ಬೆಂಗಳೂರು,ಜೂ.21– ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಉದ್ಯಮಿಯೊಬ್ಬರಿಂದ 1.02 ಕೋಟಿ ಪಡೆದು ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗು ಆತನ ಸೋದರ ವಂಚನೆ ನಡೆಸಿರುವ ಸಂಬಂಧ ರಾಮಮೂರ್ತಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಸಹಕಾರ ನಗರದ ಎಸ್.ನಾಗೇಂದ್ರರಾವ್ ಮೋಸ ಹೋದವರು. ಈ ಸಂಬಂಧ ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಬಿಆರ್‌ಸಿ (ಹೈಸ್ಕೂಲ್) ಬಸವನಗೌಡ ಪಾಟೀಲ್ ಹಾಗು ಆತನ ಸೋದರ ಬಳ್ಳಾರಿಯ ವೆಂಕಟರೆಡ್ಡಿ ವಿರುದ್ಧ ದೂರು ನೀಡಲಾಗಿದ್ದು ರಾಮಮೂರ್ತಿ ನಗರ ಪೊಲೀಸರು ಎಫ್‌ಐಆರ್ ದಾಖಲಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.
ಕೆಲ ವರ್ಷಗಳ ಹಿಂದೆ ಸ್ನೇಹಿತರ ಮೂಲಕ ಈ ಸೋದರರು ನಾಗೇಂದ್ರರಾವ್ ಅವರಿಗೆ ಪರಿಚಯವಾಗಿದ್ದರು. ಈ ಸ್ನೇಹದಲ್ಲಿ ತಮಗೆ ಸರ್ಕಾರ ಮಟ್ಟದ ಅಧಿಕಾರಿಗಳ ಪರಿಚಯವಿದೆ ಎಂದು ಹೇಳಿ ನಾಗೇಂದ್ರರಾವ್ ಅವರ ಸಂಬಂಧಿಗಳಿಗೆ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಉದ್ಯಮಿಯಿಂದ ಹಣ ಪಡೆದು ಮೋಸ ಮಾಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಸೋದರರಿಂದ ವಂಚನೆ:
ಉದ್ಯಮಿ ನಾಗೇಂದ್ರ ರಾವ್ ಅವರು, ತಮ್ಮ ಕುಟುಂಬದ ಜತೆ ಸಹಕಾರ ನಗರದಲ್ಲಿ ನೆಲೆಸಿದ್ದಾರೆ. ಉದ್ಯಮ ಜೊತೆಗೆ ಸಾಮಾಜಿಕ ಕಾರ್ಯಗಳಲ್ಲಿ ಅವರು ತೊಡಗಿಸಿಕೊಂಡಿದ್ದಾರೆ. ಹೀಗಿರುವಾಗ ಇದೇ ವರ್ಷದ ಜನವರಿಯಲ್ಲಿ ನಾಗೇಂದ್ರರಾವ್ ಅವರನ್ನು ಭೇಟಿಯಾದ ಅವರ ಸಂಬಂಧಿಕರು, ಸರ್ಕಾರಿ ನೌಕರಿ ಕೊಡಿಸುವಂತೆ ಮನವಿ ಮಾಡಿದ್ದರು. ಆಗ ತಮ್ಮ ಸ್ನೇಹಿತರ ಮೂಲಕ ಸರ್ಕಾರಿ ನೌಕರಿ ಕೊಡಿಸುವ ಭರವಸೆ ಕೊಟ್ಟಿದ್ದರು. ಅಂತೆಯೇ ನಾಲ್ಕು ವರ್ಷಗಳಿಂದ ತಮಗೆ ಪರಿಚಯವಿದ್ದ ವೆಂಕಟರೆಡ್ಡಿ ಅವರನ್ನು ಸಂಪರ್ಕಿಸಿದ ನಾಗೇಂದ್ರರಾವ್ ಅವರು, ನಮ್ಮ ಬಂಧುವಿಗೆ ಸರ್ಕಾರಿ ಹುದ್ದೆ ಕೊಡಿಸಲು ನೆರವಾಗುವಂತೆ ಮನವಿ ಮಾಡಿದ್ದಾರೆ. ಈ ಮಾತಿಗೆ ದಾವಣೆಗೆರೆ ಜಿಲ್ಲೆ ಜಗಳೂರು ತಾಲೂಕಿನಲ್ಲಿ ಬಿಆರ್‌ಸಿ ಆಗಿರುವ ‘ನನ್ನ ಸೋದರ ಬಸವನಗೌಡ ಪಾಟೀಲ್‌ಗೆ ಸರ್ಕಾರದ ಮಟ್ಟದಲ್ಲಿ ಒಳ್ಳೆಯ ಸಂಪರ್ಕ ಇದೆ. ಆತನ ನಿಮಗೆ ಸಹಾಯ ಮಾಡುತ್ತಾನೆ. ನಿಮಗೆ ಆತನನ್ನು ಪರಿಚಯಿಸುವುದಾಗಿ ನಾಗೇಂದ್ರ ರಾವ್’ಗೆ ವೆಂಕಟರೆಡ್ಡಿ ಹೇಳಿದ್ದ.
ಕೊನೆಗೆ ರಾಮಮೂರ್ತಿ ನಗರದ ಹೋಟೆಲ್‌ನಲ್ಲಿ ನಾಗೇಂದ್ರ ಅವರನ್ನು ಸೋದರರು ಭೇಟಿಯಾಗಿ ಡೀಲ್ ಕುದುರಿಸಿದ್ದರು. ವಂಚಕ ಸೋದರರ ಮಾತು ನಂಬಿದ ರಾವ್, ಹಂತ ಹಂತವಾಗಿ ಸೋದರರ ಬ್ಯಾಂಕ್ ಖಾತೆಗಳಿಗೆ 1.02 ಕೋಟಿ ಜಮೆ ಮಾಡಿದ್ದರು. ಹಣ ಸಂದಾಯವಾದ ಬಳಿಕ ಸೋದರರು, ನಾಗೇಂದ್ರ ಅವರ ಸಂಪರ್ಕ ಕಡಿತಕೊಂಡಿದ್ದಾರೆ. ಈ ವರ್ತನೆಯಿಂದ ತಾವು ವಂಚನೆಗೊಳಗಾಗಿರುವುದು ಉದ್ಯಮಿಗೆ ಅರಿವಾಗಿದೆ. ಕೊನೆಗೆ ರಾಮಮೂರ್ತಿ ನಗರ ಠಾಣೆಯಲ್ಲಿ ಅವರು ದೂರು ದಾಖಲಿಸಿದ್ದಾರೆ ಎಂದು ಪೊಲೀಸರು ವಿವರಿಸಿದ್ದಾರೆ.
Previous Articleಕಾರು ಟ್ಯಾಂಕರ್ ಡಿಕ್ಕಿ ಐವರು ಸಾವು
Next Article ದೇಶದಲ್ಲಿ 9,923 ಜನರಿಗೆ ಕೊರೋನಾ ಸೋಂಕು, 17 ಮಂದಿ ಸಾವು