ಬೆಂಗಳೂರು,ಆ.13:
ಆಡಳಿತರೂಢ ಸರ್ಕಾರದ ವಿರುದ್ಧ ಹೋರಾಟ ನಡೆಸಬೇಕಾಗಿರುವ ಬಿಜೆಪಿಯಲ್ಲಿ ಇದೀಗ ಭಿನ್ನಮತ ತೀವ್ರ ಸ್ವರೂಪ ಪಡೆದುಕೊಂಡಿದ್ದು ಪಕ್ಷದ ಅಧ್ಯಕ್ಷ ವಿಜಯೇಂದ್ರ ಅವರ ಬದಲಾವಣೆಗೆ ಬಲವಾದ ಆಗ್ರಹ ಕೇಳಿ ಬಂದಿದೆ.
ವಿಜಯೇಂದ್ರ ಕಾರ್ಯಾ ವೈಖರಿ ಬಗ್ಗೆ ಹಲವಾರು ಮಂದಿ ಹಿರಿಯ ನಾಯಕರು ತೀವ್ರ ಅಸಮಾಧಾನ ಹೊಂದಿದ ಬೆನ್ನಲ್ಲೇ ಅವರಿಗೆ ಬೆಂಬಲ ಘೋಷಿಸಿರುವ ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ ಎಲ್ ಸಂತೋಷ್ ಅವರು ಇದೀಗ ವಿಜಯೇಂದ್ರ ಬದಲಾವಣೆ ಆಗ್ರಹದ ಹಿಂದೆ ನಿಂತಿದ್ದಾರೆ.
ಪಕ್ಷದ ರಾಜ್ಯ ಅಧ್ಯಕ್ಷರಾಗಿ ವಿಜಯೇಂದ್ರ ನೇಮಕಗೊಂಡ ನಂತರ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂದುವರೆಯುವ ಭರವಸೆ ನೀಡಿದ್ದರು. ಆದರೆ ನಂತರದಲ್ಲಿ ತಮ್ಮ ಕಾರ್ಯವೈಖರಿಯನ್ನು ಸಂಪೂರ್ಣವಾಗಿ ಬದಲಾಯಿಸಿಕೊಂಡರು ಯಾವುದೇ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ತೀರ್ಮಾನ ಎಲ್ಲವನ್ನೂ ಏಕ ಪಕ್ಷಿಯವಾಗಿ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ ಎಂದು ಒಂದು ಗುಂಪು ಆಪಾದಿಸಿದರೇ, ಮತ್ತೊಂದು ಗುಂಪು ಇವರ ವಿರುದ್ಧ ಹೊಂದಾಣಿಕೆ ರಾಜಕಾರಣದ ಆರೋಪ ಮಾಡುತ್ತಿದೆ.
ಇದೀಗ ಈ ಎಲ್ಲರೂ ಒಟ್ಟಾಗಿ ವಿಜಯೇಂದ್ರ ಬದಲಾವಣೆಗಾಗಿ ಹೈಕಮಾಂಡ್ ಮೇಲೆ ಒತ್ತಡ ಏರಲು ತೀರ್ಮಾನಿಸಿರುವುದಾಗಿ ಉನ್ನತ ಮೂಲಗಳು ತಿಳಿಸಿವೆ.
ಆರಂಭದಿಂದಲೂ ವಿಜಯೇಂದ್ರ ಸೇರಿದಂತೆ ಯಡಿಯೂರಪ್ಪ ಅವರ ಕುಟುಂಬದ ಸದಸ್ಯರಿಗೆ ಪಕ್ಷದ ಉನ್ನತ ಹುದ್ದೆ ನೀಡಲು ಬಲವಾಗಿ ವಿರೋಧಿಸುತ್ತಿದ್ದ ಸಂತೋಷ್ ಅವರು ಇದೀಗ ಹಲವಾರು ವಿಷಯಗಳಲ್ಲಿ ವಿಜಯೇಂದ್ರ ವಿಫಲವಾಗಿರುವುದನ್ನು ಮುಂದಿಟ್ಟುಕೊಂಡು ತಮ್ಮ ಆಪ್ತವಲಯದ ಮೂಲಕ ಇವರ ಬದಲಾವಣೆಗೆ ವೇದಿಕೆ ಸಿದ್ಧಪಡಿಸುತ್ತಿದ್ದಾರೆ.
ಮಾಜಿ ಸಂಸದರಾದ ಅಣ್ಣ ಸಾಹೇಬ್ ಜೊಲ್ಲೆ, ನಳಿನ್ ಕುಮಾರ್ ಕಟೀಲ್, ಪ್ರತಾಪ ಸಿಂಹ, ಜಿಎಂ ಸಿದ್ದೇಶ್ವರ, ನಾರಾಯಣಸ್ವಾಮಿ, ಮಾಜಿ ಸಚಿವರಾದ ಅರವಿಂದ ಲಿಂಬಾವಳಿ, ಕುಮಾರ್ ಬಂಗಾರಪ್ಪ ಮೊದಲಾದವರ ಜೊತೆಗೆ ನಿರಂತರ ಸಂಪರ್ಕದಲ್ಲಿರುವ ಸಂತೋಷ್ ಅವರು ವಿಜಯೇಂದ್ರ ಹಠಾವೋ ಹೋರಾಟದ ಸೂತ್ರದಾರರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಕಳೆದ ಭಾನುವಾರ ಬೆಳಗಾವಿಯಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿ ಸಭೆ ಸೇರಿದ ಅತೃಪ್ತ ನಾಯಕರು ಇದೀಗ ಬೆಂಗಳೂರಿನಲ್ಲಿ ಮತ್ತೊಂದು ಸುತ್ತಿನ ಮಾತುಕತೆ ನಡೆಸಲಿದ್ದಾರೆ ಈ ಗುಂಪಿನಲ್ಲಿ ಗುರುತುಸಿಕೊಂಡಿರುವ ಪ್ರಮುಖ ನಾಯಕರು ಮುಂದಿನ ವಾರ ದೆಹಲಿಗೆ ತೆರಳಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಪಕ್ಷದ ಅಧ್ಯಕ್ಷ ಬಿಜೆಪಿ ನಡ್ಡಾ ಅವರನ್ನು ಭೇಟಿ ಮಾಡಲು ತೀರ್ಮಾನಿಸುತ್ತಾರೆ ಇದಕ್ಕಾಗಿ ಸಮಯ ಅವಕಾಶ ನೀಡುವಂತೆ ಕೋರಿ ಮನವಿ ಸಲ್ಲಿಸಿರುವುದಾಗಿ ಗೊತ್ತಾಗಿದೆ.
Previous Articleಗ್ರಂಥಾಲಯ ಮೇಲ್ವಿಚಾರಕರಿಗೆ ಸಿಹಿ ಸುದ್ದಿ.
Next Article ಸದ್ಯದಲ್ಲೆ ನಡೆಯುತ್ತೆ ಜಿಲ್ಲಾ ಪಂಚಾಯತಿ ಚುನಾವಣೆ