ಬೆಂಗಳೂರು,ಮಾ.1- ರಾಜಕೀಯ ಸೇರಿ ಜನ ಸೇವೆ ಮಾಡಬೇಕೆಂಬ ಮಹತ್ವಾಕಾಂಕ್ಷೆಯೊಂದಿಗೆ ಆಮ್ ಆದ್ಮಿ ಪಕ್ಷ ಸೇರ್ಪಡೆಯಾಗಿ ಅಲ್ಲಿ ತೀವ್ರ ಕಡೆಗಣನೆ ಮತ್ತು ಅಪಮಾನಕ್ಕೊಳಗಾಗಿದ್ದ ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ತಮ್ಮ ಬೆಂಬಲಿಗರೊಂದಿಗೆ ಬಿಜೆಪಿ ಸೇರ್ಪಡೆಯಾಗುವ ಮೂಲಕ ರಾಜಕೀಯದಲ್ಲಿ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದಾರೆ.
ಬಿಜೆಪಿ ರಾಜ್ಯ ಕಚೇರಿಯಲ್ಲಿ ಏರ್ಪಡಿಸಿದ್ದ ಸರಳ ಸಮಾರಂಭದಲ್ಲಿ ಭಾಸ್ಕರ್ ರಾವ್ ಅವರೊಂದಿಗೆ ಅವರ ಬೆಂಬಲಿಗರಾದ ಆಮ್ಆದ್ಮಿ ಪಕ್ಷದ ರಾಜ್ಯ ಸಹಕಾರ್ಯದರ್ಶಿ ವಿಜಯ್ ಶಾಸ್ತ್ರಿಮಠ್, ಮಾಜಿ ಮುಖ್ಯವಕ್ತಾರ ಶರತ್ ಖಾದ್ರಿ, ಸಮಾಜಸೇವಕ ಶಿವಶರ್ಮ, ಬಸವನಗುಡಿ ವಿಧಾನಸಭಾ ಕ್ಷೇತ್ರದ ಮುಖಂಡರಾದ ಆರ್ಯನ್, ಅಂಜನ್ರಾವ್, ಬೆಂಗಳೂರು ಮಹಾನಗರದ ಪ್ರಧಾನ ಕಾರ್ಯದರ್ಶಿ ದಿಲೀಪ್ ಗೌಡ ಅವರು ಆಪ್ ತೊರೆದು ಬಿಜೆಪಿ ಸೇರಿದರು.
ತಮ್ಮ ಬೆಂಬಲಿಗರ ಜೊತೆ ಬಿಜೆಪಿ ಸೇರಿದ ಭಾಸ್ಕರ ರಾವ್ ಅವರು ಮಾತನಾಡಿ, ಆಮ್ ಆದ್ಮಿ ಪಕ್ಷದಲ್ಲಿ ಒಂದು ವರ್ಷ ಇದ್ದರೂ ಅದು ರಾಜ್ಯದಲ್ಲಿ ಬೆಳೆಯುವ ಸಾಧ್ಯತೆ ಕಡಿಮೆ ಅನಿಸಿತು. ಆ ಪಕ್ಷದ ರಾಜ್ಯ ನಾಯಕರಿಗೆ ರಾಜ್ಯದಲ್ಲಿ ಪಕ್ಷ ಬೆಳೆಯುವುದಕ್ಕಿಂತ ಸ್ವಾರ್ಥ ಮುಖ್ಯವಾಗಿದೆ. ರಾಜ್ಯದಲ್ಲಿ ಇನ್ನೂ ಕಣ್ಣು ಬಿಡುತ್ತಿರುವ ಪಕ್ಷವಾದರೂ ರಾಜ್ಯ ನಾಯಕರು ಈಗಾಗಲೇ ಸರ್ಕಾರ ರಚಿಸಿದ್ದೇವೆ ಎಂಬಂತೆ ವರ್ತಿಸುತ್ತಿದ್ದಾರೆ,ತತ್ವ ಸಿದ್ದಾಂತಗಳ ಬದಲಿಗೆ ಸ್ವಾರ್ಥ ಮೈಗೂಡಿಸಿಕೊಂಡ ಪಕ್ಷ ಬೆಳೆಯುವುದಿಲ್ಲ ಎಂಬುದು ಮನವರಿಕೆಯಾಯಿತು ಹೀಗಾಗಿ ಆ ಪಕ್ಷ ತೊರೆದಿದ್ದೇನೆ ಎಂದು ಹೇಳಿದರು
ಬಿಜೆಪಿ ಸನಾತನ ಧರ್ಮಕ್ಕೆ ಸೇರಿದ ಪಕ್ಷವಾಗಿದ್ದು, ರಾಷ್ಟ್ರೀಯತೆ ಮೈಗೂಡಿಸಿಕೊಂಡ ಪಕ್ಷವಾಗಿದೆ.
