ಬೆಂಗಳೂರು,ಸೆ.27:
ಆಡಳಿತದ ಶಕ್ತಿ ಕೇಂದ್ರ ವಿಧಾನಸೌಧ ಅಪರೂಪದ ವಿದ್ಯಮಾನವೊಂದಕ್ಕೆ ಸಾಕ್ಷಿಯಾಯಿತು. ವಿಧಾನಸೌಧ ಮತ್ತು ವಿಕಾಸಸೌಧ ಅಪವಿತ್ರಗೊಂಡಿದೆ ಎಂದು ಹೇಳಿ ಅರ್ಚಕರು ಮತ್ತು ಆಗಮಿಕರ ತಂಡ ಆಗಮಿಸಿ ಅದನ್ನು ಪವಿತ್ರ ಗೊಳಿಸುವ ಕಾರ್ಯಕ್ಕೆ ಮುಂದಾಯಿತು.
ಕಾಂಗ್ರೆಸ್ ಮುಖಂಡ ಮನೋಹರ್ ನೇತೃತ್ವದಲ್ಲಿ ಆಗಮಿಸಿದ ಆರ್ಚಕರ ತಂಡ ವಿಕಾಸಸೌಧದ ಗೇಟ್ ಬಳಿ ಪವಿತ್ರೀಕರಣದ ಪೂಜೆ ಆರಂಭಿಸಿತು. ಕೂಡಲೇ ಮಧ್ಯಪ್ರವೇಶಿಸಿದ ಪೊಲೀಸರು ಇದಕ್ಕೆ ತಡೆಯೊಡ್ಡಿದ್ದರು. ಆಡಳಿತದ ಶಕ್ತಿ ಕೇಂದ್ರದ ಗೇಟುಗಳ ಬಳಿ ಇಂತಹ ಆಚರಣೆಗೆ ಅವಕಾಶವಿಲ್ಲ ಎಂದು ಅಡ್ಡಿಪಡಿಸಿದರು.
ಪೊಲೀಸರ ಈ ಕ್ರಮಕ್ಕೆ ಕಾಂಗ್ರೆಸ್ ಮುಖಂಡ ಮನೋಹರ್ ಮತ್ತವರ ತಂಡ ತೀವ್ರ ಆಕ್ರೋಶ ವ್ಯಕ್ತಪಡಿಸಿತು. ಮಾಜಿ ಸಚಿವ ಹಾಗೂ ಬಿಜೆಪಿ ಶಾಸಕ ಮುನಿರತ್ನ ಅವರು ವಿಧಾನಸೌಧ ಮತ್ತು ವಿಕಾಸ ಸೌಧದಲ್ಲಿ ಸಂತ್ರಸ್ತೆ ಮೇಲೆ ಅತ್ಯಾಚಾರವೆಸಗಿದ್ದಾರೆ. ಇದರಿಂದ ಆಡಳಿತ ಶಕ್ತಿ ಕೇಂದ್ರದ ಪಾವಿತ್ರಕ್ಕೆ ಧಕ್ಕೆಯಾಗಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಸಂತ್ರಸ್ತೆಯನ್ನು ಇಲ್ಲಿಗೆ ಕರೆತಂದು ಘಟನೆ ನಡೆದ ಸ್ಥಳದ ಮಹಜರು ಮಾಡಿದ್ದಾರೆ ಈ ಹಿನ್ನೆಲೆಯಲ್ಲಿ ಆ ಪ್ರದೇಶದಲ್ಲಿ ಶುದ್ಧೀಕರಣ ಮಾಡುವ ಮೂಲಕ ಪವಿತ್ರೀಕರಣ ಮಾಡಲಾಗುತ್ತಿದೆ ಎಂದು ಹೇಳಿದರು.
ಆಡಳಿತ ಶಕ್ತಿ ಕೇಂದ್ರವನ್ನು ಪವಿತ್ರಗೊಳಿಸುವ ಕೆಲಸಕ್ಕೆ ಅವಕಾಶ ನೀಡದೆ ಪೊಲೀಸರು ದರ್ಪ ತೋರುತ್ತಿದ್ದಾರೆ ಎಂದು ಆಪಾದಿಸಿದರು. ಈ ವೇಳೆ ಪೊಲೀಸರು ಮನೋಹರ್ ಮತ್ತು ಅವರ ಬೆಂಬಲಿಗರನ್ನು ವಶಕ್ಕೆ ಪಡೆದು ಬಿಡುಗಡೆಗೊಳಿಸಿದರು.
Previous Articleಮಾದಾವರದವರೆಗೆ ಮೆಟ್ರೋ ಸಂಚಾರ.
Next Article ಪೊಲೀಸ್ ಅಧಿಕಾರಿ ಪತ್ರ ಸೃಷ್ಟಿಸಿದ ಸಂಚಲನ.