ಬೆಂಗಳೂರು,ಆ.27-
ರಾಜ್ಯದ ರಾಜ್ಯಪಾಲ ತಾವರ ಚೆಂದ್ ಗೆಹ್ಲೋಟ್ ವಿರುದ್ಧ ರಾಜ್ಯ ಕಾಂಗ್ರೆಸ್ ಸಮರ ಘೋಷಿಸಿದೆ. ಕೇಂದ್ರ ಸಚಿವ ಕುಮಾರಸ್ವಾಮಿ ಮಾಜಿ ಸಚಿವರಾದ ಶಶಿಕಲಾ ಜೊಲ್ಲೆ ಮುರುಗೇಶ್ ನಿರಾಣಿ ಮತ್ತು ಜನಾರ್ಧನ ರೆಡ್ಡಿ ವಿರುದ್ಧ ತನಿಖೆಗೆ ಅನುಮತಿ ನೀಡುವಂತೆ ಆಗ್ರಹಿಸಿ ರಾಜಭವನ ಚಲೋ ನಡೆಸಲು ತೀರ್ಮಾನಿಸಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಉಪ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದ ವೇಳೆ ಸಾಯಿ ವೆಂಕಟೇಶ್ವರ ಮಿನರಲ್ಸ್ ಗೆ ಗಣಿ ಗುತ್ತಿಗೆ ನೀಡುವಲ್ಲಿ ನಡೆದ ಅಕ್ರಮದ ಬಗ್ಗೆ ತನಿಖೆ ಪೂರ್ಣಗೊಳಿಸಿರುವ ಲೋಕಾಯುಕ್ತ ಪ್ರಾಸಿಕ್ಯೂಷನ್ ಗೆ ಅನುಮತಿ ಕೋರಿ ರಾಜ್ಯಪಾಲರಿಗೆ ಮನವಿ ಸಲ್ಲಿಸಿ ವರ್ಷಗಳ ಕಳೆದರೂ ಇಲ್ಲಿಯವರೆಗೆ ಕ್ರಮ ಕೈಗೊಂಡಿಲ್ಲ ಎಂದು ಆಪಾಸಿದರು.
ಇದಲ್ಲದೆ ಮಾಜಿ ಸಚಿವೆ ಶಶಿಕಲಾ ಜೊಲ್ಲೆ, ಮುರುಗೇಶ್ ನಿರಾಣಿ ಮತ್ತು ಜನಾರ್ಧನ ರೆಡ್ಡಿ ವಿರುದ್ಧ ತನಿಖೆ ನಡೆಸಲು ಅನುಮತಿ ಕೋರಿರುವ ಪತ್ರಗಳು ರಾಜಭವನದಲ್ಲಿ ಇವೆ ಹೀಗಾಗಿ ಇವುಗಳ ಬಗ್ಗೆ ಶೀಘ್ರ ಕ್ರಮ ಕೈಗೊಳ್ಳುವಂತೆ ರಾಜ್ಯ ಸಚಿವ ಸಂಪುಟ ರಾಜ್ಯಪಾಲರಿಗೆ ಸಲಹೆ ಮಾಡಿದೆ ಆದರೂ ಇಲ್ಲಿಯವರೆಗೆ ಅವರು ಯಾವುದೇ ಕ್ರಮ ಕೈಗೊಂಡಿಲ್ಲ ಈ ಹಿನ್ನೆಲೆಯಲ್ಲಿ ಆಗಸ್ಟ್ 31 ರಂದು ರಾಜಭವನ ಚಲೋ ನಡೆಸಲಾಗುವುದು ಎಂದು ಪ್ರಕಟಿಸಿದರು.
