ಚಿಕ್ಕಮಗಳೂರು,ಅ.9-ನಿಮ್ಮ ಎಲ್ಲ ರೀತಿಯ ಸಮಸ್ಯೆಗಳಿಗೆ ಪೋನ್‌ನಲ್ಲಿಯೇ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಮಹಿಳೆಗೆ ವಂಚಿಸಿ ಹಣ ವರ್ಗಾಯಿಸಿಕೊಂಡಿದ್ದ ಬೆಂಗಳೂರಿನ ಜ್ಯೋತಿಷಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನ ಗಣೇಶ್ ಗೊಂದಳೆ ಬಂಧಿತ ಜ್ಯೋತಿಷಿಯಾಗಿದ್ದಾನೆ. ಕೌಟುಂಬಿಕ ಸಮಸ್ಯೆಗಳಿಗೆ ಪರಿಹಾರ ನೀಡುವುದಾಗಿ ಫೇಸ್‌ಬುಕ್ ಪೇಜ್‌ನಲ್ಲಿ ಜಾಹೀರಾತೊಂದು ನೋಡಿದ್ದ ಮಹಿಳೆಯು, ತನ್ನ ಕುಟುಂಬದಲ್ಲಿದ್ದ ಸಮಸ್ಯೆ ಪರಿಹಾರಕ್ಕಾಗಿ ಜಾಹೀರಾತಿನಲ್ಲಿದ್ದ ಫೋನ್ ನಂಬರ್‌ಗಳಿಗೆ ಕರೆ ಮಾಡಿದ್ದಾರೆ. ಅಲ್ಲದೇ, ತನ್ನ ಕುಟುಂಬದ ಸಮಸ್ಯೆ ಸರಿ ಮಾಡಿಕೊಡಿ ಎಂದು ಜ್ಯೋತಿಷಿ ಎನ್ನಲಾದ ವ್ಯಕ್ತಿಗೆ ಕೇಳಿಕೊಂಡಿದ್ದಾರೆ.
ಆಗ ಜ್ಯೋತಿಷಿಯು, ನಿಮ್ಮ ಹೆಸರಿನಲ್ಲಿ ಪೂಜೆ ಮಾಡುತ್ತೇನೆ .7 ಸಾವಿರ ಖರ್ಚಾಗುತ್ತದೆ ಎಂದು ಹೇಳಿದ್ದಾರೆ. ಆಗ ಮಹಿಳೆಯು ಗೂಗಲ್ ಪೇ ಮೂಲಕ ಹಣ ವರ್ಗಾವಣೆ ಮಾಡಿದ್ದಾರೆ. ಜ್ಯೋತಿಷಿಯು ಪುನಃ ಬೇರೆ ಬೇರೆ ಪೂಜೆ ಮಾಡಬೇಕು, ಆಗ ಸಮಸ್ಯೆ ಸರಿ ಆಗುತ್ತೆ ಎಂದು ನಂಬಿಸಿ, ಹಂತ ಹಂತವಾಗಿ ಮಹಿಳೆಯಿಂದ ಒಟ್ಟು .1,16,001 ವರ್ಗಾವಣೆ ಮಾಡಿಸಿಕೊಂಡಿದ್ದಾರೆ.
ಇಷ್ಟಾದರೂ ಇನ್ನು ಹಲವು ಸಮಸ್ಯೆಗಳಿವೆ ಎಂದು ಹೇಳಿ ಪೂಜೆ ಖರ್ಚಿಗೆ ಕೂಡಲೇ ಹಣ ಕಳುಹಿಸಿ ಎಂದು ಮಹಿಳೆಗೆ ಹೇಳಿದ್ದಾನೆ. ಆಗ ಜ್ಯೋತಿಷಿಯ ಹಣದಾಹದ ಬಗ್ಗೆ ಮಹಿಳೆ ಅನುಮಾನಗೊಂಡು ಜಿಲ್ಲಾ ಸಿ.ಇ.ಎನ್. ಅಪರಾಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಅಗತ್ಯ ಕ್ರಮ ಜರುಗಿಸಲು ಮುಂದಾಗಿದ್ದರು. ಈಗ ನಕಲಿ ಜ್ಯೋತಿಷಿ ಪೊಲೀಸರ ಅತಿಥಿಯಾಗಿದ್ದಾನೆ.
ಎಲ್ಲ ರೀತಿಯ ಸಮಸ್ಯೆಗಳನ್ನು ಫೋನ್‌ನಲ್ಲಿ ಪರಿಹರಿಸಲಾಗುವುದು ಎಂದು ನಂಬಿಸಿ ಹಣ ವರ್ಗಾಯಿಸಿಕೊಂಡು, ಮಹಿಳೆಗೆ ಮೋಸ ಮಾಡಿದ್ದ ಈ ಆರೋಪಿ ಗಣೇಶ್ ಗೊಂದಳೆ ಬೆಂಗಳೂರಿನ ಸಹಕಾರ ನಗರದ ನಿವಾಸಿಯಾಗಿದ್ದಾನೆ. ಈತನನ್ನು ಬಂಧಿಸಿರುವ ಪೊಲೀಸರು .87,500 ನಗದು, ಮೊಬೈಲ್ ಪೋನ್, ಎರಡು ಎಟಿಎಂ ಕಾರ್ಡ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಸಾರ್ವಜನಿಕರು ಇಂತಹ ವಂಚನೆಗಳ ಜಾಲಕ್ಕೆ ಬೀಳದೇ, ಎಚ್ಚರ ವಹಿಸಲು ಜಿಲ್ಲಾ ಪೊಲೀಸ್ ಇಲಾಖೆ ಮನವಿ ಮಾಡಿದೆ.