ಬೆಂಗಳೂರು,ಜೂ.23-
ತನ್ನ ಗೆಳತಿಗೆ ಅಶ್ಲೀಲ ಮೆಸೇಜ್ ಕಳುಹಿಸಿದ ಎಂದು
ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಕ್ರೂರವಾಗಿ ಕೊಲೆ ಮಾಡಿದ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಪ್ರಕರಣದ ಸಾಕ್ಷಿ ಮುಚ್ಚಿಹಾಕಲು ಪ್ರಯತ್ನ ನಡೆಸಿರುವುದು ಬೆಳಕಿಗೆ ಬಂದಿದೆ.
ಈ ಪ್ರಕರಣದಲ್ಲಿ ಬಂಧಿತರಾಗಿರುವ ನಟ ದರ್ಶನ್ ಸೇರಿ 17 ಮಂದಿ ಆರೋಪಿಗಳು,ಕೊಲೆಯನ್ನು ಮರೆಮಾಚಲು ಸಾಕ್ಷಿದಾರರಿಗೆ ಬೆದರಿಕೆ ಹಾಕಿರುವುದು ಪೊಲೀಸರ ತನಿಖೆಯಲ್ಲಿ ಬಹಿರಂಗವಾಗಿದೆ.
ಹತ್ಯೆ ಬಳಿಕ ಮೃತನ ಬಟ್ಟೆಯನ್ನು ಬದಲಾಯಿಸಿದ ಆರೋಪಿಗಳು ಹಾಗೂ ಕೆಲವರು ಬೇರೆಡೆ ಎಸೆದು ಸಾಕ್ಷ್ಯ ನಾಶಪಡಿಸಿದ್ದರು. ಮೃತನು ಧರಿಸಿದ್ದ ಪ್ಯಾಂಟ್ ಎಸೆದಿದ್ದ ವ್ಯಕ್ತಿಯನ್ನು ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿಕೊಂಡು ಸಾಕ್ಷಿದಾರನಾಗಿ ಮಾಡಲಾಗಿದೆ.
ಪ್ರಕರಣದಲ್ಲಿ ಕೆಲ ಸಾಕ್ಷಿದಾರರ ವಿಚಾರಣೆ ನಡೆಸಿದ್ದು, ಅವರಿಗೆ ಆರೋಪಿಗಳು ಜೀವ ಬೆದರಿಕೆ ಹಾಕಿದ್ದು ಸುರಕ್ಷಿತೆ ದೃಷ್ಟಿಯಿಂದ ಅವರ ಬಗ್ಗೆ ಗೌಪ್ಯತೆ ಕಾಪಾಡಿರುವುದಾಗಿ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ ರಿಮ್ಯಾಂಡ್ ಅರ್ಜಿಯಲ್ಲಿ ತಿಳಿಸಿದ್ದಾರೆ.
ಅಲ್ಲದೆ ಕೆಲ ಸಾಕ್ಷಿದಾರರನ್ನು ಸಿಆರ್ಪಿಸಿ 164ರಡಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ಹೇಳಿಕೆ ದಾಖಲಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ದರ್ಶನ್ ಮೊಬೈಲ್ ಜಪ್ತಿ:
ಪ್ರಕರಣದಲ್ಲಿ ತಮ್ಮ ಹೆಸರು ಬರದಂತೆ ವ್ಯಕ್ತಿಯೊಬ್ಬನಿಂದ 40 ಲಕ್ಷ ರೂ ಸಾಲ ಪಡೆದಿರುವ ಬಗ್ಗೆ ತನಿಖೆಯಲ್ಲಿ ಬಯಲಾಗಿತ್ತು. ಹಣದ ಮೂಲ ಪತ್ತೆ ಹಚ್ಚಲು ಎರಡು ದಿನಗಳ ಕಾಲ ಮೂರನೇ ಬಾರಿ ಪೊಲೀಸ್ ಕಸ್ಟಡಿ ಪಡೆದಿದ್ದ ಪೊಲೀಸರು, ದರ್ಶನ್ ಮೊಬೈಲ್ ಅನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಡೇಟಾ ನಿಷ್ಕ್ರಿಯಗೊಳಿಸಿರುವುದು ಪತ್ತೆಯಾಗಿದೆ.
ಇದೀಗ ನ್ಯಾಯಾಲಯದ ಅನುಮತಿ ಪಡೆದು ಮತ್ತೆ ರೀ-ಆಕ್ಸಿಸ್ ಮಾಡಲು ಪೊಲೀಸರು ಮುಂದಾಗಿದ್ದಾರೆ. ಅರೋಪಿಗಳು ಸಾಕ್ಷ್ಯ ನಾಶಪಡಿಸಲು ಉದ್ದೇಶದಿಂದ
ಮೃತ ರೇಣುಕಾಸ್ವಾಮಿಯ ಮೊಬೈಲ್ ಅನ್ನು ಸುಮನಹಳ್ಳಿಯ ರಾಜಕಾಲುವೆಗೆ ಎಸೆದಿದ್ದಾರೆ. ಆತನ ಮೊಬೈಲ್ ಡೇಟಾವನ್ನ ನಿಷ್ಕ್ರಿಯಗೊಳಿಸಿದ್ದಾರೆ.
