ಬೆಂಗಳೂರು,ಏ.7-
ಶಿಸ್ತು ಕ್ರಮ,ನಿರಂತರ ಎಚ್ಚರಿಕೆ ನೀಡುತ್ತಿದ್ದರೂ ಕೂಡಾ ರಾಜ್ಯದ ಕೆಲವು ಕಡೆಗಳಲ್ಲಿ ಶಾಲಾ ಮಕ್ಕಳಿಂದ ಶೌಚಾಲಯ ಸ್ವಚ್ಛಗೊಳಿಸುವ ಪ್ರಕರಣಗಳು ವರದಿಯಾಗುತ್ತಿವೆ.
ಇದನ್ನು ಗಂಭೀರವಾಗಿ ಪರಿಗಣಿಸಿರುವ ಶಾಲಾ ಶಿಕ್ಷಣ ಇಲಾಖೆ ಇನ್ನು ಮುಂದೆ ಎಲ್ಲಿಯಾದರೂ ಶಾಲಾ ಮಕ್ಕಳಿಂದ ಶೌಚಾಲಯ ಸ್ವಚ್ಛಗೊಳಿಸಿದರೆ ಶಿಕ್ಷಕರ ವಿರುದ್ಧ ಎಫ್‌ಐಆರ್ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದೆ.
ಶಾಲಾ ಮಕ್ಕಳು ಶೌಚಾಲಯ ಸ್ವಚ್ಛಗೊಳಿಸುವಂತಿಲ್ಲ ಎಂದು ಈ ಹಿಂದೆಯೇ ಶಿಕ್ಷಣ ಇಲಾಖೆ ಆದೇಶ ಹೊರಡಿಸಿತ್ತು. ಹೀಗಿದ್ದರೂ ರಾಜ್ಯದ ಕೆಲ ಶಾಲೆಗಳಲ್ಲಿ ಪ್ರಕರಣ ವರದಿಯಾದ ಬೆನ್ನಲ್ಲೇ ಮತ್ತೊಮ್ಮೆ ಶಿಕ್ಷಣ ಇಲಾಖೆ ಆದೇಶ ಪ್ರಕಟಿಸಿದೆ.
ಮಕ್ಕಳಿಂದ ಶೌಚಾಲಯ ಸ್ವಚ್ಛ ಮಾಡಿಸುವ ಶಿಕ್ಷಕರ ವಿರುದ್ದ ಮತ್ತು ಸಂಬಂಧಿಸಿದ ಅಧಿಕಾರಿಗಳ ವಿರುದ್ದ ಎಫ್‌ಐಆರ್ ದಾಖಲಿಸಲಾಗುವುದು ಎಂದು ಆದೇಶದಲ್ಲಿ ತಿಳಿಸಿದೆ.
ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಂದ ಶೌಚಾಲಯಗಳ ಸ್ವಚ್ಛತೆಯನ್ನು ಕಡ್ಡಾಯವಾಗಿ ಮಾಡಿಸಬಾರದೆಂದು ಸಂಬಂಧಿಸಿದ ಶಾಲಾ ಶಿಕ್ಷಣ ಇಲಾಖಾಧಿಕಾರಿಗಳು ಮತ್ತು ಸರ್ಕಾರಿ ಪ್ರಾಥಮಿಕ/ಪ್ರೌಢಶಾಲಾ ಮುಖ್ಯ ಶಿಕ್ಷಕರುಗಳಿಗೆ ಈಗಾಗಲೇ ಉಲ್ಲೇಖಿತ ಸುತ್ತೋಲೆಯ ಮೂಲಕ ತಿಳಿಸಲಾಗಿದ್ದರೂ ಸಹ ವಿದ್ಯಾರ್ಥಿಗಳಿಂದ ಶೌಚಾಲಯಗಳ ಸ್ವಚ್ಛತೆಯಲ್ಲಿ ತೊಡಗಿಸಿಕೊಳ್ಳುತ್ತಿರುವ ಬಗ್ಗೆ ಇತ್ತೀಚೆಗೆ ಕೆಲವು ಪ್ರಕರಣಗಳು ಬೆಳಕಿಗೆ ಬಂದಿರುವುದನ್ನು ಇಲಾಖೆಯು ಗಮನಿಸಿದೆ.
ಸರ್ಕಾರದಿಂದ ಮತ್ತು ಇಲಾಖೆಯಿಂದ ಕಾಲ-ಕಾಲಕ್ಕೆ ಹೊರಡಿಸಲಾಗುವ ಸೂಚನೆಗಳನ್ನು ಮತ್ತು ನಿರ್ದೇಶನಗಳನ್ನು ಚಾಚೂ ತಪ್ಪದೇ ಪಾಲಿಸುವಂತೆ ಸೂಚನೆಗಳನ್ನು ನೀಡಲಾಗುತ್ತಿದ್ದರೂ ಸಹ ಇಂತಹ ಸೂಚನೆಗಳನ್ನು ಉಲ್ಲಂಘಿಸುತ್ತಿರುವುದು ಗಂಭೀರವಾಗಿ ಪರಿಗಣಿಸಿದೆ ಎಂದು ಸುತ್ತೋಲೆಯಲ್ಲಿ ತಿಳಿಸಿದೆ.
ಈ ಹಿನ್ನೆಲೆಯಲ್ಲಿ ಮತ್ತೆ ಇಂತಹ ಘಟನೆಗಳು ಮರುಕಳಿಸಿದ್ದಲ್ಲಿ ಅಂತವರ ವಿರುದ್ಧ ಇಲಾಖಾ ವತಿಯಿಂದ ನಿಯಮಾನುಸಾರ ಕಠಿಣ ಶಿಸ್ತು ಕ್ರಮಗಳನ್ನು ಜರುಗಿಸಲಾಗುವುದು ಅಲ್ಲದೆ ಪ್ರಥಮ ವರ್ತಮಾನ ವರದಿ (ಎಫ್ ಐಆರ್ ) ದಾಖಲಿಸಲಾಗುವುದು ಮತ್ತು ಸಂಬಂಧಿಸಿದ ಶಾಲಾ ಶಿಕ್ಷಣ ಇಲಾಖಾಧಿಕಾರಿಗಳು ಮತ್ತು ಸರ್ಕಾರಿ ಪ್ರಾಥಮಿಕ/ಪ್ರೌಢ ಶಾಲಾ ಮುಖ್ಯ ಶಿಕ್ಷಕರನ್ನೇ ನೇರ ಹೊಣೆಗಾರರನ್ನಾಗಿ ಮಾಡಿ ಶಿಸ್ತು ಕ್ರಮಕ್ಕೆ ಶಿಫಾರಸ್ಸು ಮಾಡಲಾಗುವುದು. ಉಲ್ಲೇಖಿತ ಪತ್ರದಲ್ಲಿ ಶೌಚಾಲಯ ಸ್ವಚ್ಛತೆಯನ್ನು ನಿರ್ಹಿಸುವ ಕುರಿತು ತಿಳಿಸಿರುವ ಅಂಶಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಮತ್ತೊಮ್ಮೆ ಎಚ್ಚರಿಸಲಾಗಿದೆ
Previous Articleಭೋವಿ ನಿಗಮದ ದುಡ್ಡು ಸಿಕ್ಕವರಿಗೆ ಸೀರುಂಡೆ
Next Article Reels Star ಗಳಿಗೆ ಬಿಸಿ ಮುಟ್ಟಿಸಿದ ಪೊಲೀಸ್.