ಬೆಂಗಳೂರು,ಆ.6-
ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಜೋಡಿ ಕೊಲೆ ಪ್ರಕರಣ ಬೇಧಿಸಲಾಗಿದೆ.ಬಿಜೆಪಿ ಮುಖಂಡ ಹಾಗೂ
ರಿಯಲ್ ಎಸ್ಟೇಟ್ ಉದ್ಯಮಿ ವೀರಸ್ವಾಮಿ ರೆಡ್ಡಿ ಮತ್ತು ಅವರ ಪುತ್ರ ಪ್ರಶಾಂತ್ ರೆಡ್ಡಿ ಅವರ ಜೋಡಿ ಕೊಲೆ ಪ್ರಕರಣದ ಸಂಬಂಧ, ಪ್ರಮುಖ ಆರೋಪಿ ಸೇರಿ 6 ಮಂದಿಯ ಗ್ಯಾಂಗನ್ನು ಆಂಧ್ರಪ್ರದೇಶದ ನರಸಮ್‌ಪೇಟೆ ಪೊಲೀಸರು ಬಂಧಿಸಿದ್ದಾರೆ.
ಈ ಜೋಡಿ ಕೊಲೆಗೆ ಬರೋಬ್ಬರಿ 14 ಕೋಟಿ ರೂಪಾಯಿ ಮೌಲ್ಯದ ಆಸ್ತಿ ವಿವಾದವೇ ಪ್ರಮುಖ ಕಾರಣ ಎಂದು ಪತ್ತೆಯಾಗಿದೆ.
ಪ್ರಕರಣದ ಪ್ರಮುಖ ಆರೋಪಿ, ಕೊಲೆಯಾದ ವೀರಸ್ವಾಮಿ ರೆಡ್ಡಿ ಅವರ ಮಾಜಿ ಉದ್ಯಮ ಪಾಲುದಾರ ಮಾಧವರೆಡ್ಡಿ ಎಂದು ಗುರುತಿಸಲಾಗಿದೆ. ಇನ್ನು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧವರೆಡ್ಡಿ,ಅನಿಲ್ ರೆಡ್ಡಿ, ನಾಗಿರೆಡ್ಡಿ, ಚಿನ್ನಾರೆಡ್ಡಿ ಅಲಿಯಾಸ್ ಇಂದ್ರಸೇನಾ ರೆಡ್ಡಿ, ಗೋಪಿ ರೆಡ್ಡಿ ಮತ್ತು ರಘುರಾಮ್ ರೆಡ್ಡಿ ಎಂಬುವರನ್ನು ಬಂಧಿಸಲಾಗಿದೆ
ಕೊಲೆ ಆರೋಪಿ ಮಾಧವರೆಡ್ಡಿ ಹಾಗೂ ವೀರಸ್ವಾಮಿ ರೆಡ್ಡಿ ಇಬ್ಬರೂ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಪಾಲುದಾರರಾಗಿದ್ದರು.
ಬೆಂಗಳೂರಿನ 14 ಕೋಟಿ ರೂ ಮೌಲ್ಯದ ಆಸ್ತಿ ವಿಚಾರದಲ್ಲಿ ಇಬ್ಬರ ನಡುವೆ ತೀವ್ರ ವೈಷಮ್ಯ ಬೆಳೆದಿತ್ತು. ವೀರಸ್ವಾಮಿ ತನಗೆ ಹಣಕಾಸಿನ ವಿಚಾರದಲ್ಲಿ ವಂಚನೆ ಮಾಡಿದ್ದಾನೆ ಎಂಬುದು ಮಾಧವರೆಡ್ಡಿಯ ಪ್ರಬಲ ಆರೋಪವಾಗಿತ್ತು. ಇದೇ ದ್ವೇಷದ ಹಿನ್ನೆಲೆಯಲ್ಲಿ, ತನ್ನ ಮಾಜಿ ಪಾಲುದಾರನನ್ನೇ ಮುಗಿಸಲು ಮಾಧವರೆಡ್ಡಿ ವ್ಯವಸ್ಥಿತವಾಗಿ ಸಂಚು ರೂಪಿಸಿದ್ದನು.