ಹೀಗಾಗಿ ಮೃತನ ಹೆಸರಿನಲ್ಲಿ ಮತ್ತೆ ಸಿಮ್ ಕಾರ್ಡ್ ಸರ್ವೀಸ್ ಪ್ರೊವೈಡರ್ಗಳಿಂದ ಖರೀದಿಸಿ ಪರಿಶೀಲಿಸಬೇಕಿದೆ ಎಂದು ಪೊಲೀಸರು ರಿಮ್ಯಾಂಡ್ ಅರ್ಜಿಯಲ್ಲಿ ನಮೂದಿಸಿದ್ದಾರೆ.
40 ಲಕ್ಷ ಹಣದ ಮೂಲ:
ಪ್ರಕರಣದಲ್ಲಿ ಕೈವಾಡವಿಲ್ಲದಂತೆ ಮಾಡಲು ವ್ಯಕ್ತಿಯಿಂದ 40 ಲಕ್ಷ ಸಾಲ ಪಡೆದಿರುವ ಬಗ್ಗೆ ವಿಚಾರಣೆಯಲ್ಲಿ ಬಂಧಿತ ಆರೋಪಿ ಒಪ್ಪಿಕೊಂಡಿದ್ದಾರೆ. ಹಣದ ಮೂಲದ ಬಗ್ಗೆ ಹೇಳಿಕೆ ನೀಡಿದ್ದು, ಆ ವ್ಯಕ್ತಿಯ ಬಗ್ಗೆ ವಿಚಾರಣೆ ನಡೆಸಬೇಕಿದೆ. ಪ್ರಕರಣದ 14ನೇ ಆರೋಪಿ ಪ್ರದೂಷ್ ಕೃತ್ಯ ನಡೆದ ಸ್ಥಳಕ್ಕೆ ಬಂದಿದ್ದ ವ್ಯಕ್ತಿಯ ಬಗ್ಗೆ ಮಾಹಿತಿ ನೀಡಿದ್ದು, ಆತನನ್ನ ವಿಚಾರಣೆಗೊಳಪಡಿಸಬೇಕಿದೆ. ಪ್ರಕರಣದ 9ನೇ ಆರೋಪಿ ಧನರಾಜ್ ಸಹ ಎಲೆಕ್ಟ್ರಿಕಲ್ ಟಾರ್ಚ್ ಶಾಕ್ ಅನ್ನ ಆನ್ಲೈನ್ನಲ್ಲಿ ಖರೀದಿಸಿ ಹಣ ಸಂದಾಯ ಮಾಡಿದ್ದು, ಇದರ ದಾಖಲಾತಿಗಳನ್ನು ಪಡೆದುಕೊಳ್ಳಬೇಕಿದೆ. ಅಲ್ಲದೆ ಕೆಲ ಸಾಕ್ಷಿದಾರರನ್ನು 164ರಡಿ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜೈಲಿನಲ್ಲಿ ಹಲ್ಲೆ ಸಾಧ್ಯತೆ:
ಪ್ರಕರಣದಲ್ಲಿ ಬಂಧಿತರಾಗಿ ಜೈಲುಪಾಲಾಗಿರುವ ಸಹ ಆರೋಪಿಗಳಿಗೆ ದರ್ಶನ್ ಬಗ್ಗೆ ಅಭಿಮಾನವಿರುವ ವಿಚಾರಣಾಧೀನ ಕೈದಿಗಳು ಹಲ್ಲೆ ಮಾಡುವ ಸಾಧ್ಯತೆಯಿದೆ. ಕೆಲ ವಿಚಾರಣಾಧೀನ ಕೈದಿಗಳ ಹೆಸರನ್ನು ಗೋಪ್ಯತೆ ಕಾಪಾಡಿಕೊಂಡಿರುವ ಪೊಲೀಸರು, ತುಮಕೂರು ಜಿಲ್ಲಾ ಕಾರಾಗೃಹಕ್ಕೆ ವರ್ಗಾವಣೆ ಮಾಡಬೇಕೆಂದು ಮನವಿ ಮಾಡಿದ್ದಾರೆ. ಇನ್ನು ಜೈಲು ಸೇರಿರುವ ದರ್ಶನ್ಗೆ ವಿಚಾರಣಾಧೀನ ಕೈದಿ ಸಂಖ್ಯೆ ನೀಡಲಾಗಿದೆ. ದರ್ಶನ್ (6106), ಧನರಾಜ್ (6107), ವಿನಯ್ (6108) ಹಾಗೂ ಪ್ರದೂಶ್ (6109) ಗೆ ಯುಟಿಪಿ ಸಂಖ್ಯೆ ನೀಡಲಾಗಿದೆ
Previous Articleಸ್ಥಳೀಯ ಸಂಸ್ಥೆ ಚುನಾವಣೆಯಲ್ಲೂ ಬಿಜೆಪಿ-ಜೆಡಿಎಸ್ ಮೈತ್ರಿ.
Next Article ಎಚ್.ಡಿ.ರೇವಣ್ಣ ಅವರ ಮತ್ತೊಬ್ಬ ಮಗನೂ ಬಂಧನ.