ಬೆಂಗಳೂರು : ಪೊಲೀಸ್ ಸಬ್ ಇನ್ಸ್ ಪೆಕ್ಟರ್ ನೇಮಕಾತಿ ಹಗರಣದಲ್ಲಿ ಸಚಿವ ಅಶ್ವತ್ಥ ನಾರಾಯಣ್ ವಿರುದ್ದದ ಕಾಂಗ್ರೆಸ್ ಆಧಾರರಹಿತ ಆರೋಪ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು. ಕಾಂಗ್ರೆಸ್ ನವರ ಹಿಟ್ ಅಂಡ್ ರನ್ ಆರೋಪವನ್ನು ನಾವು ಒಪ್ಪುವುದಿಲ್ಲ. ಕಾಂಗ್ರೆಸ್ ನವರ ಕಾಲದಲ್ಲಿ ಸಾಕಷ್ಟು ಪರೀಕ್ಷೆಯಲ್ಲಿ ಅಕ್ರಮಗಳು ನಡೆದಿವೆ, ಆದರೆ ಅದಕ್ಕೆ ಸೂಕ್ತ ತನಿಖೆಯನ್ನುಮಾಡಿಲ್ಲ ಎಂದು ವಾಗ್ದಾಳಿ ನಡೆಸಿದರು.
ಕ್ರಾಂಗ್ರೆಸ್ ನಾಯಕರು ಕೂಡ ಪಿಎಸ್ಐ ಅಕ್ರಮದಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ. ಅದರಲ್ಲಿ ತಾವು ಸಿಕ್ಕಿ ಹಾಕಿಕೊಳ್ಳುತ್ತೇವೆ ಭಯದಿಂದ ನಮ್ಮ ವಿರುದ್ಧ ಆರೋಪ ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು.
ಕಾಂಗ್ರೆಸ್ ಒಂದು ಜವಾಬ್ದಾರಿಯುತ ಪಕ್ಷ. ಅಧಿಕೃತ ಪ್ರತಿಪಕ್ಷವಾಗಿ ಒಬ್ಬರ ಮೇಲೆ ಆರೋಪ ಮಾಡುವಾಗ ಸಾಕ್ಷ್ಯಾಧಾರಗಳನ್ನು ಒದಗಿಸಬೇಕು. ಸುಮ್ಮನೆ ಹಿಟ್ ಅಂಡ್ ರನ್ ಕೇಸ್ ಮಾಡಬಾರದು ಎಂದು ತರಾಟೆಗೆ ತೆಗೆದುಕೊಂಡರು.
ನೀವು ಸಚಿವರ ವಿರುದ್ಧ ಮಾಡುತ್ತಿರುವ ಆರೋಪಗಳಿಗೆ ಸಾಕ್ಷ್ಯಾಧಾರಗಳಾದರೂ ಏನಿದೆ? ಸುಮ್ಮನೆ ರಾಜಕೀಯ ಆರೋಪ ಮಾಡಬೇಕು ಎಂಬ ಕಾರಣಕ್ಕಾಗಿ ಮಾಡಬೇಡಿ. ಸುದ್ದಿಗಾಗಿ ಆರೋಪ ಮಾಡಿದರೆ ಜನರು ನಂಬುತ್ತಾರೆಯೇ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಅಕಾರ ಅವಯಲ್ಲಿ ಎಷ್ಟು ಅಕ್ರಮಗಳು ನಡೆದಿವೆ ಎಂಬುದು ಅವರಿಗೆ ಗೊತ್ತಿಲ್ಲವೇ. ಪಿಎಸ್‍ಐ ನೇಮಕಾತಿ, ಪ್ರಶ್ನೆಪತ್ರಿಕೆ ಸೋರಿಕೆ ಸೇರಿದಂತೆ ಸಾಲು ಸಾಲು ಹಗರಣಗಳು ನಡೆದವು. ನಮ್ಮ ಸರ್ಕಾರದ ಬಗ್ಗೆ ಮಾತನಾಡಲು ಅವರಿಗೆ ಏನು ನೈತಿಕತೆ ಇದೆ ಎಂದು ಪ್ರಶ್ನಿಸಿದರು.