ಬೆಂಗಳೂರು, ನ.26:
ಮಠದ ಹಾಸ್ಟೆಲ್ ನಲ್ಲಿ ತಂಗಿದ್ದ ಹೆಣ್ಣು ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಪೋಕ್ಸೋ ಪ್ರಕರಣ ಎದುರಿಸುತ್ತಿದ್ದ ಚಿತ್ರದುರ್ಗದ ಮುರುಘಾ ಶರಣರಿಗೆ ಕೋರ್ಟ್ ನಲ್ಲಿ ಬಿಗ್ ರಿಲೀಫ್ ಸಿಕ್ಕಿದೆ.
ಇವರ ವಿರುದ್ಧ ದಾಖಲಾಗಿದ್ದ ಮೊದಲ ಪೋಕ್ಸೋ ಪ್ರಕರಣದಲ್ಲಿ ಸೂಕ್ತ ಸಾಕ್ಷ್ಯಾಧಾರಗಳ ಕೊರತೆ ಎತ್ತಿ ಹಿಡಿದಿರುವ ಚಿತ್ರದುರ್ಗದ 2ನೇ ಜಿಲ್ಲಾ ಅಪರ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಗಂಗಾಧರಪ್ಪ ಚನ್ನಬಸಪ್ಪ ಹಡಪದ್ ಜಿಲ್ಲಾ ನ್ಯಾಯಾಲಯ ಮುರುಘಾ ಶರಣರು ಸೇರಿ ಇತರ ಆರೋಪಿಗಳನ್ನು ಆರೋಪ ಮುಕ್ತಗೊಳಿಸಿದರು.
ಒಂದು ಪ್ರಕರಣದಲ್ಲಿ ಶರಣರು ಆರೋಪ ಮುಕ್ತರಾಗಿದ್ದು, ಶರಣರೊಂದಿಗೆ ಹಾಸ್ಟೆಲ್ ವಾರ್ಡನ್ ರಶ್ಮಿ, ಮಠದ ಮ್ಯಾನೇಜರ್ ಪರಮಶಿವಯ್ಯ ಅವರನ್ನೂ ಆರೋಪ ಮುಕ್ತಗೊಳಿಸಿ ಆದೇಶ ಹೊರಡಿಸಿದ್ದಾರೆ.
ಶರಣರ ವಿರುದ್ಧ ದಾಖಲಾಗಿರುವ ಇನ್ನೊಂದು ಪೋಕ್ಸೋ ಪ್ರಕರಣದ ವಿಚಾರಣೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
ಕಳೆದ 2022ರ ಆಗಸ್ಟ್ 26ರಂದು ಮುರುಘಾ ಶರಣರ ವಿರುದ್ಧ ಮೈಸೂರಿನ ನಜರಾಬಾದ್ ಠಾಣೆಯಲ್ಲಿ ಮೊದಲ ಪೋಕ್ಸೋ ಕೇಸ್ ದಾಖಲಾಗಿತ್ತು.
ಮಠದ ಹಾಸ್ಟೆಲ್ನ ಇಬ್ಬರು ಅಪ್ರಾಪ್ತ ವಿದ್ಯಾರ್ಥಿನಿಯರು ನೀಡಿದ ದೂರಿನ ಆಧಾರದಲ್ಲಿ
ಮುರುಘಾಶ್ರೀ, ಹಾಸ್ಟೆಲ್ ವಾರ್ಡನ್ ರಶ್ಮಿ, ಬಸವಾದಿತ್ಯ, ಹಾಸ್ಟೆಲ್ ಮ್ಯಾನೇಜರ್ ಪರಮಶಿವಯ್ಯ, ಮತ್ತು ವಕೀಲ ಗಂಗಾಧರಯ್ಯ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಆನಂತರ ಈ ಪ್ರಕರಣ ಆಗಸ್ಟ್ 27ರಂದು ಪ್ರಕರಣ ಚಿತ್ರದುರ್ಗ ಗ್ರಾಮಾಂತರ ಠಾಣೆಗೆ ವರ್ಗಾವಣೆಯಾಗಿತ್ತು. 2022ರ ಸೆಪ್ಟಂಬರ್ 1ರಂದು ಮುರುಘಾ ಶರಣರು, ಮತ್ತು ವಾರ್ಡನ್ ರಶ್ಮಿಯನ್ನ ಪೊಲೀಸರು ಬಂಧಿಸಿದ್ದರು. ಚಾರ್ಜ್ಶೀಟ್ ವೇಳೆ ಸಾಕ್ಷಿ ಕೊರತೆ ಹಿನ್ನೆಲೆಯಲ್ಲಿ ಬಸವಾದಿತ್ಯ, ಮತ್ತು ವಕೀಲ ಗಂಗಾಧರಯ್ಯ ಅವರ ಹೆಸರನ್ನು ಕೈಬಿಡಲಾಗಿತ್ತು.
