ಹುಬ್ಬಳ್ಳಿ: ಮಾನವೀಯ ನೆಲಗಟ್ಟಿನಲ್ಲಿ ನಿಂತು ನೋಡಿದಾಗ ಹುಬ್ಬಳ್ಳಿಯ ಘಟನೆ ನಿಜಕ್ಕೂ ಕೂಡ ಖಂಡಿಸಲೇಬೇಕು. ತಪ್ಪು ಯಾರದ್ದೆ ಆಗಿರಲಿ ಶಿಕ್ಷೆ ಆಗಲೇಬೇಕು. ಆದ್ರೆ ಏನಾಗಿದೆಯೋ ಗೊತ್ತಿಲ್ಲ ಹುಬ್ಬಳ್ಳಿಗೆ. ಈ ಹಿಂದೆ ಇದ್ಗಾ ವಿವಾದದ ನಂತರ ಬಹುಕಾಲದಿಂದ ಇಲ್ಲಿ ಎಲ್ಲರೂ ಸೌಹಾರ್ಧತೆಯಿಂದಲೇ ಬಾಳುತ್ತಿದ್ದರು. ಆದರೆ ಅದ್ಯಾವನೋ ಗ್ರಾಫಿಕ್ಸ್ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಕ್ಕೆ ಈಗ ಇಡೀ ಹೂಬಳ್ಳಿಯಂತಿದ್ದ ಹುಬ್ಬಳ್ಳಿಯಲ್ಲಿ ದ್ವೇಷದ ಹೊಗೆಯಾಡುವಂತಾಗಿದೆ. ಅಷ್ಟಕ್ಕೂ ಅವಹೇಳನ ನಾಡಿದ ಆರೋಪಿಯನ್ನು ಬಂಧಿಸಿದ ಮೇಲೆ ಇಷ್ಟೊಂದು ಗಲಾಟೆಯ ಅವಶ್ಯಕತೆ ಇತ್ತಾ? ಎನ್ನುವುದು ಪ್ರಶ್ನೆಯಾಗಿದೆ. ಈ ಘಟನೆಯ ಒಳಹೂರಣ ನೋಡಿದಾಗ ಹತ್ತು ಹಲವು ಸಂಶಯಗಳ ಹುತ್ತವೇ ಬೆಳೆದು ನಿಲ್ಲುತ್ತೆ. ಈದ್ಗಾ ವಿವಾದ ನಡೆದಾಗ ಮುಸ್ಲೀಂರಿಗೊಂದು ನಾಯಕತ್ವ ಇತ್ತು. ಆದ್ರೆ ಇಂದು ಜಬ್ಬಾರ್ ಹೊನ್ನಳ್ಳಿ ಅವರ ನಂತರದ ದಿನಗಳಲ್ಲಿ ಸಮಾಜದ ಮೇಲೆ ಪ್ರಭಾವ ಬೀರುವಂತಹ ನಾಯಕರ ಕೊರತೆ ಇದೆ. ಇದು ಕೂಡ ಯುವಕರು ದಾರಿ ತಪ್ಪುವಂತೆ ಆಗಲು ಒಂದು ಕಾರಣ.
ಎಲ್ಲದಕ್ಕಿಂತ ಮುಖ್ಯವಾಗಿ ಸರ್ಕಾರದ ವೈಫಲ್ಯತೆಯನ್ನು ಕೂಡ ಇಲ್ಲಿ ಹೇಳಲೇಬೇಕಿದೆ. ಒಂದು ಪೋಸ್ಟ್ ಹಾಕಿದ ಕೂಡಲೇ ಅಷ್ಟೊಂದು ಜನ ಏಕಾಏಕಿ ನುಗ್ಗಿ ದಾಂದಲೆ ಮಾಡಲು ಸಾಧ್ಯವೆ.? ಅಥವ ಪೋಸ್ಟ್ ಹಾಕಿದವನು ನಾನು ಪೋಸ್ಟ್ ಹಾಕ್ತಿನಿ, ನೀವು ತಯಾರಾಗಿರಿ ಅಂತ ಹೇಳಲು ಸಾದ್ಯವೆ. ಹಾಗಾದ್ರೆ ಪೋಸ್ಟ್ ಹಾಕಿದ ಮೇಲೆ ಯುವಕರೆಲ್ಲ ಸೇರಿ ಗುಂಪು ಕೂಡಿ ಠಾಣೆಗೆ ಬರಲು ಸ್ವಲ್ಪ ಸಮಯ ಬೇಕಾಗುತ್ತದೆ ಅಲ್ಲವೆ? ಹೀಗಿದ್ದಾಗ ಗುಪ್ತಚರ ಇಲಾಖೆಗೆ ಇದು ಗೊತ್ತಾಗಲಿಲ್ಲವೇ? ಇದರಲ್ಲಿ ಗುಪ್ತಚರ ಇಲಾಖೆಯ ವಿಫಲತೆಯೂ ಎದ್ದು ಕಾಣುತ್ತಿದೆ ಎಂದು ಕೆಲವರು ವಿಶ್ಲೇಷಿಸುತ್ತಿದ್ದಾರೆ.
