ಬೆಂಗಳೂರು,
ಇತ್ತೀಚೆಗೆ ಗೋವಾದ ನೈಟ್ ಕ್ಲಬ್ ಒಂದರಲ್ಲಿ ಸಂಭವಿಸಿದ ಅಗ್ನಿ ದುರಂತದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹಲವಾರು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ.
ಗೋವಾದಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಹಲವಾರು ಮಂದಿ ದುರ್ಮರಣಕ್ಕೀಡಾಗಿದ್ದಾರೆ.ಇದಕ್ಕೆ ನೈಟ್ ಕ್ಲಬ್ ನಲ್ಲಿ ಸುರಕ್ಷಿತ ಕ್ರಮಗಳನ್ನು ಕೈಗೊಂಡಿರಲಿಲ್ಲ.ಅಗ್ನಿ ಅನಾಹುತಗಳನ್ನು ನಿಯಂತ್ರಣ ಮಾಡಲು ಯಾವುದೇ ಮುಂಜಾಗ್ರತಾ ಕ್ರಮ ಇರಲಿಲ್ಲ ಎನ್ನುವುದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಪತ್ತೆಯಾಗಿದೆ.
ಇದನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ ಇದೀಗ ರಾಜ್ಯದಲ್ಲಿನ ಎಲ್ಲಾ ಹೋಟೆಲ್ ಗಳು, ಬಹು ಮಹಡಿ ಕಟ್ಟಡಗಳು, ಪಬ್,ಬಾರ್ ಅಂಡ್ ರೆಸ್ಟೋರೆಂಟ್ ಮತ್ತು ಕಾರ್ಖಾನೆಗಳಲ್ಲಿ ಅಗ್ನಿ ಅವಘಡಗಳನ್ನು ತಡೆಗಟ್ಟಲು ಕೈಗೊಂಡಿರುವ ಕ್ರಮಗಳ ಬಗ್ಗೆ ಪರಿಶೀಲನೆಗೆ ತೀರ್ಮಾನಿಸಿದೆ.
ರಾಜ್ಯ ಅಗ್ನಿಶಾಮಕದಳ ಪೊಲೀಸ್ ಮಹಾನಿರ್ದೇಶಕ ಟಿ ಎನ್ ಶಿವಶಂಕರ್ ಸುತ್ತೋಲೆಯನ್ನು ಹೊರಡಿಸಿದ್ದು ಅಗ್ನಿಶಾಮಕ ದಳ ಸಿಬ್ಬಂದಿ ಇಂತಹ ಎಲ್ಲಾ ಕಟ್ಟಡಗಳಿಗೆ ಕಡ್ಡಾಯವಾಗಿ ಭೇಟಿ ನೀಡಿ ಅಲ್ಲಿ ಅಳವಡಿಸಲಾಗಿರುವ ಅಗ್ನಿ ಸುರಕ್ಷತಾ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಿ ವರದಿ ನೀಡಬೇಕು ಯಾವುದಾದರೂ ಕಟ್ಟಡದಲ್ಲಿ ಅಗ್ನಿ ಸುರಕ್ಷತಾ ಕ್ರಮಗಳನ್ನು ಅಳವಡಿಸಿಲ್ಲದೆ ಹೋದರೆ ಅವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಹೇಳಿ ನೋಟಿಸ್ ಜಾರಿಗೊಳಿಸಬೇಕು ಎಂದು ಸೂಚಿಸಿದ್ದಾರೆ.

