ಬೆಂಗಳೂರು:
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಸಣಾಪುರದ ಬಳಿ ಇಸ್ರೇಲ್ ದೇಶದ ಒಬ್ಬರು, ಸ್ಥಳೀಯ ಒಬ್ಬರು ಸೇರಿ ಇಬ್ಬರು ಮಹಿಳೆ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣ ರಾಜ್ಯದಲ್ಲಿ ತೀವ್ರ ಸಂಚಲನ ಸೃಷ್ಟಿಸಿರುವ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ ರಾಜ್ಯದ ಪ್ರವಾಸಿ ತಾಣಗಳಲ್ಲಿ ಪೊಲೀಸ್ ಭದ್ರತೆಯನ್ನು ಬಿಗಿಗೊಳಿಸಿದೆ.
ಅನಧಿಕೃತ ಹೋಂ ಸ್ಟೇಗಳಿದ್ದರೆ ಅವುಗಳನ್ನು ಪರಿಶೀಲಿಸಿ ಕಾನೂನು ಕ್ರಮ ಕೈಗೊಂಡು ಪ್ರವಾಸಿ ಸ್ಥಳಗಳ ಭದ್ರತೆಯನ್ನು ಬಿಗಿಗೊಳಿಸುವಂತೆ ಎಲ್ಲಾ ಜಿಲ್ಲೆಗಳ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚಿಸಲಾಗಿದೆ.
ಈ ಕುರಿತಂತೆ ಮಾರ್ಗಸೂಚಿಗಳನ್ನು ಹೊರಡಿಸಿರುವ ರಾಜ್ಯ ಸರ್ಕಾರ, ಖಾಸಗಿ ರೆಸಾರ್ಟ್ ಮತ್ತು ಹೋಂ ಸ್ಟೇ ಗಳಿಗೆ ಭದ್ರತೆ ಕುರಿತು ನಿಯಮಗಳನ್ನು ಪಾಲಿಸುವುದು ಕಡ್ಡಾಯ ಎಂದು ಹೇಳಿದೆ.
ರಾಜ್ಯ ಸರ್ಕಾರ ಪ್ರವಾಸೋದ್ಯಮಕ್ಕೆ ಹೆಚ್ಚಿನ ಉತ್ತೇಜನ ನೀಡುತ್ತಿದೆ. ಆದರೆ ಪ್ರವಾಸಿ ತಾಣಗಳಲ್ಲಿ ಕೊಪ್ಪಳದಲ್ಲಿ ನಡೆದಂತಹ ಹೀನ ಕೃತ್ಯ ನಡೆಯಬಾರದಿತ್ತು.ಮುಂದೆ ಇಂತಹ ಘಟನೆಗಳು ನಡೆಯದಂತೆ ಭದ್ರತೆಯನ್ನು ಬಿಗಿಗೊಳಿಸಿ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳುವುದು ಅಗತ್ಯ ಎಂದು ಹೇಳಿದೆ.
ಪ್ರವಾಸಿ ತಾಣಗಳಿರುವ ಕಡೆ ಸಹಜವಾಗಿ ಹೆಚ್ಚಿನ ಸಂಖ್ಯೆಯಲ್ಲಿ ದೇಶ ಹಾಗೂ ವಿದೇಶಿಗಳಿಂದ ಪ್ರವಾಸಿಗಳು ಬರುತ್ತಾರೆ. ಅವರ ಸುರಕ್ಷತೆಗೆ ಪೊಲೀಸ್ ನಿಯೋಜನೆ ಮಾಡಬೇಕು.ರೆಸಾರ್ಟ್ ಮತ್ತು ಹೋಂ ಸ್ಟೇ ಮಾಲೀಕರು ತಮ್ಮ ಅತಿಥಿಗೃಹದಲ್ಲಿ ತಂಗುವ ಅತಿಥಿಗಳ ಸುರಕ್ಷತೆಗಾಗಿ ಎಲ್ಲಾ ರೀತಿಯ ಕ್ರಮ ಕೈಗೊಳ್ಳಬೇಕು.ಇವರು ಹೊರಗೆ ಹೋಗುವಾಗ ಭದ್ರತೆ ನೀಡಬೇಕು. ಅಗತ್ಯವೆನಿಸಿದರೆ ಸ್ಥಳೀಯ ಪೊಲೀಸರ ನೆರವು ಪಡೆಯಲು ಸೂಚನೆ ನೀಡಲಾಗಿದೆ.