ಇನ್ನು ಈ ಪ್ರಕರಣವನ್ನು ಮತ್ತೊಂದು ಆ್ಯಂಗಲ್ ನಲ್ಲಿ ನೋಡುವುದಾದ್ರೆ, ಈಗಾಗಲೇ ರಾಜ್ಯದಲ್ಲಿ ಹಿಜಾಬ್, ಆಜಾನ್, Business ಬಹಿಷ್ಕಾರ, ಬೆಲೆ ಏರಿಕೆ, ಸಂತೋಷ ಸಾವು…! ಹೀಗೆ ಒಂದಾ? ಎರಡಾ? ಸಾಲು ಸಾಲು ನ್ಯೂನ್ಯತೆಗಳು ಸರ್ಕಾರದ ವರ್ಚಸ್ಸಿಗೆ ಧಕ್ಕೆ ತಂದಿದ್ದಂತೂ ಸತ್ಯ. ಹೀಗಿರುವಾಗ ಕಾದು ಕುಳಿತ ಬಿಜೆಪಿ ಹಾಗು ಸಂಘ ಪರಿಹಾರಕ್ಕೆ ಇದಿಷ್ಟು ಸಾಕಾಗಿತ್ತು. ಮುಸ್ಲೀಂ ಯುವಕರು ಪ್ರಚೋದನೆಗೆ ಇದು ಕೂಡ ಕಾರಣ ಇರುಬಹುದು ಎನ್ನುವ ಸಂಶಯ ವ್ಯಕ್ತವಾಗಿದೆ. ಇದು ಏನೇ ಇರಲಿ ಮುಸ್ಲೀಂ ಯುವಕರು ಸಂಯಮ ಮೀರಿ ನಡೆದುಕೊಂಡಿದ್ದಂತೂ ಅಕ್ಷಮ್ಯ ಅಪರಾಧ. ಇಂದು ರಾಜ್ಯವನ್ನು ಧರ್ಮದ ಹೆಸರಲ್ಲಿ ಹುರಿದು ಮುಕ್ಕುವ ಕೆಲಸ ನಡೆದಿದೆ. ಇಂತಹ ಸಂದರ್ಭದಲ್ಲಿ ಮುಸ್ಲೀಂ ಯುವಕರ ಪುಂಡಾಟಿಕೆಯೂ ಕೂಡ ಹದ್ದು ಮೀರಿರುವಂತಹದ್ದು. ಸಮ ಹಾಗೂ ಸೌಹಾರ್ಧ ಸಮಾಜ ಕೆಡವುದಕ್ಕಾಗಿಯೇ ಕೆಲವು ಶಕ್ತಿಗಳು ಸನ್ನದ್ಧವಾಗಿರುವಾಗ ಕಟ್ಟುವ ಕೆಲದಕ್ಕೆ ಪ್ರಯತ್ನಿಸಬೇಕಾದ ಅನಿವಾರ್ಯತೆ ಇದೆ. ಇನ್ನು ಹುಬ್ಬಳ್ಳಿಯ ಘಟನೆಯಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಗೆ ಯಾವುದೇ ಅಭ್ಯಂತರವಿಲ್ಲ. ಆದರೆ ಅಮಾಯಕರಿಗೆ ಮಾತ್ರ ಶಿಕ್ಷೆಯಾಗದಿರಲಿ ಎನ್ನುವುದು ನಮ್ಮ ಕಳಕಳಿ.