ಬೆಂಗಳೂರು, ಫೆ.24:
ಮುಂಬರುವ ವಿಧಾನಸಭೆ ಚುನಾವಣೆ ಸಮಯದಲ್ಲಿ ನಾನು ಯಾವುದೇ ಹುದ್ದೆಯಲ್ಲಿದ್ದರೂ ಪಕ್ಷವನ್ನು ಮುನ್ನಡೆಸುವುದು ನನ್ನ ಕರ್ತವ್ಯ ಎಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಹಾಗೂ 2028ರ ವಿಧಾನಸಭೆ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸುವ ದೃಷ್ಟಿಯಿಂದ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯ ಪರಾಜಿತ ಅಭ್ಯರ್ಥಿಗಳೊಂದಿಗೆ ಸುದೀರ್ಘ ಸಭೆ ನಡೆಸಿದರು.
ಈ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಹೊಂದಿರುವ ಹುದ್ದೆಗಳು ಪಕ್ಷವನ್ನು ಮುನ್ನಡೆಸುವಂತೆ ಮಾಡುವುದಿಲ್ಲ. ನಿಮ್ಮ ನಾಯಕತ್ವ, ಬದ್ಧತೆ, ದೂರದೃಷ್ಟಿ ಪಕ್ಷ ಮುನ್ನಡೆಸಲು ಮುಖ್ಯ. ನಾನು ಏನೇ ಆಗಬಹುದು ಅದು ಮುಖ್ಯವಲ್ಲ. ಪಕ್ಷ ಕೊಟ್ಟಿರುವ ಶಕ್ತಿಯಿಂದ ನಾವು ನಾಯಕರಾಗಿದ್ದು, ಕಾಂಗ್ರೆಸಿಗನಾಗಿ ಪಕ್ಷಕ್ಕೆ ಶಕ್ತಿ ತುಂಬಿ ಮುನ್ನಡೆಸುವುದು ಮುಖ್ಯ” ಎಂದು ತಿಳಿಸಿದರು.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋತಿರುವ ಕ್ಷೇತ್ರಗಳ ಪೈಕಿ ಸುಮಾರು 60 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲುವ ಸಾಧ್ಯತೆಗಳಿವೆ ಎಂದು ನಮ್ಮ ಆಂತರಿಕ ಸಮೀಕ್ಷೆಗಳು ವರದಿ ನೀಡಿವೆ. ಈ ಹಿನ್ನೆಲೆಯಲ್ಲಿ ಪರಾಜಿತ ಅಭ್ಯರ್ಥಿಗಳ ಕಷ್ಟ ಆಲಿಸಿ, ಮುಂದಿನ 2028ರ ಚುನಾವಣೆಗೆ ಸಜ್ಜಾಗಿ ಎಂದು ಸೂಚನೆ ನೀಡಲಾಗಿದೆ” ಎಂದು ತಿಳಿಸಿದರು.
ನಾವು ಸೋತಿದ್ದ 86 ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳನ್ನು ಕರೆಸಿ ಅವರ ಕಷ್ಟ ಆಲಿಸಿ, ಮುಂದಿನ ಚುನಾವಣೆ, ಸ್ಥಳೀಯ ಸಂಸ್ಥೆಗಳ ಚುನಾವಣೆ ತಯಾರಿ ಬಗ್ಗೆ ಚರ್ಚೆ ಮಾಡಿದ್ದೇವೆ. ಪರಾಜಿತ ಅಭ್ಯರ್ಥಿಗಳು ಸುಮ್ಮನೆ ಕೂರದೆ ಕಾರ್ಯಪ್ರವೃತ್ತರಾಗಬೇಕು ಎಂದು ಮಾರ್ಗದರ್ಶನ ನೀಡಲಾಗಿದೆ. ಎಐಸಿಸಿ ಜತೆ ಚರ್ಚೆ ಮಾಡಿ ಪಕ್ಷಕ್ಕೆ ಹಿನ್ನಡೆ ಇರುವ ಉಳಿದ 20 ಕ್ಷೇತ್ರಗಳಲ್ಲಿ ಪಕ್ಷವನ್ನು ಯಾವ ರೀತಿ ಕಟ್ಟಬೇಕು ಎಂದು ಕಾರ್ಯಯೋಜನೆ ಸಿದ್ಧಪಡಿಸುತ್ತೇವೆ” ಎಂದು ತಿಳಿಸಿದರು.
