ಬೆಂಗಳೂರು, ಸೆ.17- ಬಿಜೆಪಿ ಎಂಎಲ್ ಎ ಟಿಕೆಟ್ ಕೊಡಿಸುವುದಾಗಿ ಉದ್ಯಮಿ ಗೋವಿಂದ ಪೂಜಾರಿಗೆ ವಂಚಿಸಿರುವ ಚೈತ್ರಾ ಕುಂದಾಪುರ (Chaitra Kundapura) ಮತ್ತಾಕೆಯ ಗ್ಯಾಂಗ್ ನಿಂದ ಸಿಸಿಬಿ ಪೊಲೀಸರು ಇಲ್ಲಿಯವರೆಗೆ ನಗದು ಸೇರಿ 3.8 ಕೋಟಿ ಮೌಲ್ಯದ ಚಿನ್ನವನ್ನು ಜಪ್ತಿ ಮಾಡಿದ್ದಾರೆ.
ಸೆಪ್ಟೆಂಬರ್ 12ರಂದು ಉಡುಪಿ ಮತ್ತು ಚಿಕ್ಕಮಗಳೂರಿನಲ್ಲಿ ಚೈತ್ರಾ ಕುಂದಾಪುರ (Chaitra Kundapura) ಗ್ಯಾಂಗನ್ನು ಬಂಧಿಸಿ ಕೋರ್ಟ್ ಗೆ ಹಾಜರುಪಡಿಸಿ ಮತ್ತೆ ಕಸ್ಟಡಿಗೆ ತೆಗೆದುಕೊಂಡಿರುವ ಸಿಸಿಬಿ ಪೊಲೀಸರು ತೀವ್ರ ವಿಚಾರಣೆ ನಡೆಸಿ ಆರೋಪಿಗಳ ಆರ್ಥಿಕ ವ್ಯವಹಾರಗಳ ಎಲ್ಲ ವಿವರಗಳನ್ನು ಪತ್ತೆ ಹಚ್ಚುತ್ತಿದ್ದಾರೆ.
ಆರೋಪಿಗಳ ಬ್ಯಾಂಕ್ ಅಕೌಂಟ್‌ಗಳನ್ನು ಜಾಲಾಡಲಾಗುತ್ತಿದ್ದು, ವ್ಯವಹಾರಗಳ ಮೇಲೆ ಕಣ್ಣಿಡಲಾಗಿದೆ. ಆರೋಪಿಗಳು ಮಾತ್ರವಲ್ಲ ಅವರ ಹತ್ತಿರದ ಸಂಬಂಧಿಕರು ಹಾಗೂ ಆಪ್ತರ ಬ್ಯಾಂಕ್ ಅಕೌಂಟ್ ಮೇಲೂ ಕಣ್ಣಿಡಲಾಗಿದೆ. ಹೀಗಾಗಿ ಹೆಚ್ಚಿನ ಆರ್ಥಿಕ ವ್ಯವಹಾರಗಳ ಬಣ್ಣ ಬಯಲಾಗಿದ್ದು, ಅದರ ಪರಿಣಾಮವಾಗಿ ಈಗಾಗಲೇ 3 ಕೋಟಿ ರೂ. ಮೌಲ್ಯದ ನಗದು, ಚಿನ್ನಾಭರಣ ಹಾಗೂ ಠೇವಣಿ ಪತ್ರಗಳು ಸಿಕ್ಕಿವೆ.
ವಂಚನೆ ಪ್ರಕರಣದಲ್ಲಿ ಬಂಧಿತ ಚೈತ್ರಾ ಕುಂದಾಪುರ, ಗಗನ್ ಕಡೂರು, ಧನರಾಜ್, ರಮೇಶ್, ಪ್ರಜ್ವಲ್ ಮತ್ತು ಬಿ.ಎಲ್. ಚನ್ನನಾಯಕ್ ತೀವ್ರ ವಿಚಾರಣೆ ನಡೆಸಲಾಗಿದೆ.
ಪ್ರಕರಣದ ಮೂರನೇ ಆರೋಪಿಯಾಗಿರುವ ಹಾಲಶ್ರೀ ಸ್ವಾಮೀಜಿ ಇನ್ನಷ್ಟೆ ಬಂಧಿಸಬೇಕಾಗಿದೆ. ಪ್ರಸಾದ್ ಬೈಂದೂರು ಈ ಪ್ರಕರಣದಲ್ಲಿ ಅಪ್ರೂವರ್ ಆಗುವ ಸಾಧ್ಯತೆಗಳು ಕಂಡುಬಂದಿವೆ.