ಆಗಸ್ಟ್ 31 ರಂದು ವಿಧಾನಸೌಧದ ಆವರಣದಲ್ಲಿರುವ ಗಾಂಧಿ ಪ್ರತಿಮೆ ಮುಂದೆ ಸಮಾವೇಶಗೊಳ್ಳಲಿರುವ ರಾಜ್ಯದ ಎಲ್ಲಾ ಸಚಿವರು ಕಾಂಗ್ರೆಸ್ ಶಾಸಕರು ಸಂಸದರು ಮತ್ತು ಹಿರಿಯ ನಾಯಕರು ಅಲ್ಲಿಂದ ರಾಜಭವನದವರೆಗೆ ಮೆರವಣಿಗೆಯಲ್ಲಿ ತೆರಳಲಿದ್ದಾರೆ ಎಂದು ತಿಳಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಪ್ರಕರಣದಲ್ಲಿ ತೋರಿದ ಆತುರವನ್ನು ರಾಜ್ಯಪಾಲರು ಈ ನಾಲ್ಕು ಪ್ರಕರಣಗಳಲ್ಲಿ ತೋರುತ್ತಿಲ್ಲ ತನಿಖಾ ಸಂಸ್ಥೆಯ ಮುಖ್ಯಸ್ಥರು ಅನುಮತಿ ಕೋರಿ ಸಲ್ಲಿಸಿರುವ ಮನವಿಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಇದು ರಾಜ್ಯಪಾಲರ ಪಕ್ಷಪಾತಿ ಧೋರಣೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಆಪಾದಿಸಿದರು.
ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದ ವೇಳೆ ಗಣಿ ಗುತ್ತಿಗೆ ನೀಡುವ ಪ್ರಕರಣದಲ್ಲಿ ನಿಯಮ ಉಲ್ಲಂಘಿಸಿದ್ದಾರೆ ಅಕ್ರಮ ನಡೆದಿದೆ ಎಂದು ನ್ಯಾಯಮೂರ್ತಿ ಸಂತೋಷ ಹೆಗಡೆ ನೇತೃತ್ವದ ಲೋಕಾಯುಕ್ತ ವರದಿ ನೀಡಿದೆ ಆದರೆ ಆಧಾರದಲ್ಲಿ ಯಡಿಯೂರಪ್ಪ ನೇತೃತ್ವದ ಸರ್ಕಾರದ ಅವಧಿಯಲ್ಲಿ ಆರೋಪ ಪಟ್ಟಿ ಕೂಡ ಸಲ್ಲಿಕೆಯಾಗಿದೆ. ಆದರೂ ಕೂಡ ರಾಜ್ಯಪಾಲರು ಈ ಪ್ರಕರಣದಲ್ಲಿ ತನಿಖೆಗೆ ಅನುಮತಿ ನೀಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕುಮಾರಸ್ವಾಮಿ ಅವರು ಈ ಪ್ರಕರಣದಲ್ಲಿ ತಾವು ಸಹಿ ಮಾಡಿಲ್ಲ ಕಡತದಲ್ಲಿ ಇರುವುದು ತಮ್ಮ ನಕಲಿ ಸಹಿ ಎಂದು ಈಗ ಹೇಳುತ್ತಿದ್ದಾರೆ ಇದೊಂದು ಅಪರಾಧವಾಗಿದೆ ಮುಖ್ಯಮಂತ್ರಿಯ ಸಹಿಯನ್ನು ನಕಲಿ ಮಾಡುವುದು ಸುಲಭದ ವಿಷಯವಲ್ಲ ತಕ್ಷಣವೇ ಇವರು ಈ ಬಗ್ಗೆ ಪೊಲೀಸರಿಗೆ ದೂರು ಸಲ್ಲಿಸಬೇಕು ಎಂದು ಸಲಹೆ ಮಾಡಿದರು.
ಈ ವೇಳೆ ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ ಸಿ ಚಂದ್ರಶೇಖರ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸೌಮ್ಯ ರೆಡ್ಡಿ ಕೆಪಿಸಿಸಿ ಅಧ್ಯಕ್ಷರ ರಾಜಕೀಯ ಕಾರ್ಯದರ್ಶಿ ದೀಪಕ್ ತಿಮ್ಮಯ ಉಪಸ್ಥಿತರಿದ್ದರು
Previous Articleಗೃಹಲಕ್ಷ್ಮಿಯರಿಗೆ ಸಿಹಿ ಸುದ್ದಿ.
Next Article ಕೆ.ಜೆ.ಜಾರ್ಜ್ ಅವರಿಗೆ ಬಿಗ್ ರಿಲೀಫ್