ಬೆಂಗಳೂರು,ಜ.2-
ನಮ್ಮ ಮೆಟ್ರೋ ಬೆಂಗಳೂರು ನಗರದ ಸಂಚಾರದಟ್ಟಣೆಯನ್ನು ಕಡಿಮೆ ಮಾಡುವಲ್ಲಿ ಮಹತ್ವದ ಕೊಡುಗೆ ನೀಡಿದೆ. ಅಡೆ ತಡೆ ಇಲ್ಲದ ಕ್ಷಿಪ್ರ ಸಂಚಾರಕ್ಕಾಗಿ ಅನೇಕ ಮಂದಿ ಮೆಟ್ರೋ ರೈಲುಗಳನ್ನು ಅವಲಂಬಿಸಿದ್ದಾರೆ
ಈ ರೈಲು ಪ್ರಯಾಣದ ವೇಳೆ ಕೆಲವು ಕಿಡಿಗೇಡಿಗಳು ಅಸಭ್ಯ ವರ್ತನೆ ತೋರುವ ಸಹ ಪ್ರಯಾಣಿಕರಿಗೆ ಕಿರಿಕಿರಿ ಉಂಟು ಮಾಡುವ ಹಲವು ಘಟನೆಗಳು ನಡೆಯುತ್ತಿತ್ತು ಇದರ ವಿರುದ್ಧ ನಮ್ಮ ಮೆಟ್ರೋ ಕಠಿಣ ಕ್ರಮ ಜರುಗಿಸುತ್ತಿದೆ ಆದರೂ ಕೂಡ ಇಂತಹ ಘಟನೆಗಳು ನಡೆಯುತ್ತಿವೆ. ಈ ಕಿರಿಕಿರಿಯ ಸರಣಿಗೆ ಇದೀಗ ಮತ್ತೊಂದು ವಿದ್ಯಮಾನ ಸೇರ್ಪಡೆಯಾಗಿದೆ.
ಮೆಟ್ರೋ ರೈಲಿನಲ್ಲಿ ಸಂಚರಿಸುವ ಯುವತಿಯರನ್ನು ಗಮನಿಸುತ್ತಿದ್ದ ಕಿಡಿಗೇಡಿಯೊಬ್ಬ ಅವರಿಗೆ ಅರಿವಿಲ್ಲದಂತೆ ತನ್ನ ಮೊಬೈಲ್ ನಲ್ಲಿ ಅವರ ಖಾಸಗಿ ಅಂಗಾಂಗಗಳ ಫೋಟೋ ತೆಗೆದುಕೊಳ್ಳುತ್ತಿದ್ದ. ಈ ಬಗ್ಗೆ ಅನುಮಾನ ಬಂದ ಹಿನ್ನೆಲೆಯಲ್ಲಿ ಕಾರ್ಯಾಚರಣೆಗೆ ಇಳಿದ ಮೆಟ್ರೋದ ಭದ್ರತಾ ಸಿಬ್ಬಂದಿ ರೈಲಿನಲ್ಲಿ ಯುವತಿಯರ ಅಂಗಾಗಗಳ ವಿಡಿಯೋ ಹಾಗೂ ಫೋಟೋ ತೆಗೆಯುತ್ತಿದ್ದ ಕಾಮುಕನನ್ನು ಹಿಡಿದು ಜಯನಗರ ಪೊಲೀಸರಿಗೆ ಒಪ್ಪಿಸಿದ್ದಾರೆ.
ಪೊಲೀಸ್ ವಶಕ್ಕೆ ನೀಡಲಾದ ಆರೋಪಿ ಮಹೇಶ್ ಗೆ ಬಿಎಂಆರ್‌ಸಿಎಲ್ 5 ಸಾವಿರ ರೂ. ದಂಡ ವಿಧಿಸಿದೆ.
ಆರೋಪಿಯು ಮೆಟ್ರೋದಲ್ಲಿ ಪ್ರಯಾಣ ಮಾಡುವ ಮಹಿಳೆಯರ ಖಾಸಗಿ ಅಂಗಾಂಗಗಳ ಫೋಟೋ ಹಾಗೂ ವಿಡಿಯೋ ತೆಗೆಯುತ್ತಿದ್ದ. ಆರೋಪಿಯ ಮೊಬೈಲ್‍ನಲ್ಲಿ ಸುಮಾರು 50 ಯುವತಿಯರ ವಿಡಿಯೋ ಮತ್ತು ಫೋಟೋಗಳು ಪತ್ತೆಯಾಗಿವೆ.
ಕಳೆದ ಡಿ.25 ರಂದು ಬೆಳಿಗ್ಗೆ 9 ಗಂಟೆಗೆ ಯುವತಿಯೊಬ್ಬಳು ಮೆಜೆಸ್ಟಿಕ್‍ನಿಂದ ಜೆಪಿ ನಗರ ಮೆಟ್ರೋ ಸ್ಟೇಷನ್‍ಗೆ ಹೋಗ್ತಿದ್ದಳು. ಈ ವೇಳೆ ಯುವಕ, ಯುವತಿಯ ಖಾಸಗಿ ಅಂಗಾಂಗಗಳ ವಿಡಿಯೋ ತೆಗೆಯುತ್ತಿದ್ದನ್ನು ಗಮನಿಸಿ ಆತನಿಗೆ ಹೊಡೆದಿದ್ದಾಳೆ.
ಈ ವೇಳೆ ರಾತ್ರಿ ಪಾಳಿ ಮುಗಿಸಿ ಮನೆಗೆ ಹೋಗ್ತಿದ್ದ ಇಬ್ಬರು ಸೆಕ್ಯೂರಿಟಿಗಳು ಯುವತಿಯ ಸಹಾಯಕ್ಕೆ ಧಾವಿಸಿದ್ದಾರೆ. ಈ ವೇಳೆ ಮಹೇಶ್‍ನ ಕೃತ್ಯ ಬೆಳಕಿಗೆ ಬಂದಿದೆ.
ಜಯನಗರ ಮೆಟ್ರೋ ನಿಲ್ದಾಣದಲ್ಲಿ ಆತನನ್ನು ರೈಲಿನಿಂದ ಕೆಳಗಿಳಿಸಿ, ಮೊಬೈಲ್ ಪರಿಶೀಲನೆ ನಡೆಸಿದಾಗ ವಿಡಿಯೋ ಹಾಗೂ ಫೋಟೋಗಳು ಪತ್ತೆಯಾಗಿವೆ. ಆತನನ್ನು ಜಯನಗರ ಪೊಲೀಸ ವಶಕ್ಕೆ ನೀಡಲಾಗಿದೆ.
ಕರ್ತವ್ಯದಲ್ಲಿ ಇಲ್ಲದಿದ್ದರೂ ಯುವತಿಯ ಸಹಾಯಕ್ಕೆ ಧಾವಿಸಿದ ಮೆಟ್ರೋ ಸೆಕ್ಯುರಿಟಿ ಗಾರ್ಡ್ ಸುಜೀತ್ ಹಾಗೂ ಎಸ್.ಜಿ ರಾಮ್ ಬಹದ್ದೂರ್ ಅವರನ್ನು ಬಿಎಂಆರ್ ಸಿಎಲ್ ನ ಹಿರಿಯ ಅಧಿಕಾರಿಗಳು ಅಭಿನಂದಿಸಿದ್ದಾರೆ.
Previous Articleಕೇಂದ್ರದ ಜೊತೆ ಮತ್ತೊಂದು ಸಂಘರ್ಷಕ್ಕೆ ಸಜ್ಜಾದ ರಾಜ್ಯ
Next Article ಲಾಭಾಂಶ ಅರ್ಪಿಸಿದ ಕ್ರೆಡೆಲ್