ನಾನು ಬಾಲ್ಯಕಾಲದಿಂದ ಸನಾತನ ಧರ್ಮ, ರಾಷ್ಟ್ರೀಯತೆಗೆ ಬದ್ಧನಾಗಿದ್ದವ ಹೀಗಾಗಿ ಈ ಪಕ್ಷಕ್ಕೆ
ಸೇರಿದ್ದೇನೆ ಎಂದು ತಿಳಿಸಿದರು.
ಮೋದಿಜಿ, ಅಮಿತ್ ಶಾ, ಜೆ.ಪಿ.ನಡ್ಡಾ, ಬಿ.ಎಲ್.ಸಂತೋಷ್, ಯಡಿಯೂರಪ್ಪ, ಕಟೀಲ್, ಪ್ರಹ್ಲಾದ್ ಜೋಶಿ ಅವರ ಪಕ್ಷದ ಜೊತೆ ಇರಲು ಬಂದಿದ್ದೇನೆ. ಪಕ್ಷದ ಕಾರ್ಯಕ್ರಮಗಳಿಗೆ ಸಹಕರಿಸುವೆ. ಅಖಂಡ ಭಾರತವನ್ನು ಗಟ್ಟಿಯಾಗಿ ಇಡಲು ಇದೊಂದೇ ಪಕ್ಷದಿಂದ ಸಾಧ್ಯ ಎಂದರು.ಪಕ್ಷ ಕಟ್ಟುವಾಗ ಯುವಕರು, ಮಹಿಳೆಯರಿಗೆ ಆದ್ಯತೆ ಕೊಡುವುದು ಖುಷಿ ಕೊಟ್ಟಿದೆ. ಪಕ್ಷದ ಮುಖಂಡರ ಮಾರ್ಗದರ್ಶನದಂತೆ ಜವಾಬ್ದಾರಿ ವಹಿಸಿ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.
ಇವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡ ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟಿಲ್ ಮಾತನಾಡಿ,
ರಾಜ್ಯದಲ್ಲಿ ಬಿಜೆಪಿ ಅಲೆ ಇದೆ. ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕೆಂಬ ನಿರೀಕ್ಷೆ ಮತ್ತು ಜನಬೆಂಬಲ ಕಾಣುತ್ತಿದೆ. ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುವುದು ಖಚಿತ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ದಕ್ಷ ಪೊಲೀಸ್ ಅಧಿಕಾರಿಯಾಗಿದ್ದ ಭಾಸ್ಕರ್ ರಾವ್ ಅವರು ನಿವೃತ್ತಿ ಬಳಿಕ ಆಪ್ ಸೇರಿ ಇದೀಗ ಕಲ್ಯಾಣ ಕರ್ನಾಟಕದ ಉದ್ದೇಶದಿಂದ ಪಕ್ಷ ಸೇರಿದ್ದಾರೆ. ಪಕ್ಷ ಗಟ್ಟಿ ಮಾಡಿ ರಾಜಕಾರಣದ ಮೂಲಕ ಸೇವೆ ಮಾಡಲು ಬಂದಿದ್ದಾರೆ. ಅವರಿಗೆ ಅಭಿನಂದನೆಗಳು ಎಂದು ತಿಳಿಸಿದರು.
Previous Articleಉತ್ಸವಮೂರ್ತಿ ಯಡಿಯೂರಪ್ಪ ವಿಸರ್ಜನೆಗೊಳ್ಳಲಿದ್ದಾರೆ!
Next Article ಲಂಚ ಪಡೆಯುತ್ತಿದ್ದ ಶಾಸಕರ ಮಗ ಅರೆಸ್ಟ್