ಮಠದ ಅಡುಗೆ ಸಹಾಯಕಿ ನೀಡಿದ್ದ ದೂರಿನ ಅನ್ವಯ ಮುರುಘಾ ಶರಣರ ವಿರುದ್ಧ 2022ರ ಅಗಸ್ಟ್ 13ರಂದು ಮೈಸೂರಿನ ನಜರಾಬಾದ್ ಠಾಣೆಯಲ್ಲಿ ಮತ್ತೊಂದು ಪ್ರಕರಣ ದಾಖಲಾಗಿತ್ತು. ಮಠದ ಹಾಸ್ಟೆಲ್ನಲ್ಲಿದ್ದಮ ತನ್ನಿಬ್ಬರು ಅಪ್ರಾಪ್ತ ಹೆಣ್ಣು ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಿರುವ ಬಗ್ಗೆ ದೂರಲ್ಲಿ ಅಡುಗೆ ಸಹಾಯಕಿ ಉಲ್ಲೇಖಿಸಿದ್ದರು.
ಇದಾದ ನಂತರ 2023ರ ನವೆಂಬರ್ 8ರಂದು ಹೈಕೋರ್ಟ್ನಿಂದ ಮುರುಘಾ ಶ್ರೀಗೆ ಷರತ್ತುಬದ್ಧ ಜಾಮೀನು ಸಿಕ್ಕಿದ್ದು, ನವೆಂಬರ್ 16ರಂದು ಕಾರಾಗ್ರಹದಿಂದ ಬಿಡುಗಡೆಯಾಗಿದ್ದರು. ಆದರೆ 2ನೇ ಪೋಕ್ಸೋ ಕೇಸಲ್ಲಿ ಜಾಮೀನು ಪಡೆಯದ ಹಿನ್ನೆಲೆ ನ.20ರಂದು ಮಧ್ಯಾಹ್ನ ಮುರುಘಾಶ್ರೀ ಮತ್ತೆ ಅರೆಸ್ಟ್ ಆಗಿದ್ದರು.
ಚಿತ್ರದುರ್ಗ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶ ಹಿನ್ನೆಲೆ ಅರೆಸ್ಟ್ ಮಾಡಲಾಗಿತ್ತಾದರೂ ಸಂಜೆ ವೇಳೆಗೆ ಹೈಕೋರ್ಟ್ ಸೂಚನೆ ಮೇರೆಗೆ ಮುರುಘಾ ಶ್ರೀ ಬಿಡುಗಡೆ ಮಾಡಲಾಗಿತ್ತು.
ಮುರುಘಾ ಶರಣರ ಜಾಮೀನು ರದ್ದತಿ ಕೋರಿ ಸಂತ್ರಸ್ತೆಯರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದು, ಈ ವೇಳೆ ಮುಖ್ಯಸಾಕ್ಷ್ಯ ವಿಚಾರಣೆ ಪೂರ್ಣ ಆಗುವವರೆಗೆ ಮುರುಘಾಶ್ರೀ ಬಂಧನದಲ್ಲಿಡಲು ಕೋರ್ಟ್ ಆದೇಶಿಸಿತ್ತು. ಈ ಹಿನ್ನಲೆ ಮೇ 27, 2024ರಂದು ಕೋರ್ಟ್ ಎದುರು ಮುರುಘಾ ಶ್ರೀಗಳು ಶರಣಾಗಿದ್ದರು. ಈ ವೇಳೆ ಅವರಿಗೆ ಕೋರ್ಟ್ ನ್ಯಾಯಾಂಗ ಬಂಧನ ವಿಧಿಸಿತ್ತು. ಸಂತ್ರಸ್ತೆಯರಿಬ್ಬರು ಸೇರಿ 13 ಜನರ ಸಾಕ್ಷ್ಯ ವಿಚಾರಣೆ ಅಂತ್ಯ ಹಿನ್ನೆಲೆ ಅಕ್ಟೋಬರ್07, 2024ರಂದು ಮುರುಘಾಶ್ರೀ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.
Previous Articleನಕಲಿ ನಂದಿನಿ ತುಪ್ಪದ ಕಾರ್ಖಾನೆ ಪತ್ತೆ.
Next Article ಕುತೂಹಲ ಮೂಡಿಸಿದ ಡಿಸಿಎಂ ಕಾರ್ಯತಂತ್ರ

