ಬೆಂಗಳೂರು,ಮಾ.5-
ಮದುವೆ ಮಂಟಪದಿಂದ ಪ್ರೀತಿ ಪ್ರೇಮದ ಕಾರಣಕ್ಕೆ ವಧು ಅಥವಾ ವರ ಪರಾರಿಯಾಗುವುದು ಮಾಮೂಲಿ.ಆದರೆ, ಮದುವೆಯ ಹಿಂದಿನ ರಾತ್ರಿ ವರದಕ್ಷಿಣೆಗೆ ಇಟ್ಟ ಬೇಡಿಕೆಯನ್ನು ಒಪ್ಪದಿದ್ದಾಗ ವರ ಹಾಗೂ ಆತನ ಕಡೆಯವರು ರಾತ್ರೋ ರಾತ್ರಿ ಪರಾರಿಯಾಗಿದ್ದಾರೆ.
ಈ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು ವಧುವಿನ ತಂದೆ ಉಪ್ಪಾರಪೇಟೆ ಠಾಣೆಯಲ್ಲಿ ದೂರು ನೀಡಿದ್ದಾರೆ.ಈ ಹಿನ್ನೆಲೆಯಲ್ಲಿ ವರ ಮತ್ತು ಆತನ ಕುಟುಂಬದ ಸದಸ್ಯರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ವಧು ಹಾಗೂ ವರ ಕಾಲೇಜು ದಿನಗಳಿಂದಲೂ ಸ್ನೇಹಿತರಾಗಿದ್ದರು ಶಿಕ್ಷಣ ಮುಗಿಸಿದ ಇಬ್ಬರೂ ಫ್ರಾನ್ಸ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ.ಹಾಗೇಯೇ ಪ್ರೀತಿಯ ಬಲೆಗೆ ಬಿದ್ದಿದ್ದು ಮದುವೆಯಾಗುವ ತೀರ್ಮಾನಕ್ಕೆ ಬಂದಿದ್ದಾರೆ.
ಕಳೆದ ವರ್ಷ ಜುಲೈನಲ್ಲಿ ಭಾರತಕ್ಕೆ ಬಂದಿದ್ದ ಯುವತಿ ತನ್ನ ಪ್ರೀತಿಯ ವಿಚಾರವನ್ನು ತಂದೆಗೆ ತಿಳಿಸಿ, ಮದುವೆಗೆ ಅನುಮತಿ ನೀಡುವಂತೆ ಕೇಳಿದ್ದಳು. ಬಳಿಕ ಇಬ್ಬರ ಪೋಷಕರು ಸಾಂಪ್ರದಾಯಿಕವಾಗಿ ಮಾತುಕತೆ ಮುಗಿಸಿ ಜುಲೈ 13ರಂದು ಬೆಂಗಳೂರಿನಲ್ಲಿ ಹಿಂದೂ ಪದ್ಧತಿ ಪ್ರಕಾರ ನಿಶ್ಚಿತಾರ್ಥ ಮಾಡಲಾಗಿತ್ತು. 2 ಮಾರ್ಚ್ 2025ರಂದು ಮದುವೆಗೆ ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ನಂತರ ಯುವತಿ ಫ್ರಾನ್ಸ್‌ಗೆ ತೆರಳಿದ್ದಳು.
