ಬೆಂಗಳೂರು, ಅ.21- ಮತದಾರರ ನಕಲಿ ಗುರುತಿನ ಚೀಟಿ, ಆಧಾರ್ ಕಾರ್ಡ್,ವಾಹನ ಚಾಲನ ಪರವಾನಗಿ ಪತ್ರಗಳನ್ನು ತಯಾರಿಸಿ ಕೊಡುತ್ತಿದ್ದ ಆರೋಪದಲ್ಲಿ ಸಚಿವ ಬೈರತಿ ಸುರೇಶ್ ಆಪ್ತ ಸೇರಿ ಮೂವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ನಕಲಿ ಮತದಾರರ ಗುರುತಿನ ಪತ್ರ ತಯಾರಿಸುವ ಈ ಕೃತ್ಯ ಭಾರಿ ಮಹತ್ವವನ್ನು ಪಡೆದುಕೊಂಡಿದೆ.
ಕಳೆದ ವಿಧಾನಸಭಾ ಚುನಾವಣೆಯ ವೇಳೆ ಚಿಲುಮೆ ಸಂಸ್ಥೆ ಹೆಸರಿನಲ್ಲಿ ವೋಟರ್ ಐಡಿಯಿಂದ ಹೆಸರುಗಳನ್ನು ಡಿಲೀಟ್ ಮಾಡುವ ಆರೋಪ ಕೇಳಿಬಂದಿತ್ತು. ಈಗ ನಕಲಿ ವೋಟರ್ ಐಡಿ ಆರೋಪ ಕೇಳಿಬಂದಿದೆ.
ಸಚಿವ ಸುರೇಶ್ ಆಪ್ತನಾದ ಮೌನೇಶ್ ಕುಮಾರ್ ಹಣ ನೀಡಿದರೆ ವೋಟರ್ ಐಡಿ, ಆಧಾರ್, ಡಿಎಲ್ ಮಾಡಿಕೊಡುತ್ತಿದ್ದ.ಈ ಆರೋಪದಲ್ಲಿ ಸಿಸಿಬಿ ಪೊಲೀಸರು ಮೌನೇಶ್ ಕುಮಾರ್ ಸಹಚರರಾದ ಭಗತ್ ಮತ್ತು ರಾಘವೇಂದ್ರ ಎಂಬವರನ್ನು ಬಂಧಿಸಿದ್ದಾರೆ.
ಹೆಬ್ಬಾಳದ ಕನಕ ನಗರದಲ್ಲಿರುವ ಎಂಎಸ್ಎಲ್ ಟೆಕ್ನೊ ಸಲ್ಯೂಷನ್ ಕಂಪನಿ ಮೇಲೆ ಸಿಸಿಬಿ ದಾಳಿ ಮಾಡಿದೆ. ಇಲ್ಲಿ ಯಾವುದೇ ಕ್ಷೇತ್ರದ ವೋಟರ್ ಐಡಿ, ಯಾವುದೇ ಆಧಾರ್ ಕೇಳಿದರೂ ಮಾಡಿಕೊಡುತ್ತಾರೆ ಎಂಬ ಆರೋಪವಿತ್ತು. ಈ ಬಗ್ಗೆ ಮಾಹಿತಿ ಪಡೆದು ದಾಳಿ ನಡೆಸಿದ ಸಿಸಿಬಿ ಮೂವರನ್ನು ಬಂಧಿಸಿದೆ. ಈ ಬಗ್ಗೆ ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಇವರು ಸುಳ್ಳು ದಾಖಲೆಗಳನ್ನು ಸೃಷ್ಟಿ ಮಾಡಿ ಕಾನೂನು ಬಾಹಿರ ಕೃತ್ಯದಲ್ಲಿ ಭಾಗಿಯಾಗುವುದಕ್ಕೆ ಸಹಕಾರ ನೀಡಿದ್ದಾರೆ ಎಂಬ ಆರೋಪವಿದೆ. ಒರಿಜಿನಲ್ ಐಡಿ ಕಾರ್ಡ್ ಎಂದು ಹಣ ಪಡೆದು ಸರ್ಕಾರ ಮತ್ತು ಸಾರ್ವಜನಿಕರಿಗೆ ಮೋಸ ಮಾಡುತಿದ್ದಾರೆ ಎನ್ನಲಾಗಿದೆ.
ಸಿಸಿಬಿ ಪೊಲೀಸರು ಎಂಎಸ್ಎಲ್ ಟೆಕ್ನೊ ಸಲ್ಯೂಷನ್ ಕಂಪನಿ ಮೇಲೆ ದಾಳಿ ಮಾಡಿ ಮೂವರನ್ನು ವಶಕ್ಕೆ ಪಡೆದಿದ್ದಾರೆ. ಕೃತ್ಯಕ್ಕೆ ಬಳಸುತಿದ್ದ ಕಂಪ್ಯೂಟರ್ ಸೇರಿ ಹಲವಾರು ವಸ್ತುಗಳು ಜಪ್ತಿ ಮಾಡಿದ್ದಾರೆ. ಆದರೆ ಆರೋಪಿಗಳನ್ನು ಇನ್ನೂ ಬಂಧನ ಮಾಡಿಲ್ಲ ಎನ್ನಲಾಗಿದೆ.