ಜಪ್ತಿಯ ವಿವರ:
ಚೈತ್ರಾ ಕುಂದಾಪುರ ತನ್ನ ಸಂಬಂಧಿಕರ ಹೆಸರಲ್ಲಿ ಖಾಸಗಿ ಬ್ಯಾಂಕ್ ನಲ್ಲಿ ಇಟ್ಟಿದ್ದ 1.8 ಕೋಟಿ ರೂ. ಮೌಲ್ಯದ ಠೇವಣಿ ಪತ್ರ ಜಪ್ತಿ ಮಾಡಿ ಗಂಗೊಳ್ಳಿಯಲ್ಲಿರುವ ಬ್ಯಾಂಕ್‌ಗೆ ಸಿಸಿಬಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಚೈತ್ರಾ ಮನೆಯಲ್ಲಿದ್ದ ಸುಮಾರು 65 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ ಆಕೆಯ ಬಾವ ಮ್ಯಾನೇಜರ್ ಆಗಿದ್ದ ಬ್ಯಾಂಕ್ ನಲ್ಲಿ ಇಟ್ಟಿದ್ದ 40 ಲಕ್ಷ ರೂ. ಜಪ್ತಿ ಮಾಡಲಾಗಿದೆ.
ಚೈತ್ರಾ ಕುಂದಾಪುರ ಆಪ್ತ ಗೆಳೆಯ ಶ್ರೀಕಾಂತ್ ನಾಯಕ್ ಮನೆಯಲ್ಲಿ 45 ಲಕ್ಷ ರೂ. ಜಪ್ತಿ,ಹಾಲಶ್ರೀ ಸ್ವಾಮೀಜಿ ಈಗಾಗಲೇ 50 ಲಕ್ಷ ರೂಪಾಯಿಯನ್ನು ಗೋವಿಂದ ಪೂಜಾರಿಗೆ ಹಿಂದಿರುಗಿಸಿದ್ದಾರೆ.
ಇದರಲ್ಲಿ ಎಲ್ಲವೂ ವಂಚನೆಯಲ್ಲಿ ಕೈಸೇರಿದ ಹಣವೇ ಎನ್ನುವುದು ಸ್ಪಷ್ಟವಾಗಿಲ್ಲ. ಆದರೆ, ಈ ಆರೋಪಿಗಳ ಹೆಸರಲ್ಲಿ ಮತ್ತು ಮನೆಯಲ್ಲಿ ಪತ್ತೆಯಾಗಿರುವುದರಿಂದ ಇದಕ್ಕೆ ತಳುಕು ಹಾಕಲಾಗುತ್ತದೆ.
ಹಾಲಶ್ರೀ ಹೂಡಿಕೆ:
ಹಾಲಶ್ರೀ ಸ್ವಾಮೀಜಿ ಅವರು ತಾವು ಪಡೆದ 1.5 ಕೋಟಿ ರೂ. ಹಣವನ್ನು ಭೂಮಿ ಖರೀರಿ, ಪೆಟ್ರೋಲ್ ಪಂಪ್ ಸ್ಥಾಪನೆ, ಕಾರು ಖರೀದಿಗೆ ಬಳಸಿ ಖಾಲಿ ಮಾಡಿದ್ದರು. ಕೊನೆಗೆ ಪ್ರಕರಣ ದಾಖಲಾಗುತ್ತದೆ ಎಂದಾದಾಗ ಯಾರ ಕೈಯಿಂದಲೋ ಐವತ್ತು ಲಕ್ಷ ರೂ. ಪಡೆದು ಗೋವಿಂದ ಪೂಜಾರಿಗೆ ನೀಡಿದ್ದರು.
ಇನ್ನೂ ಚೈತ್ರಾ ಕುಂದಾಪುರ ತನ್ನ ಗೆಳೆಯ ಶ್ರೀಕಾಂತ್ ನಾಯಕ್‌ಗೆ ಸೇರಿದ ಹಿರಿಯಡ್ಕದ ಜಾಗದಲ್ಲಿ ಒಂದು ಮನೆಯನ್ನು ನಿರ್ಮಾಣ ಮಾಡುತ್ತಿರುವುದಲ್ಲದೆ, ಒಂದು ಕಾರು ಕೂಡಾ ಖರೀದಿ ಮಾಡಿದ್ದಾಳೆ.