ಮಾರ್ಚ್ 23ರಿಂದ ಏಪ್ರಿಲ್ 1ರವರೆಗೂ ನಾನು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಎಲ್ಲಾ ಸಚಿವರು, ಉಸ್ತುವಾರಿ ಜಿಲ್ಲೆಗಳ ಕ್ಷೇತ್ರಗಳಲ್ಲಿ ಕಾರ್ಯಕರ್ತರ ಸಭೆ ನಡೆಸಬೇಕಿದೆ. ಅದಕ್ಕೂ ಮುನ್ನವೇ ಶನಿವಾರ ಅಥವಾ ಭಾನುವಾರ ಸಮಯ ಸಿಕ್ಕರೆ ಸಭೆ ಮಾಡಲು ಜಿಲ್ಲಾ ಉಸ್ತುವಾರಿ ಸಚಿವರಿಗೆ ಅವಕಾಶ ನೀಡಲಾಗುವುದು ಎಂದು ಹೇಳಿದರು.
ನಾನು ಬೆಂಗಳೂರಿನ 28 ಕ್ಷೇತ್ರಗಳನ್ನು ದಿನಕ್ಕೆ 2-3 ಕ್ಷೇತ್ರಗಳಂತೆ ಭೇಟಿ ನೀಡಿ ಕಾರ್ಯಕರ್ತರ ಸಭೆ ಮಾಡಲು ತೀರ್ಮಾನಿಸಿದ್ದೇನೆ. ಈ ಕಾರ್ಯಕರ್ತರ ಸಭೆಯಲ್ಲಿ ಮಂಡಳಿ, ಸಂಘ, ಸಂಸ್ಥೆ, ಸಮಿತಿಗಳಲ್ಲಿ ಸರ್ಕಾರದಿಂದ ನಾಮನಿರ್ದೇಶನವಾಗಿರುವ ಕಾರ್ಯಕರ್ತರಿಗೆ ಸನ್ಮಾನ ಮಾಡಬೇಕು. ಆಮೂಲಕ ಅವರನ್ನು ಗುರುತಿಸಿ ಅವರ ಜವಾಬ್ದಾರಿ ತಿಳಿಸುವ ಕೆಲಸ ಮಾಡಲಾಗುವುದು” ಎಂದು ತಿಳಿಸಿದರು.
ಮಾರ್ಚ್ ಮೊದಲ ಅಥವಾ ಎರಡನೇ ವಾರದಲ್ಲಿ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ಅವರಿಗೆ ನೂತನ ಕಾಂಗ್ರೆಸ್ ಕಚೇರಿಗಳ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಿದ್ದೇನೆ. ಅವರು ಬೆಂಗಳೂರಿಗೆ ಆಗಮಿಸಿ ಶಂಕುಸ್ಥಾಪನೆ ಮಾಡಲಿದ್ದಾರೆ. ನೂರಕ್ಕೂ ಹೆಚ್ಚು ಕಡೆಗಳಲ್ಲಿ ವರ್ಚುವಲ್ ಮೂಲಕ ಶಂಕುಸ್ಥಾಪನೆ ಮಾಡಲಾಗುವುದು ಎಂದರು.
ನಗರಾಭಿವೃದ್ಧಿ, ಸರ್ಕಾರದಿಂದ ಮಂಜೂರಾದ ಜಾಗಗಳಲ್ಲಿ ನಿರ್ಮಾಣ ಮಾಡಲಾಗುತ್ತಿದ್ದು, ಕೆಲವು ಕಡೆ ಜಮೀನು ಖರೀದಿ ಮಾಡಲು ಸೂಚಿಸಲಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷದ ಕಚೇರಿಗಳು ಇರಬೇಕು ಎಂಬುದು ನಮ್ಮ ಗುರಿ. ಕಾಂಗ್ರೆಸ್ ಪಕ್ಷದ ಹೆಸರಿನಲ್ಲಿರುವ ಜಾಗದಲ್ಲಿ ಮಾತ್ರ ಕಾಂಗ್ರೆಸ್ ಕಚೇರಿ ಕಟ್ಟಲು ಶಂಕುಸ್ಥಾಪನೆ ಮಾಡಲಾಗುವುದು. ವೈಯಕ್ತಿಕ ಹೆಸರಿನಲ್ಲಿರುವ ಜಾಗದಲ್ಲಿ ಕಚೇರಿ ಕಟ್ಟಡಕ್ಕೆ ಶಂಕುಸ್ಥಾಪನೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು