ಹುಬ್ಬಳ್ಳಿ.ಜ,6: ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಸಮಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಅವಶೇಳನಕಾರಿ ಭಾಷೆ ಬಳಸಿ ಘೋಷಣೆ ಹಾಕಿದ ಆರೋಪದ ಅಡಿಯಲ್ಲಿ ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್ ಅಶೋಕ್ (R Ashok) ಸೇರಿದಂತೆ ಹಲವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ರಾಮ ಮಂದಿರ ನಿರ್ಮಾಣದ ಕರ ಸೇವಕ ಶ್ರೀಕಾಂತ ಪೂಜಾರಿ ಅವರನ್ನು ಬಂಧಿಸಲಾಗಿದೆ ಎಂದು ಆರೋಪಿಸಿ ಪ್ರತಿಪಕ್ಷದಲ್ಲಿ ಬಿಜೆಪಿ ಕಾರ್ಯಕರ್ತರು ಹುಬ್ಬಳ್ಳಿಯಲ್ಲಿ ಪ್ರತಿಭಟನೆ ನಡೆಸಿದ್ದರು ಪ್ರತಿಭಟನೆ ವೇಳೆ ಮುಖ್ಯಮಂತ್ರಿ ವಿರುದ್ಧ ಅವಾಚ್ಯ ಪದಗಳನ್ನು ಬಳಸಿ ಘೋಷಣೆ ಹಾಕಿ , ಪ್ರಚೋದನಕಾರಿ ಭಾಷಣ ಮಾಡಿದ್ದಾರೆ’ ಎಂದು ಆರೋಪಿಸಿ, ಹುಬ್ಬಳ್ಳಿ ಧಾರವಾಡ ಮಹಾನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಲ್ತಾಫ್ ಹಳ್ಳೂರು ಜನವರಿ 5ರಂದು ದೂರು ನೀಡಿದ್ದರು.
ಈ ದೂರನ್ನು ಆಧರಿಸಿ,ಹುಬ್ಬಳ್ಳಿಯ ಶಹರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.ಇದರಲ್ಲಿ
ಆರ್. ಅಶೋಕ ಎ1 ಆರೋಪಿಯಾಗಿದ್ದರೆ, ಶಾಸಕರಾದ ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ ಮತ್ತು ಎಂ.ಆರ್. ಪಾಟೀಲ ಕ್ರಮವಾಗಿ ಎ2, ಎ3 ಮತ್ತು ಎ 7 ಆರೋಪಿಯಾಗಿದ್ದಾರೆ. ವಿಧಾನಪರಿಷತ್ ಸದಸ್ಯ ಪ್ರದೀಪ ಶೆಟ್ಟರ್ ಎ8 ಆರೋಪಿಯಾಗಿದ್ದಾರೆ. ಪಾಲಿಕೆ ಸದಸ್ಯರಾದ ಸಂತೋಷ ಚವ್ಹಾಣ್, ಶಿವು ಮೆಣಸಿನಕಾಯಿ, ರೂಪಾ ಶೆಟ್ಟಿ, ಉಮೇಶಗೌಡ ಕೌಜಲಗಿ, ತಿಪ್ಪಣ್ಣ ಮಜ್ಜಗಿ ಸೇರಿದಂತೆ ಬಿಜೆಪಿಯ ಇತರ ಮುಖಂಡರ ಹಾಗೂ ಕಾರ್ಯಕರ್ತರ ವಿರುದ್ಧ ಎನ್‌ಸಿ(ಸಂಜ್ಞೆ ಅಪರಾಧ–ಗುರುತಿಸಲಾಗದ ಅಪರಾಧಗಳು) ಪ್ರಕರಣ ದಾಖಲಾಗಿದೆ.