ಬೆಂಗಳೂರು,ಜು.25-
ಹೆಚ್ಚುತ್ತಿರುವ ಪ್ರಯಾಣ ದಟ್ಟಣೆ ಕಡಿಮೆ ಮಾಡುವ ದೃಷ್ಟಿಯಿಂದ ಬೆಂಗಳೂರಿನಲ್ಲಿ ಮತ್ತೊಂದು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮಾಡಬೇಕು ಎಂಬ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಗೆ ಕೇಂದ್ರ ಸರ್ಕಾರದ ನಿಲುವು ಹಿನ್ನಡೆಯಾಗಿ ಪರಿಣಮಿಸಿದೆ.
ಹೊಸದಾಗಿ ವಿಮಾನ ನಿಲ್ದಾಣ ಬರುವ ಸ್ಥಳದ ಕುರಿತಂತೆ ಕೇಂದ್ರ ವಿಮಾನಯಾನ ಪ್ರಾಧಿಕಾರದ ಅಧಿಕಾರಿಗಳು ಕರ್ನಾಟಕಕ್ಕೆ ಆಗಮಿಸಿ ಇಲ್ಲಿನ ಅಧಿಕಾರಿಗಳು ಮತ್ತು ತಜ್ಞರ ಜೊತೆ ಸಮಾಲೋಚನೆ ನಡೆದಿದ್ದರು ಅದಾದ ನಂತರ ವಿಮಾನ ನಿಲ್ದಾಣ ಸ್ಥಾಪನೆ ಕುರಿತಂತೆ ಕರ್ನಾಟಕ ರಾಜ್ಯ ಸೂಚಿಸಿದ ಬೆಂಗಳೂರು ಹೊರವಲಯದ ಕಗ್ಗಲಿಪುರ, ಬಿಡದಿ ಮತ್ತು ಸೋಲೂರು ಸಮೀಪ 3 ಸ್ಥಳಗಳನ್ನು ಪರಿಶೀಲನೆ ನಡೆಸಿದ್ದರು.
ಇದೀಗ ವಿಮಾನಯಾನ ಪ್ರಾಧಿಕಾರ ಈ ಮೂರು ಸ್ಥಳಗಳ ಕುರಿತಂತೆ ಕೆಲವೊಂದು ಆಕ್ಷೇಪಣೆಗಳನ್ನು ಸಲ್ಲಿಸಿದ್ದು ಇಲ್ಲಿ ವಿಮಾನ ನಿಲ್ದಾಣ ಸ್ಥಾಪನೆ ಅಷ್ಟೊಂದು ಅನುಕೂಲಕರವಾಗುವುದಿಲ್ಲ ಎಂದು ವರದಿ ನೀಡಿರುವುದಾಗಿ ಗೊತ್ತಾಗಿದೆ.
ಪ್ರಾಧಿಕಾರ ಇಂತಹ ವರದಿ ಸಿದ್ದಪಡಿಸಿದ ಎಂಬ ಸುದ್ದಿ ತಿಳಿಯುತ್ತಿದ್ದಂತೆ ದೆಹಲಿಗೆ ದೌಡಾಯಿಸಿದ ಬೃಹತ್ ಕೈಗಾರಿಕಾ ಸಚಿವ ಎಂ ಬಿ.ಪಾಟೀಲ್ ಕೇಂದ್ರ ವಿಮಾನಯಾನ ಖಾತೆ ಮಂತ್ರಿ ಅವರೊಂದಿಗೆ ಮಾತುಕತೆ ನಡೆಸಿದರು.
ಈ ವೇಳೆ ಸ್ಥಳ ನಿಗದಿಯ ಕುರಿತು ಕೇಂದ್ರ ವಿಮಾನಯಾನ ಪ್ರಾಧಿಕಾರ ವ್ಯಕ್ತಪಡಿಸಿರುವ ಸಂಶಯಗಳ ಬಗ್ಗೆ ವಿವರಣೆ ನೀಡಿದ ಅವರು ಬೆಂಗಳೂರಿಗೆ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಚರ್ಚೆ ನಡೆಸಿ ಗೊಂದಲ ಬಗೆಹರಿಸುವುದಾಗಿ ತಿಳಿಸಿದ್ದು ಅಲ್ಲಿಯವರೆಗೆ ಯಾವುದೇ ತೀರ್ಮಾನ ಕೈಗೊಳ್ಳದಂತೆ ಮನವಿ ಮಾಡಿದ್ದಾರೆ.
ಬೆಂಗಳೂರಿಗೆ ಹಿಂತಿರುಗಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿ ಬೆಂಗಳೂರಿನ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಲ್ಲಿ ಮಾಡಬೇಕು ಎಂಬ ನಿಟ್ಟಿನಲ್ಲಿ ಸೋಮವಾರ ಅಥವಾ ಮಂಗಳವಾರ ಮಹತ್ವದ ಸಭೆ ನಡೆಯಲಿದೆ. ಇದರ ಜೊತೆಗೆ ಮುಖ್ಯಮಂತ್ರಿಗಳ ಜೊತೆಗೂ ಚರ್ಚೆ ನಡೆಸಬೇಕಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.
ಕೇವಲ ಬೆಂಗಳೂರಿನ ಎರಡನೇ ವಿಮಾನ ನಿಲ್ದಾಣ ಮಾತ್ರವಲ್ಲದೆ, ಮೈಸೂರು, ಶಿವಮೊಗ್ಗ, ವಿಜಯಪುರ ಸೇರಿದಂತೆ ರಾಜ್ಯದ ಇತರ ವಿಮಾನ ನಿಲ್ದಾಣಗಳ ಬಗ್ಗೆಯೂ ಚರ್ಚೆ ನಡೆದಿದೆ. ಎಲ್ಲಾ ವಿಮಾನ ನಿಲ್ದಾಣಗಳನ್ನು ಏರ್ ಪೋರ್ಟ್ ಅಥಾರಿಟಿ ಆಫ್ ಇಂಡಿಯಾಗೆ ವಹಿಸಿ ಎಂದು ಕೇಂದ್ರ ಸಚಿವರು ಹೇಳಿದ್ದಾರೆ. ಆದರೆ, ನಾನು ಒಬ್ಬನೇ ಈ ಬಗ್ಗೆ ನಿರ್ಣಯ ತೆಗೆದುಕೊಳ್ಳಲು ಆಗುವುದಿಲ್ಲ. ಹೀಗಾಗಿ, ಮುಖ್ಯಮಂತ್ರಿಗಳ ಜೊತೆ ಸಭೆ ನಡೆಸಿ, ಅವರ ಸಲಹೆ ಮತ್ತು ನಿರ್ದೇಶನದ ಮೇಲೆ ಅಂತಿಮ ನಿರ್ಧಾರ ಕೈಗೊಳ್ಳುತ್ತೇವೆ ಎಂದು ವಿವರಿಸಿದರು.