ ಅವರ ಸಂಪೂರ್ಣ ಗ್ಯಾಂಗ್ ಇಲ್ಲಿಗೆ ತೆರಳಲಿದೆ ಎಂದು ಹೇಳಲಾಗುತ್ತಿದೆ.
ಇನ್ನು ಪ್ರಕರಣ ಸಂಬಂಧ ಬೇಗೂರು ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಕೃಷ್ಣಕುಮಾರ್ ಮೊದಲ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿದ್ದು, ಜೈಲಿನ ಲಾನ್ನಲ್ಲಿ ಕುಳಿತು ಕಾಫಿ ಸಿಗರೇಟ್ ಸೇವನೆ, ರೌಡಿಶೀಟರ್ಗಳ ಜೊತೆ ದರ್ಶನ್ ಬೆರೆತಿದ್ದು ಹೇಗೆ? ಲಾನ್ನಲ್ಲಿ ಎಲ್ಲರೂ ಒಟ್ಟಿಗೆ ಕೂರಲು ಚೇರ್ ವ್ಯವಸ್ಥೆ ಮಾಡಿದವರು ಯಾರು? ಕಾಫಿ ಮಗ್ ಹೇಗೆ ಬಂತು? ಹಾಗೂ ಜೈಲಿನಲ್ಲಿ ಸಿಗರೇಟ್, ಮದ್ಯ, ಮಾದಕವಸ್ತು ನಿಷೇಧವಿದ್ದರೂ, ಹೇಗೆ ಒಳಗೆ ಬಂತು ಎನ್ನುವುದರ ಬಗ್ಗೆ ತನಿಖೆ ನಡೆಸುತ್ತಾರೆ.
ಎರಡನೇ ಪ್ರಕರಣ:
ಮೊಬೈಲ್ ನಲ್ಲಿ ಫೋಟೋ ಹಾಗೂ ವಿಡಿಯೋ ಚಿತ್ರೀಕರಣದ ಬಗ್ಗೆ ಹುಳಿಮಾವು ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಕುಮಾರಸ್ವಾಮಿ ತನಿಖೆ ನಡೆಸುತ್ತಾರೆ. ಫೋಟೋ ತೆಗೆದಿದ್ದು ಹಾಗೂ ವಿಡಿಯೋ ಕರೆ ಮಾಡಿದ್ದು ಯಾರು? ಜೈಲಿನಲ್ಲಿ ಮೊಬೈಲ್ ಬಳಕೆ ನಿಷೇಧವಿದ್ದರೂ, ಆರೋಪಿಗಳ ಕೈಗೆ ಮೊಬೈಲ್ ಸಿಕ್ಕಿದ್ದು ಹೇಗೆ.? ಒದಗಿಸಿದವರು ಯಾರು, ನೆಟ್ ಕನೆಕ್ಷನ್ ಹೇಗೆ ಎನ್ನುವುದರ ಬಗ್ಗೆ ಮಾಹಿತಿಯನ್ನು ಕಲೆ ಹಾಕಲಿದ್ದಾರೆ. ಹೊರಗಡೆಯಿಂದ ಜೈಲಿನೊಳಗೆ ವಿಡಿಯೋ ಕರೆ ಮಾಡಿರುವ ಬಗ್ಗೆಯೂ ತನಿಖೆ ನಡೆಯಲಿದೆ.
ಜೈಲು ಅಧಿಕಾರಿಗಳ ಕರ್ತವ್ಯ ಲೋಪದ ವಿರುದ್ಧ ದಾಖಲಾಗಿರುವ ಮೂರನೇ ಪ್ರಕರಣವನ್ನು ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯ ಎಸಿಪಿ ಮಂಜುನಾಥ್ ನೇತೃತ್ಚದ ತಂಡ ತನಿಖೆ ನಡೆಸುತ್ತದೆ.
ಸೆಕ್ಯೂರಿಟಿ 3ರಲ್ಲಿ ದರ್ಶನ್:
ಪರಪ್ಪನ ಅಗ್ರಹಾರ ಜೈಲಿನ ಸೆಕ್ಯೂರಿಟಿ 3ರಲ್ಲಿ ನಟ ದರ್ಶನ್ ಅವರನ್ನು ಇಡಲಾಗಿದೆ. ಅವರನ್ನು ನೋಡುವವರು ಬಂದಾಗ ಮೂರನೇ ಬ್ಯಾರಕ್ನಿಂದ ದರ್ಶನ್ ಹೊರ ಬರುತ್ತಿದ್ದರು. ಪತ್ನಿ ಹಾಗೂ ಇತರರನ್ನು ಭೇಟಿ ಆದ ಬಳಿಕ ದರ್ಶನ್ ನೇರವಾಗಿ ತೆರಳುತ್ತಿದ್ದುದು ವಿಲ್ಸನ್ ಗಾರ್ಡ್ ನಾಗನ ಬಳಿ ಈತನನ್ನು ಸೆಕ್ಯೂರಿಟಿ 1ರ ಬ್ಯಾರಾಕ್ನಲ್ಲಿ ಇಡಲಾಗಿದೆ.
ದರ್ಶನ್ ಅವರು ಅಧಿಕಾರಿಗಳ ಕಣ್ಣು ತಪ್ಪಿಸಿ ನಾಗನ ಬ್ಯಾರಕ್ ಕಡೆ ಓಡುತ್ತಿದ್ದರು. ನಾಗನ ಜೊತೆ ಹರಟೆ ಹೊಡೆಯುವಾಗ ಅಧಿಕಾರಿಗಳು ಬಂದು ಇಲ್ಲಿ ಇರುವ ಹಾಗಿಲ್ಲ ಎಂದರೆ ಒಂದೆರಡು ನಿಮಿಷ ತಡೆಯಿರಿ ಎಂದು ನಾಗ ಹೇಳುತ್ತಿದ್ದನಂತೆ. ಜೈಲಿನ ಅಧಿಕಾರಿಗಳು ಹೇಳಿದರೂ ದರ್ಶನ್ ಹೋಗುತ್ತಿರಲಿಲ್ಲ. ದರ್ಶನ್ನ ಕರೆಸಿಕೊಳ್ಳಲು ನಾಗನ ಕುಮ್ಮಕ್ಕು ಕೂಡ ಇದೆ ಎನ್ನಲಾಗಿದೆ.
ಜಾಮೀನಿಗೆ ಪ್ರಯತ್ನ:
ಇನ್ನು ದರ್ಶನ್ಗೆ ಜಾಮೀನು ಕೊಡಿಸಲು ಅವರ ಕುಟುಂಬದವರು ಪ್ರಯತ್ನಿಸುತ್ತಿದ್ದಾರೆ. ಆದರೆ ಈಗ ಜೈಲಿನ ಒಳಗೆ ದರ್ಶನ್ ಅಕ್ರಮ ಎಸಗಿರುವುದು ಬೆಳಕಿಗೆ ಬಂದಿದ್ದು ಅದಕ್ಕೆ ತೊಡಕಾಗಲಿದೆ
Previous Articleಬೆಂಗಳೂರಿನಲ್ಲಿ ಸೈಟ್ ದುಬಾರಿ ಯಾಕೆ ಗೊತ್ತಾ.
Next Article Social mediaದಲ್ಲಿ ಕಾಂಗ್ರೆಸ್ ದರ್ಬಾರ್