ನೈಋತ್ಯ ಬಂಗಾಳ ಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತವು ಈಗ ವಿಪರೀತ ವಾಯುಭಾರ ಕುಸಿತವಾಗಿ ತೀವ್ರಗೊಂಡಿದೆ ಮತ್ತು ಬುಧವಾರ ಇದು ಚಂಡಮಾರುತವಾಗಿ ಮಾರ್ಪಾಡಾಗುವ ನಿರೀಕ್ಷೆಯಿದೆ ಎಂದು ಚೆನ್ನೈನ ಪ್ರಾದೇಶಿಕ ಹವಾಮಾನ ಕೇಂದ್ರ (RMC) ತಿಳಿಸಿದೆ. ಐಎಂಡಿಯು ಈ ಪ್ರದೇಶದಾದ್ಯಂತ ಹಗುರದಿಂದ ಸಾಧಾರಣ ಮಳೆಯಾಗುವ ಮುನ್ಸೂಚನೆ ನೀಡಿದ್ದು, ಸಾಂದರ್ಭಿಕವಾಗಿ ಭಾರೀ ಮಳೆಯು ಕೂಡ ಕಂಡುಬರುವ ಸಾಧ್ಯತೆ ಇದ್ದು ಇದೆಲ್ಲ ನವೆಂಬರ್ 28ರ ಗುರುವಾರದವರೆಗೆ ಮುಂದುವರಿಯುತ್ತದೆ ಎನ್ನಲಾಗಿದೆ.
ಈ ಪ್ರದೇಶದಲ್ಲಿ ನಿರಂತರ ಮಳೆಯಿಂದಾಗಿ ತಮಿಳುನಾಡಿನ ತಿರುಚಿರಾಪಳ್ಳಿ ಜಿಲ್ಲೆಯಲ್ಲಿ ಬುಧವಾರ ಶಾಲೆ ಮತ್ತು ಕಾಲೇಜುಗಳನ್ನು ಮುಚ್ಚಲಾಗುವುದು ಎಂದು ಜಿಲ್ಲಾಡಳಿತ ತಿಳಿಸಿದೆ. ಜಿಲ್ಲೆಯಲ್ಲಿ ಇಂದು ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ತಿರುಚಿರಾಪಳ್ಳಿ ಜಿಲ್ಲಾಧಿಕಾರಿ ಈ ಘೋಷಣೆ ಮಾಡಿದ್ದಾರೆ ಎಂದು ಎಎನ್ಐ ವರದಿ ಮಾಡಿದೆ.
ಮಂಗಳವಾರ ಮುಂಜಾನೆ, ಭಾರೀ ಮಳೆಯಾಗಿದ್ದು ನಾಗಪಟ್ಟಣಂ, ಮಯಿಲಾಡುತುರೈ ಮತ್ತು ತಿರುವರೂರ್ ಸೇರಿದಂತೆ ಹಲವಾರು ಪ್ರದೇಶಗಳಲ್ಲಿ ಶಾಲೆ ಮತ್ತು ಕಾಲೇಜುಗಳಿಗೆ ಅಧಿಕಾರಿಗಳು ರಜೆ ಘೋಷಿಸಿದ್ದರು. ಈ ವಾಯುಭಾರ ಕುಸಿತದಿಂದಾಗಿ Bengaluru ಸೇರಿ ಕರ್ನಾಟಕದ ದಕ್ಷಿಣ ಒಳನಾಡಿನ ಹಲವು ಕಡೆ ಮಳೆಯಾಗುವ ಸಾಧ್ಯತೆ ಇದೆ.