Bengaluru,ಫೆ.21-
ಸಬ್ ರಿಜಿಸ್ಟ್ರಾರ್ ಗಳ ವರ್ಗಾವಣೆ ವಿಚಾರ ಇದೀಗ ಭಾರಿ ವಿವಾದಕ್ಕೆ ಕಾರಣವಾಗಿದೆ. ರಿಜಿಸ್ಟಾರ್ ಗಳ ವರ್ಗಾವಣೆಯಲ್ಲಿ ಪಾರದರ್ಶಕತೆ ಮತ್ತು ಒಂದೇ ಕಡೆ ತುಂಬಾ ವರ್ಷಗಳಿಂದ ಬೇರುಬಿಟ್ಟ ಅಧಿಕಾರಿಗಳನ್ನು ಎತ್ತಂಗಡಿ ಮಾಡುವ ದೃಷ್ಟಿಯಿಂದ ಕೌನ್ಸಿಲಿಂಗ್ ಮೂಲಕ ವರ್ಗಾವಣೆ ಮಾಡುವ ನೀತಿಯನ್ನು ರಾಜ್ಯ ಸರ್ಕಾರ ರೂಪಿಸಿದೆ.
ಇದರ ಪರಿಣಾಮ ಹಲವಾರು ವರ್ಷಗಳಿಂದ ಬೆಂಗಳೂರಿನಲ್ಲಿ ಬೀಡು ಬಿಟ್ಟಿರುವ ಸಬ್ ರಿಜಿಸ್ಟ್ರಾರ್ ಗಳು ಅನಿವಾರ್ಯವಾಗಿ ನಗರದಿಂದ ಹೊರ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ ನೂತನ ಕಾನೂನು ಆಧರಿಸಿ ರಾಜ್ಯ ಸರ್ಕಾರ ವರ್ಗಾವಣೆ ಮಾಡಿದೆ.
ಈ ಆದೇಶದ ವಿರುದ್ಧ ಸಮರ ಸಾರಿರುವ ಬೆಂಗಳೂರಿನ ಸಬ್ ರಿಜಿಸ್ಟ್ರಾರ್ ಗಳು ಹೈಕೋರ್ಟ್ ಮೊರೆ ಹೋಗಿದ್ದಾರೆ. ಕೋರ್ಟ್ ಸರ್ಕಾರದ ಆದೇಶಕ್ಕೆ ತಡೆಯಾಜ್ಞೆ ನೀಡಿದೆ. ಈ ಹಿನ್ನೆಲೆಯಲ್ಲಿ ಎತ್ತಂಗಡಿಯಾಗಿದ್ದ ಅಧಿಕಾರಿಗಳು ಮೂಲ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸಲು ಅವಕಾಶ ನೀಡಬೇಕು ಎಂದು ಆಗ್ರಹಿಸಿದ್ದಾರೆ.ಆದರೆ ಸರ್ಕಾರ ಇದಕ್ಕೆ ಮಣಿದಿಲ್ಲ.
ಹೀಗಾಗಿ ಹೈಕೋರ್ಟ್ ಆದೇಶ ಇದ್ದರೂ ಕರ್ತವ್ಯ ನಿರ್ವಹಿಸಲು ಚಲನಾದೇಶ ಮತ್ತು ಲಾಗಿನ್ ಐಡಿ ನೀಡುತ್ತಿಲ್ಲ ಎಂದು ಆರೋಪಿಸಿ ಬೆಂಗಳೂರಿನ ಸಬ್ ರಿಜಿಸ್ಟ್ರಾರ್‌ಗಳು ಅಹೋರಾತ್ರಿ ಧರಣಿ ಕೈಗೊಂಡಿದ್ದಾರೆ.
ಕೆ.ಜಿ. ರಸ್ತೆಯ ಕಂದಾಯ ಭವನದಲ್ಲಿ ಇರುವ ರಾಜ್ಯ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಆಯುಕ್ತರ ಕಚೇರಿ ಮುಂಭಾಗ ಬೆಂಗಳೂರು ನಗರದ ಎಲ್ಲ ಹಿರಿಯ, ಕಿರಿಯ ಸಬ್ ರಿಜಿಸ್ಟ್ರಾರ್‌ಗಳು ಅಹೋರಾತ್ರಿ ಪ್ರತಿಭಟನೆ ಕೈಗೊಂಡಿದ್ದಾರೆ.
ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಡಿ.10ರ 90 ಅಧಿಕಾರಿಗಳ ಕೌನ್ಸಲಿಂಗ್ ವರ್ಗಾವಣೆ ಆದೇಶಕ್ಕೆ ಹೈಕೋರ್ಟ್ ವಿಭಾಗೀಯ ಪೀಠವು ಫೆ.18ರಂದು ತಡೆಯಾಜ್ಞೆ ವಿಧಿಸಿತ್ತು.
ಆದೇಶ ಬಂದು 48 ಗಂಟೆಗಳು ಕಳೆದರು ಚಲನಾದೇಶ ಮತ್ತು ಲಾಗಿನ್ ಐಡಿ ಕೊಡದೆ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ್ ಮತ್ತು ಐಜಿಆರ್ ಕೆ.ಎ. ದಯಾನಂದ್ ದ್ವೇಷ ಸಾಧಿಸುತ್ತಿದ್ದಾರೆ ಎಂದು ಆರೋಪಿಸಿರುವ ನೌಕರರು ನೆಮ್ಮದಿಯಾಗಿ ಕರ್ತವ್ಯ ನಿರ್ವಹಿಸುವಂತಹ ವಾತಾವರಣ ಬೇಕೆಂದು ಒತ್ತಾಯಿಸಿದ್ದಾರೆ.
1865ರಿಂದ ಉಪನೋಂದಣಾಧಿಕಾರಿ ಕಚೇರಿಗಳು ಕಾರ್ಯನಿರ್ವಹಿಸುತ್ತಿದ್ದು, 160 ವರ್ಷಗಳ ಇತಿಹಾಸವಿದೆ. ರಾಜ್ಯ ಸರ್ಕಾರದ ಬೊಕ್ಕಸ ತುಂಬಿಸುವಲ್ಲಿ ಇಲಾಖೆ 3ನೇ ಸ್ಥಾನದಲ್ಲಿದೆ. ಇಲ್ಲಿಯವರೆಗೂ ಇಲಾಖೆಯಲ್ಲಿ ಯಾವುದೇ ಧರಣಿ, ಪ್ರತಿಭಟನೆಗಳು ನಡೆದಿರಲಿಲ್ಲ. ಇದೀಗ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಕೈಗೊಳ್ಳುತ್ತಿರುವ ಕ್ರಮಗಳು ಸಾಮಾಜಿಕ ನ್ಯಾಯದ ವಿರುದ್ಧ ಮತ್ತು ಏಕಪಕ್ಷಿಯವಾಗಿವೆ.ಹೀಗಾಗಿ ಹೋರಾಟಕ್ಕೆ ಇಳಿಯಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ಪ್ರತಿಭಟನಕಾರರು ಹೇಳಿದ್ದಾರೆ
ನೋಂದಣಿ ಮತ್ತು ಮುದ್ರಾಂಕ ಇಲಾಖೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಅಧೀನದಲ್ಲಿದೆ. ವರ್ಗಾವಣೆ ಸಮಯದಲ್ಲಿ ಡಿಪಿಆರ್‌ಎ ಮಾರ್ಗಸೂಚಿ ಪಾಲನೆ ಮಾಡದೆ ಬೇಕಾಬಿಟ್ಟಿಯಾಗಿ ಮಾಡುತ್ತಿರುವ ವರ್ಗಾವಣೆಗೆ ನಮ್ಮ ವಿರೋಧವಿದೆ. ವಯಸ್ಸಾದ ತಂದೆ,ತಾಯಿ ಮತ್ತು ಶಾಲೆಗೆ ಹೋಗುವ ಮಕ್ಕಳು ಮನೆಯಲ್ಲಿ ಇದ್ದಾರೆ. ಇದ್ಯಾವುದು ಗಮನದಲ್ಲಿ ಇರಿಸಿಕೊಳ್ಳದೇ ವರ್ಗಾವಣೆ ಮಾಡಲಾಗುತ್ತಿದೆ ಎಂದು ದೂರಿದ್ದಾರೆ.