ಅದಕ್ಕೆ ತಕ್ಕಂತೆ ರೌಡಿಗಳ ಗ್ಯಾಂಗ್ ಕಟ್ಟಿಕೊಂಡು ಕೊಲೆ ಮಾಡುವುದಕ್ಕೆ ಎಲ್ಲವನ್ನೂ ಯೋಜನೆ ಮಾಡಿದ್ದನು.ಮಾಧವರೆಡ್ಡಿ ಮತ್ತು ಆತನ ಗ್ಯಾಂಗ್, ತಂದೆ-ಮಗನನ್ನು ಹತ್ಯೆ ಮಾಡಲು ವ್ಯವಸ್ಥಿತ ಸಂಚು ರೂಪಿಸಿತ್ತು.
ಮೊದಲಿಗೆ, ವೀರಸ್ವಾಮಿ ರೆಡ್ಡಿ ಮೇಲೆ ಚೆಕ್ ಬೌನ್ಸ್ ಪ್ರಕರಣ ದಾಖಲಿಸಿ, ಅವರನ್ನು ನ್ಯಾಯಾಲಯದ ವಿಚಾರಣೆಗೆ ಬರುವಂತೆ ಮಾಡಿದ್ದರು. ನಂತರ, ಕೊಲೆಯಾದ ಪ್ರಶಾಂತ್ ರೆಡ್ಡಿ ಬಳಿ ರಾಜಿ ಸಂಧಾನ ಮಾಡಿಸುವುದಾಗಿ ನಂಬಿಸಿ, ತಂದೆ-ಮಗ ಇಬ್ಬರನ್ನೂ ನರಸಮ್‌ಪೇಟೆ ಬಳಿಗೆ ಬರುವಂತೆ ಮಾಡಿದ್ದರು.
ಯೋಜನೆಯ ಪ್ರಕಾರ ಅಲ್ಲಿಗೆ ಬಂದ ವೀರಸ್ವಾಮಿ ರೆಡ್ಡಿ ಮತ್ತು ಪ್ರಶಾಂತ್ ರೆಡ್ಡಿ ಅವರನ್ನು ಅಪಹರಿಸಿ, ಮಾಧವರೆಡ್ಡಿ ಮತ್ತು ಆತನ ಸಹಚರರು ಮಾರಕಾಸ್ತ್ರಗಳಿಂದ ಭೀಕರವಾಗಿ ಹಲ್ಲೆ ನಡೆಸಿದ್ದಾರೆ.
ಇದರಿಂದ ಇಬ್ಬರೂ ಮೃತಪಟ್ಟಿದ್ದಾರೆ.
ಬಳಿಕ ಎಲ್ಲರೂ ನಾಪತ್ತೆಯಾಗಿದ್ದರು ಈ ಪ್ರಕರಣ ರಾಜ್ಯದಲ್ಲಿ ಸಾಕಷ್ಟು ಸಂಚಲನ ಮೂಡಿಸಿತ್ತು. ಇದನ್ನು ಸವಾಲಾಗಿ ಸ್ವೀಕರಿಸಿದ ಆಂಧ್ರಪ್ರದೇಶ ಪೊಲೀಸರು ಈಗ ಕೊಲೆಗಾರರನ್ನು ಬಂಧಿಸಿ ಜೈಲಿಗೆ ಅಟ್ಟಿದ್ದಾರೆ
Previous Articleಇಂಧನ ಮಂತ್ರಿ ಕೆ ಜೆ ಜಾರ್ಜ್ ಅವರಿಗೆ ಬಿಗ್ ರಿಲೀಫ್ !
Next Article ಕೇಂದ್ರ ಆರೋಗ್ಯ ಮಂತ್ರಿಗೆ ದಿನೇಶ್ ಗುಂಡೂರಾವ್ ಪತ್ರ