ಇದಾದ ಬಳಿಕ ಫೆಬ್ರವರಿ 17ರಂದು ಭಾರತಕ್ಕೆ ಮರಳಿದ್ದ ಯುವತಿ ಮದುವೆಯ ಉಡುಪುಗಳನ್ನು ಖರೀದಿಸುವ ಉದ್ದೇಶದಿಂದ 3 ದಿನಗಳ ಕಾಲ ದೆಹಲಿಯ ಅತಿಥಿ ಗೃಹದಲ್ಲಿ ಉಳಿದುಕೊಂಡಿದ್ದರು
ಅದೇ ಸಂದರ್ಭದಲ್ಲಿ ಯುವತಿಯನ್ನು ಭೇಟಿಯಾಗಿದ್ದ ಯುವಕ, ‘ಇದು ಯುರೋಪಿಯನ್ ಸಂಸ್ಕೃತಿಯ ಪ್ರಕಾರ ಮದುವೆಗೆ ಮುಂಚಿನ ಸಂಬಂಧ’ ಎಂದು ಆಕೆಯೊಂದಿಗೆ ಲೈಂಗಿಕ ಸಂಪರ್ಕ ಹೊಂದಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಮದುವೆ ಸಮಾರಂಭಕ್ಕಾಗಿ ಫೆಬ್ರವರಿ 28ರಿಂದ ಮಾರ್ಚ್ 2ರ ವರೆಗೆ ಗಾಂಧಿನಗರದ, ರೈಲ್ವೆ ಆಫೀಸರ್ಸ್ ಎನ್‌ಕ್ಲೇವ್‌ನ ನಂದಿ ಕ್ಲಬ್ ಬುಕ್ ಮಾಡಲಾಗಿತ್ತು. ಅದರಂತೆ ಫೆಬ್ರವರಿ 28ರಂದು ಉತ್ತರ ಭಾರತೀಯ ಪದ್ಧತಿಗಳ ಪ್ರಕಾರ ಸಂಗೀತ ಕಾರ್ಯಕ್ರಮ ಮತ್ತು ಮರುದಿನ ಸಂಜೆ ಹಳದಿ, ಮೆಹಂದಿ ಕಾರ್ಯಕ್ರಮವನ್ನೂ ಆಯೋಜಿಸಲಾಗಿತ್ತು. ಆದರೆ ಮಾರ್ಚ್ 1ರಂದು ರಾತ್ರಿ 11 ಗಂಟೆಗೆ ಯುವಕನ ಪೋಷಕರು ಯುವತಿಯ ತಂದೆಯ ಬಳಿ ವರದಕ್ಷಿಣೆಯಾಗಿ 50 ಲಕ್ಷ ರೂ. ನಗದು, ಅರ್ಧ ಕೆ.ಜಿ ಚಿನ್ನ, ಒಂದು ಮರ್ಸಿಡಿಸ್ ಬೆಂಜ್ ಕಾರು ಕೊಡುವಂತೆ ಬೇಡಿಕೆಯಿಟ್ಟಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ
ಅದನ್ನು ನಿರಾಕರಿಸಿದ ಅವರು ಈ ವೇಳೆ ‘ಈಗಾಗಲೇ ಮದುವೆಗಾಗಿ ಸುಮಾರು 25 ಲಕ್ಷ ರೂ. ವೆಚ್ಚವಾಗಿದೆ. ಆದ್ದರಿಂದ ಇನ್ನೂ ಹೆಚ್ಚಿನ ಹಣವನ್ನ ಭರಿಸಲು ಸಾಧ್ಯವಿಲ್ಲ’ ಎಂದು ಹೇಳಿದ್ದಾರೆ. ಇದರಿಂದಾಗಿ ಯುವಕ ಹಾಗೂ ಆತನ ಪೋಷಕರು ರಾತ್ರೋರಾತ್ರಿ ತಿಳಿಸದೆ, ಮದುವೆ ಸ್ಥಳವನ್ನು ತೊರೆದಿದ್ದಾರೆ. ಬೆಳಗ್ಗೆ ವಿಷಯ ತಿಳಿದ ಯುವತಿಯ ತಂದೆ ಆರೋಪಿ ಯುವಕನಿಗೆ ಕರೆ ಮಾಡಿದಾಗ, ‘ನನ್ನ ಪೋಷಕರು ಇರಿಸಿರುವ ಬೇಡಿಕೆಗಳನ್ನು ಈಡೇರಿಸದ ಹೊರತು ನಾನು ಮದುವೆಯಾಗಲು ಮುಂದೆ ಬರುವುದಿಲ್ಲ’ ಎಂದಿದ್ದಾನೆ ಎಂದು ದೂರು ನೀಡಲಾಗಿದೆ.
ಉಪ್ಪಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Previous Articleಸಿನಿಮೀಯ ಶೈಲಿಯಲ್ಲಿ ಮೋಸ್ಟ್ ವಾಂಟೆಡ್ ಅರೆಸ್ಟ್
Next Article ಯಾರಾಗುತ್ತಾರೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ.