ಬೆಂಗಳೂರು,ಡಿ.16-ಬೈಕ್ ನಲ್ಲಿ ಬಂದು ಯುವಕನ ಮೊಬೈಲ್ ಕಸಿದು ಪರಾರಿಯಾಗುತ್ತಿದ್ದ ಇಬ್ಬರು ಖದೀಮರನ್ನು ಮಾಜಿ ಕಾರ್ಪೊರೇಟರ್ ಕಾರಿನಲ್ಲಿ ಬೆನ್ನಟ್ಟಿ ಮೊಬೈಲ್ ಹಿಂಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಕೆ. ಜಿ. ಹಳ್ಳಿ ಬಳಿ ಮಾಜಿ ಕಾರ್ಪೊರೇಟರ್ ಗಣೇಶ್ ರೆಡ್ಡಿ ಅವರು ನಿನ್ನೆ ಬೆಳಿಗ್ಗೆ ಜಿಮ್ಗೆ ಹೋಗುವಾಗ ದ್ಚಿಚಕ್ರ ವಾಹನದಲ್ಲಿ ಬಂದ ಇಬ್ಬರು ಖದೀಮರು ಯುವಕನೋರ್ವನಿಂದ ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದರು. ಯುವಕ ಕಳ್ಳ-ಕಳ್ಳ ಎಂದು ಕೂಗಿದಾಗ ಇದನ್ನ ಗಮನಿಸಿದ ಗಣೇಶ್, ಕೂಡಲೇ ತಮ್ಮ ಕಾರಿನಲ್ಲಿ ಯುವಕನನ್ನು ಕೂರಿಸಿಕೊಂಡು ಖದೀಮರನ್ನು ಬೆನ್ನಟ್ಟಿದ್ದಾರೆ. ಸುಮಾರು ಅರ್ಧ ಕಿ.ಮೀ ವರೆಗೂ ಬೆನ್ನಟ್ಟಿದ್ದಾರೆ. ತಪ್ಪಿಸಿಕೊಳ್ಳುವ ಭರದಲ್ಲಿ ಖದೀಮರು ದ್ಚಿಚಕ್ರವಾಹನದಿಂದ ಕೆಳಗೆ ಬಿದ್ದಿದ್ದಾರೆ.
ಕಾರಿನಿಂದ ಕೆಳಗಿಳಿದ ಗಣೇಶ್, ಮೊಬೈಲ್ ನೀಡದಿದ್ದರೆ ಪೊಲೀಸ್ ಠಾಣೆಗೆ ಅವರ ದ್ವಿಚಕ್ರ ವಾಹನವನ್ನು ಒಪ್ಪಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ನಂತರ ಖದೀಮರು ಕದ್ದ ಮೊಬೈಲ್ ನೀಡಿ ದ್ಚಿಚಕ್ರವಾಹನ ಪಡೆದು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಘಟನೆ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.